ದಿಲ್ಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಶ

Public TV
1 Min Read

ಮಾಸ್ಕೋ: ದೆಹಲಿಯಿಂದ (New Delhi) ಸ್ಯಾನ್ ಫ್ರಾನ್ಸಿಸ್ಕೋಗೆ (San Francisco) ಹೊರಟಿದ್ದ ಏರ್ ಇಂಡಿಯಾ (Air India) ವಿಮಾನದ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ರಷ್ಯಾದ (Russia) ಮಗದನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಇಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯಿದ್ದ ವಿಮಾನವನ್ನು ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು ಎಂದು ಟಾಟಾ ಗ್ರೂಪ್ ಒಡೆತನದ ಖಾಸಗಿ ವಾಹಕ ಹೇಳಿಕೆಯಲ್ಲಿ ತಿಳಿಸಿದೆ. ಏರ್ ಇಂಡಿಯಾ ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ಕರೆದೊಯ್ಯಲು ಮತ್ತೊಂದು ವಿಮಾನವು ಮುಂಬೈನಿಂದ ಮಧ್ಯಾಹ್ನ 1 ಗಂಟೆಗೆ ರಷ್ಯಾದ ಮಗದನ್‌ಗೆ ಹೊರಡಲಿದೆ ಎಂದು ಹೇಳಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಜಲಾಶಯ ಸ್ಫೋಟ – ಸಾವಿರಾರು ಮಂದಿ ಸ್ಥಳಾಂತರ

ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ರಷ್ಯಾದ ಮಗದನ್ ವಿಮಾನ ನಿಲ್ದಾಣದಿಂದ ತನ್ನ ಪ್ರಯಾಣಿಕರನ್ನು ಕರೆದೊಯ್ಯಲು ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಯವರೆಗೆ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಗದನ್‌ನ ಸ್ಥಳೀಯ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ, ಯುನೈಟೆಡ್ ಸ್ಟೇಟ್ಸ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟೇಟ್ ಡಿಪಾರ್ಟ್‌ಮೆಂಟ್ ಉಪ ವಕ್ತಾರ ವೇದಾಂತ್ ಪಟೇಲ್, ಯುಎಸ್‌ಗೆ ತೆರಳುವ ವಿಮಾನವು ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಗದನ್‌ನಲ್ಲಿ ಸಿಲುಕಿರುವ ಪ್ರಯಾಣಿಕರ ಕುರಿತು ಅಸೋಸಿಯೇಟೆಡ್‌ ಪ್ರೆಸ್‌ ವರದಿ ಮಾಡಿದೆ. 16 ವರ್ಷದ ಗಿರ್ವಾನ್ ಕಾಹ್ಮಾ ತನ್ನ ಚಿಕ್ಕಪ್ಪ ಮತ್ತು ಸಹೋದರನೊಂದಿಗೆ ಈ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಅವರು ಈಗ ಮಗದನ್‌ನಲ್ಲಿ ತಂಗಿರುವ ಹಾಸ್ಟೆಲ್‌ನಿಂದ ಹೊರಹೋಗುವುದನ್ನು ನಿರ್ಬಂಧಿಸಲಾಗಿದೆ. ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ನಿರ್ಬಂಧ ವಿಧಿಸಿರುವುದರಿಂದ ಅವರು ವಸ್ತುಗಳನ್ನು ಕೊಳ್ಳಲು ಕ್ರೆಡಿಟ್‌ ಕಾರ್ಡ್‌ ಬಳಸದಂತಾಗಿದೆ ಎಂದು ತಿಳಿಸಿದೆ.

Share This Article