ದ್ರಾವಿಡ್‍ರ ಮಾತು ನನ್ನ ಕನಸನ್ನು ನನಸು ಮಾಡಿತ್ತು: ಸಂಜು ಸ್ಯಾಮ್ಸನ್

Public TV
1 Min Read

ತಿರುವನಂತಪುರಂ: ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ‘ನನ್ನ ತಂಡದಲ್ಲಿ ಆಡುತ್ತೀಯಾ’ ಎಂದು ಕೇಳಿದ ಮಾತನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಯುವ ಆಟಗಾರ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

2013ರ ಐಪಿಎಲ್ ವೇಳೆ ದ್ರಾವಿಡ್ ಅವರು ನನ್ನ ತಂಡದಲ್ಲಿ ಆಡುತ್ತೀಯಾ ಎಂದು ಕೇಳಿದ ತಕ್ಷಣ ನನ್ನ ಹೃದಯದಲ್ಲಿ ಕೋಟಿ ವೀಣೆ ಮಿಡಿದ ಅನುಭವ ಆಗಿತ್ತು. ದಿಗ್ಗಜ ಕ್ರಿಕೆಟ್ ಆಟಗಾರ ದ್ರಾವಿಡ್ ಅವರ ಮಾತು ಹೇಳಿದ ತಕ್ಷಣ ನನ್ನ ಕನಸು ನನಸಾದ ಅನುಭವ ಆಗಿತ್ತು ಎಂದು ಸ್ಯಾಮ್ಸನ್ ಹೇಳಿದ್ದಾರೆ. ಅಂದಹಾಗೆ ದ್ರಾವಿಡ್, ಸ್ಯಾಮ್ಸನ್ ಐಪಿಎಲ್‍ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡಿದ್ದರು.

ವಿಶ್ವ ಕ್ರಿಕೆಟ್‍ನಲ್ಲಿ ದ್ರಾವಿಡ್ ಅವರಂತಹ ವ್ಯಕ್ತಿ ಮತ್ತೊಬ್ಬರು ಇರುವುದಿಲ್ಲ. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ತಕ್ಕ ಪರಿಹಾರ ಮಾರ್ಗವನ್ನು ನೀಡುತ್ತಿದ್ದರು. ತಂಡದ ಎಲ್ಲಾ ಆಟಗಾರರಿಗೂ ಅವರು ಯಾವುದೇ ಸಮಯದಲ್ಲಾದರೂ ಲಭ್ಯರಾಗಿರುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಜೋಸ್ ಬಟ್ಲರ್ ಯಾವ ರೀತಿ ತಯಾರಿ ನಡೆಸುತ್ತಾರೆ ಎಂದು ಗಮನಿಸುವ ಅವಕಾಶ ಲಭಿಸಿತ್ತು ಎಂದು ಸ್ಯಾಮ್ಸನ್ ವಿವರಿಸಿದ್ದಾರೆ.

ಟೀಂ ಇಂಡಿಯಾ ತಂಡಕ್ಕೆ ಆಯ್ಕೆ ಆಗಿದ್ದು ಸಂತಸ ತಂದಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಟಗಾರರೊಂದಿಗೆ ಆಡುವುದು ಅತ್ಯುತ್ತಮ ಅನುಭವ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಸೂಪರ್ ಓವರ್ ವೇಳೆ ನನ್ನ ಮೇಲೆ ಭರವಸೆ ಇಟ್ಟು ಅವಕಾಶ ನೀಡಿದ್ದರು. ಅವರೊಂದಿಗೆ ನನ್ನನ್ನು ಮ್ಯಾಚ್ ವಿನ್ನರ್ ಎಂದು ಪರಿಗಣಿಸಿದ್ದು ಸಂತಸ ತಂದಿದೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.

25 ವರ್ಷ ವಯಸ್ಸಿನ ಸ್ಯಾಮ್ಸನ್ ಐಪಿಎಲ್‍ನಲ್ಲಿ 93 ಪಂದ್ಯಗಳನ್ನು ಆಡಿ 2,209 ರನ್ ಗಳಿಸಿದ್ದಾರೆ. ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‍ನಲ್ಲಿ ಸ್ಯಾಮ್ಸನ್ ತೋರಿದ ಪ್ರದರ್ಶನ ಟೀಂ ಇಂಡಿಯಾಗೆ ಆಯ್ಕೆ ಆಗಲು ಪ್ರಮುಖ ಕಾರಣವಾಗಿತ್ತು. ಅಲ್ಲದೇ 2020ರ ಟಿ20 ವಿಶ್ವಕಪ್ ತಂಡದ ಆಯ್ಕೆಯ ರೇಸ್‍ನಲ್ಲೂ ತಂದು ನಿಲ್ಲಿಸಿದೆ.

Share This Article
Leave a Comment

Leave a Reply

Your email address will not be published. Required fields are marked *