ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಗೆ ಮತ್ತೆ ಸಂಕಷ್ಟ

Public TV
2 Min Read

ಮುಂಬೈ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಿಲುಕಿ ಪರದಾಡಿದ್ದ ಬಾಲಿವುಡ್ ಭಾಯ್ ಜಾನ್ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು. ಮುಂಬೈನ ಪಾನ್ವಾಲಾದಲ್ಲಿರೋ ಬಾಲಿವುಡ್ ನಟರ ಫಾರ್ಮ್ ಹೌಸ್ ನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ ಸಲ್ಮಾನ್ ಖಾನ್ ಜೊತೆ ಕುಟುಂಬದ 5 ಮಂದಿಯ ವಿರುದ್ಧ ನೋಟಿಸ್ ಜಾರಿಯಾಗಿದೆ.

ಮಹಾರಾಷ್ಟ್ರದ ಅರಣ್ಯ ಇಲಾಖೆ ಜೂನ್ 9ರಂದು ಈ ನೋಟಿಸ್ ಜಾರಿ ಮಾಡಿದೆ. ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ರಾಯ್ ಗಡ್ ಜಿಲ್ಲೆಯ ಪಕ್ಕದ ಪಾನ್ವಾಲಾದಲ್ಲಿ ಆಸ್ತಿ ಹೊಂದಿದ್ದು, ಈತ ಬಾಲಿವುಡ್ ನಟ ತಂದೆ ಸಲೀಂ ಖಾನ್ ವಿರುದ್ಧ ದೂರು ನೀಡಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೋಟಿಸ್ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ಪ್ರತಿಕ್ರಿಯಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಪಾನ್ವಾಲಾ ವಾಜಪುರ ಪ್ರದೇಶದಲ್ಲಿ ಅರ್ಪಿತಾ ಫಾರ್ಮ್ಸ್ ಆಸ್ತಿಯ ಮಾಲೀಕತ್ವದ ಹಕ್ಕುಗಳು ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ ಹಾಗೂ ಸಹೋದರರಾದ ಅರ್ಬಾಜ್, ಸೊಹೈಲ್ ಮತ್ತು ತಾಯಿ ಹೆಲೆನ್ ಅವರೊಂದಿಗೆ ಉಳಿದಿವೆ ಅಂತ ನೋಟಿಸ್ ನಲ್ಲಿ ಹೇಳಲಾಗಿದೆ. ಏಳು ದಿನಗಳ ಬಳಿಕ ಖಾನ್ ಕುಟುಂಬದ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ಅವರನ್ನು ಕೇಳಿದಾಗ, ಕಟ್ಟಡ ನಿರ್ಮಾಣದ ಕೆಲಸ ಮಾಡುವ ಮೊದಲು ಕಾನೂನು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಎಲ್ಲಾ ವಿನ್ಯಾಸಗಳನ್ನು ಕ್ರಮಬದ್ಧಗೊಳಿಸಲಾಗಿದ್ದು, ಅಗತ್ಯವಿರುವ ಶುಲ್ಕಗಳನ್ನು ಕೂಡ ಪಾವತಿಸಲಾಗಿದೆ. ಹೀಗಾಗಿ ಇದು ಅಕ್ರಮ ನಿರ್ಮಾಣ ಅಲ್ಲ ಎಂಬುದಾಗಿ ತಿಳಿಸಿದ್ದಾರೆ.

ಅರ್ಪಿತಾ ಫಾರ್ಮ್ಸ್ ನಿರ್ಮಾಣದ ವೇಳೆ ಸಿಮೆಂಟ್ ಹಾಗೂ ಕಾಂಕ್ರೀಟ್ ಅನ್ನು ಅಕ್ರಮವಾಗಿ ಬಳಸುವ ಮೂಲಕ ಅರಣ್ಯ ಕಾಯಿದೆಯನ್ನು ಉಲ್ಲಂಘಿಸಿರುವುದಾಗಿ 2017ರ ನವೆಂಬರ್ 21ರಂದು ನೊಂದಾಯಿಸಲ್ಪಟ್ಟಿದೆ. ಈ ಫಾರ್ಮ್ ಹೌಸ್ ಸಲ್ಮಾನ್ ಖಾನ್, ಅಲ್ವಿರಾ ಖಾನ್, ಅರ್ಬಾಜ್ ಖಾನ್, ಅರ್ಪಿತಾ ಖಾನ್, ಹೆಲೆನ್ ಖಾನ್ ಹಾಗೂ ಸೊಹೈಲ್ ಖಾನ್ ಅವರಿಗೆ ಸೇರಿದ್ದಾಗಿರುವುದಾಗಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ನಿಮ್ಮ ಕುಟುಂಬ ಇದರಲ್ಲಿ ಭಾಗಿಯಾಗಿರುವುದನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ ಹಾಗೂ ಯಾಕೆ ಸ್ಪಷ್ಟೀಕರಣ ನೀಡುತ್ತಿಲ್ಲ ಎಂಬುದಾಗಿ ಪ್ರಶ್ನಿಸಲಾಗಿದೆ. ಒಂದು ವೇಳೆ ನೀವು ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಣೆ ನೀಡದಿದ್ದಲ್ಲಿ ಇಡೀ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆಯನ್ನು ಕೂಡ ನೋಟಿಸ್ ನಲ್ಲಿ ನೀಡಲಾಗಿದೆ.

ದೂರು ಸ್ವೀಕರಿಸಿದ ತಕ್ಷಣ ನಾವು ವ್ಯಕ್ತಿಗೆ ಆತನ ನಿಲುವನ್ನು ವಿವರಿಸಲು ಅವಕಾಶ ಮಾಡಿಕೊಡಲೆಂದು ಸೂಚನೆ ನೀಡುತ್ತೇವೆ. ಆ ಸಂದರ್ಭದಲ್ಲಿ ಆತ ತನ್ನ ನಿಲುವನ್ನು ಇಂಗಿತ ವ್ಯಕ್ತಪಡಿಸಿದ್ರೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *