ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

Public TV
2 Min Read

ನವದೆಹಲಿ: ಫೋರ್ಬ್ಸ್ ಇಂಡಿಯಾ 2017ರ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬಾಲಿವುಡ್‍ನ ಸಲ್ಮಾನ್ ಖಾನ್ ಸತತ ಎರಡನೇ ಬಾರಿಗೆ 232.83 ಕೋಟಿ ರೂ. ಆದಾಯ ಹೊಂದುವ ಮೂಲಕ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಸತತ ಎರಡು ವರ್ಷಗಳಿಂದ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲ ಸ್ಥಾನ ಪಡೆದಿದ್ದು, ನಂತರದ ಸ್ಥಾನದಲ್ಲಿ ಶಾರೂಖ್ ಖಾನ್ 170.50 ಕೋಟಿ ರೂ. ಆದಾಯ ಗಳಿಸುವುದರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಮಾನ್, ಶಾರೂಖ್ ನಂತರದ ಸ್ಥಾನವನ್ನು 100.72 ಕೋಟಿ ರೂ. ಆದಾಯದೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಟಾಪ್ ಮೂರು ಸ್ಥಾನಗಳನ್ನು ಪಡೆದಿರುವ ಮೂವರ ಒಟ್ಟು ಆದಾಯ ಕಳೆದ ವರ್ಷದ ಆದಾಯಕ್ಕಿಂತ ಶೇ.20 ರಷ್ಟು ಕಡಿಮೆಯಾಗಿದೆ ಎಂಬುವುದು ಗಮನಾರ್ಹ ವಿಷಯವಾಗಿದ್ದು, ಕಳೆದ ವರ್ಷದಲ್ಲಿ ಟಾಪ್ ಮೂವರು ಸೆಲೆಬ್ರಿಟಿಗಳ ಒಟ್ಟು ಆದಾಯ 626.52 ಕೋಟಿ ರೂ. ಇತ್ತು, ಆದರೆ ಈ ಬಾರಿ 504.05 ಕೋಟಿ ರೂ. ಒಟ್ಟು ಆದಾಯಕ್ಕೆ ಇಳಿಕೆಯಾಗಿದೆ.

ನಂತರದ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಅಕ್ಷಯ್ ಕುಮಾರ್ 98.25 ಕೋಟಿ ರೂ. ಹಾಗೂ ಭಾರತ ರತ್ನ ಸಚಿನ್ ತೆಂಡೂಲ್ಕರ್ 82.50 ಕೋಟಿ ರೂ. ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಬಾಲಿವುಡ್ ಮಿಸ್ಟರ್ ಫರ್ಪೆಕ್ಟ್ ಅಮಿರ್ ಖಾನ್ 68.75 ಕೋಟಿ ರೂ. ಗಳಿಸಿ ಆರನೇ ಸ್ಥಾನದಲ್ಲಿದ್ದರೆ ಹಾಗೂ ತಮ್ಮ ನಟನೆಯ ಮೂಲಕ ಹಾಲಿವುಡ್ ನಲ್ಲಿ ಮಿಂಚು ಹರಿಸಿರುವ ಬೆಡಗಿ ಪ್ರಿಯಾಂಕ ಚೋಪ್ರಾ 68 ಕೋಟಿ ರೂ. ಗಳಿಸುವ ಮೂಲಕ ಏಳನೇ ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ 63.77 ಕೋಟಿ ರೂ. ಗಳಿಸಿ ಎಂಟನೇ ಸ್ಥಾನ ಪಡೆದಿದ್ದಾರೆ. ಹೃತಿಕ್ ರೋಷನ್ 63.12 ಕೋಟಿ ರೂ. ಗಳಿಸಿ 9ನೇ ಸ್ಥಾನ ಹಾಗೂ ರಣವೀರ್ ಸಿಂಗ್ ಗೆ 62.63 ಕೋಟಿ ರೂ. ಆದಾಯದೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.

ಈ ವರ್ಷ ಶೇಕಡಾವಾರು ಆದಾಯ ಪ್ರಮಾಣ ಏರಿಕೆಯಾದ ಸೆಲೆಬ್ರಿಟಿಗಳ ಪೈಕಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಮೊದಲ ಸ್ಥಾನ ಸಿಕ್ಕಿದ್ದು, 57.25 ಕೋಟಿ. ರೂ ಆದಾಯ ಹೊಂದುವ ಮೂಲಕ ಪಟ್ಟಿಯಲ್ಲಿ 13 ಸ್ಥಾನ ಪಡೆದಿದ್ದಾರೆ. 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ನಂತರ ಹಲವು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಸಿಂಧು ಆದಾಯ ಈ ವರ್ಷ 17 ಪಟ್ಟು ಏರಿಕೆಯಾಗಿದೆ.

ಟಾಪ್ ಟೆನ್ ಸೆಲೆಬ್ರಿಟಿಗಳು
ಸಲ್ಮಾನ್ ಖಾನ್ – 232.83 ಕೋಟಿ. ರೂ., ವಯಸ್ಸು 51

ಶಾರುಕ್ ಖಾನ್ – 170.50 ಕೋಟಿ. ರೂ., ವಯಸ್ಸು 52

ವಿರಾಟ್ ಕೊಹ್ಲಿ _ 100.72 ಕೋಟಿ. ರೂ., ವಯಸ್ಸು 29

ಅಕ್ಷಯ್ ಕುಮಾರ್ – 98.25 ಕೋಟಿ. ರೂ., ವಯಸ್ಸು 50

ಸಚಿನ್ ತೆಂಡೂಲ್ಕರ್ – 82.50 ಕೋಟಿ. ರೂ., ವಯಸ್ಸು 44

ಅಮೀರ್ ಖಾನ್ – 68.75 ಕೋಟಿ. ರೂ., ವಯಸ್ಸು 52

ಪ್ರಿಯಾಂಕ ಚೋಪ್ರಾ – 68 ಕೋಟಿ. ರೂ., ವಯಸ್ಸು 35

ಎಂ.ಎಸ್. ಧೋನಿ – 63.77 ಕೋಟಿ. ರೂ., ವಯಸ್ಸು 36

ಹೃತಿಕ್ ರೋಷನ್ – 63.12 ಕೋಟಿ. ರೂ., ವಯಸ್ಸು 43

ರಣವೀರ್ ಸಿಂಗ್ – 62.63 ಕೋಟಿ. ರೂ., ವಯಸ್ಸು 32

 

Share This Article
Leave a Comment

Leave a Reply

Your email address will not be published. Required fields are marked *