ಮಗಳ ಸಾವಿನ ಸುದ್ದಿ ಕೇಳಿಯೂ ಅಪರಿಚಿತ ವ್ಯಕ್ತಿಯನ್ನು ಬದುಕಿಸಿದ ಪೊಲೀಸ್ ಪೇದೆ

Public TV
2 Min Read

ಲಕ್ನೋ: ಪೇದೆಯೊಬ್ಬರು ಮಗಳ ಸಾವಿನ ಸುದ್ದಿ ಕೇಳಿಯೂ ಅಪರಿಚಿತ ವ್ಯಕ್ತಿಯ ಪ್ರಾಣ ಕಾಪಾಡಲು ಧಾವಿಸಿದ್ದು, ಈಗ ಅವರ ಕಾರ್ಯಕ್ಕೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉತ್ತರ ಪ್ರದೇಶದ ಮೀರತ್ ನ ಮುಖ್ಯಪೇದೆ ಭೂಪೇಂದ್ರ ತೋಮರ್ ಅವರು ತಮ್ಮ ಕರ್ತವ್ಯ ನಿಷ್ಠೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ತಮ್ಮ ಮಗಳ ಸಾವಿನ ಸುದ್ದಿ ಕೇಳಿದ ನಂತರವೂ ಅಪರಿಚಿತ ವ್ಯಕ್ತಿಯನ್ನು ಕಾಪಾಡಿದ್ದಾರೆ.

ನಡೆದುದ್ದೇನು?: ತೋಮರ್ ಫೆಬ್ರವರಿ 23ರಂದು ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದರು. ಆಗ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬ ಚಾಕು ಇರಿತಕ್ಕೊಳಗಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದಾನೆ ಎಂದು ಸಾರ್ವಜನಿಕರಿಂದ ಕರೆ ಬಂದಿತ್ತು. ತಕ್ಷಣ ಅವರು ಮತ್ತು ಅವರ ತಂಡ ಹೋಗಲು ಸಿದ್ಧವಾಗುತ್ತಿದ್ದಾಗ ತೋಮರ್ ಗೆ ಮತ್ತೊಂದು ಫೋನ್ ಕಾಲ್ ಬಂದಿದ್ದು, ತೋಮರ್ ಮಗಳು ಸ್ನಾನದ ಕೋಣೆಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು.

ಆ ಸುದ್ದಿ ಕೇಳಿಯೂ, ದುಃಖದ ಸನ್ನಿವೇಶದಲ್ಲೂ ಕರ್ತವ್ಯವನ್ನು ಮರೆಯದೆ ತೋಮರ್ ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಕಾಪಾಡಲು ಸ್ಥಳಕ್ಕೆ ಧಾವಿಸಿದರು. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಿ ಆತನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ ನಂತರ ಮನೆಗೆ ತೆರಳಿದರು.

ತೋಮರ್ ಮಗಳಿಗೆ 27 ವರ್ಷ ವಯಸ್ಸಾಗಿತ್ತು. ಒಂದು ವರ್ಷದ ಹಿಂದಷ್ಟೆ ಮದುವೆಯಾಗಿದ್ದರು. ಅವರು ಮೀರತ್ ಬಕ್ಸಾರ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಶೌಚಕ್ಕೆ ಹೋಗಿದ್ದಾಗ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸತ್ತಿದ್ದು ಮಗಳೇ ಆದರೂ, ಆ ಸಮಯದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಬದುಕಿಸುವುದೇ ತಮಗೆ ಮುಖ್ಯವಾಗಿತ್ತು. ಆದ್ದರಿಂದ ನಾನು ಹೋಗಿ ಅವರನ್ನು ಕಾಪಾಡಿದ್ದೇನೆ. ನಾನು ಅಸಾಧಾರಣವಾಗಿ ಏನನ್ನೋ ಮಾಡಿದ್ದೇನೆ ಎಂದು ನಾನು ಯೋಚಿಸುವುದಿಲ್ಲ ಎಂದು ತೋಮರ್ ಹೇಳಿದ್ದಾರೆ.

ತೋಮರ್ ಅವರ ಕರ್ತವ್ಯ ನಿಷ್ಠಗಾಗಿ ಅವರನ್ನು ಸನ್ಮಾನಿಸಲಾಗಿದೆ. ಜೊತೆಗೆ ಇತ್ತೀಚೆಗೆ ಸಹರಾನ್ಪುರದ ಡಿಐಜಿ ಶರದ್ ಸಚನ್ ಮತ್ತು ಎಸ್‍ಎಸ್‍ಪಿ ಬಬ್ಲೂ ಕುಮಾರ್ ಕೂಡ ತೋಮರ್ ಅವರಿಗೆ ಸನ್ಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸದ್ಯ ದುಃಖದಲ್ಲಿರೋ ತೋಮರ್ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಪೊಲೀಸ್ ನಿರ್ದೇಶಕ ಒ.ಪಿ.ಸಿಂಗ್ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *