ಘೀಳಿಡಲು ರೆಡಿಯಾದ ‘ಸಲಗ’ದೊಂದಿಗೆ ಗುಟುರು ಹಾಕಿತು ಟಗರು ಟೀಮ್!

Public TV
2 Min Read

ಬೆಂಗಳೂರು: ಕಳೆದ ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿದ್ದ ಚಿತ್ರ ದುನಿಯಾ ಸೂರಿ ನಿರ್ದೇಶನದ ಟಗರು. ತಾಂತ್ರಿಕವಾಗಿಯೂ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಭಾರೀ ಸದ್ದು ಮಾಡಿದ್ದ ಈ ಚಿತ್ರದ ತಂಡವೇ ಮತ್ತೊಂದು ಚಿತ್ರಕ್ಕೆ ಸಾಥ್ ನೀಡಿದೆ ಅಂದರೆ ಅದರ ಬಗ್ಗೆ ಕುತೂಹಲ ಹುಟ್ಟದಿರಲು ಸಾಧ್ಯವೇ? ಸದ್ಯಕ್ಕೆ ದುನಿಯಾ ವಿಜಯ್ ನಾಯಕನಾಗಿ ನಟಿಸುತ್ತಿರೋ ಸಲಗ ಚಿತ್ರವೂ ಕೂಡಾ ಇಂಥಾ ಕಾರಣದಿಂದಲೇ ಮತ್ತೆ ಸದ್ದು ಮಾಡಿದೆ!

ಸಲಗ ಎಂಬ ಶೀರ್ಷಿಕೆಯಲ್ಲಿಯೇ ಒಂದು ಫೋರ್ಸ್ ಇದೆ. ಅದು ದುನಿಯಾ ವಿಜಯ್ ಅವರ ಇಮೇಜಿಗೆ ಹೇಳಿ ಮಾಡಿಸಿದಂತಿದೆ ಅನ್ನೋ ವಿಚಾರ ಆರಂಭದಿಂದಲೇ ಕೇಳಿ ಬಂದಿತ್ತು. ಅದಾದ ನಂತರದಲ್ಲಿ ಈ ಸಿನಿಮಾ ಬಗ್ಗೆ ಗಂಭೀರವಾಗಿ ತಯಾರಿ ನಡೆಸಿದ್ದ ವಿಜಯ್ ಅವರು ಇದೀಗ ಎಲ್ಲವನ್ನೂ ಅಂತಿಮ ಹಂತಕ್ಕೆ ತಂದಿದ್ದಾರೆ. ಟಗರು ಚಿತ್ರತಂಡ ಸಲಗಕ್ಕೆ ಸಾಥ್ ನೀಡಿರೋ ರೋಚಕ ಸುದ್ದಿಯೊಂದರ ಮೂಲಕ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ.

ಅಂದಹಾಗೆ, ನಿರ್ದೇಶಕ ಸೂರಿಯವರನ್ನು ಹೊರತು ಪಡಿಸಿ ಒಂದಿಡೀ ಟಗರು ಟೀಮು ಸಲಗ ಚಿತ್ರವನ್ನು ರೂಪಿಸಲು ಪಣ ತೊಟ್ಟ ನಿಂತಿದೆ. ಟಗರು ಚಿತ್ರಕ್ಕೆ ಹೊಸ ಶೈಲಿಯ ಸಂಭಾಷಣೆ ಬರೆದಿದ್ದ ಮಾಸ್ತಿ ಮಂಜು, ಅಭಿ ಮಲ್ಲ ಸೇರಿದಂತೆ ಪ್ರತಿಭಾವಂತರ ದಂಡು ಸಲಗಕ್ಕೆ ಸಾಥ್ ನೀಡಿದೆ. ವಿಶೇಷವೆಂದರೆ ಟಗರು ನಿರ್ಮಾಪಕರಾಗಿದ್ದ ಕೆ.ಪಿ ಶ್ರೀಕಾಂತ್ ಅವರೇ ಸಲಗಕ್ಕೂ ಬಂಡವಾಳ ಹೂಡಲು ಮುಂದಾಗಿದ್ದಾರೆ. ಯಾವುದೇ ಚಿತ್ರ ಮಾಡುವಾಗಲೂ ಕಥೆಯೂ ಸೇರಿದಂತೆ ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲಿಸೋ ಶ್ರೀಕಾಂತ್ ಅವರಿಗೆ ಸಲಗದ ಕಥೆ ತುಂಬಾ ಹಿಡಿಸಿದೆ. ಪಟ್ಟಾಗಿ ಪರಿಶ್ರಮ ಹಾಕಿದರೆ ಟಗರು ಚಿತ್ರದಂಥಾದ್ದೇ ಭರಪೂರ ಯಶಸ್ಸನ್ನು ಸಲಗವೂ ತನ್ನದಾಗಿಸಿಕೊಳ್ಳಲಿದೆ ಎಂಬ ಭರವಸೆಯೂ ಶ್ರೀಕಾಂತ್ ಅವರಿಗಿದೆ.

ಡಾಲಿ, ಕಾಕ್ರೋಚ್ ಪಾತ್ರಧಾರಿಗಳೂ ಇರುತ್ತಾರೆ!: ಹಾಗಾದ್ರೆ, ಟಗರು ಚಿತ್ರದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಪಾತ್ರಗಳಲ್ಲಿ ಮಿಂಚಿದ್ದ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದರೂ ಸಲಗದಲ್ಲಿರುತ್ತಾರಾ ಎಂಬ ಪ್ರಶ್ನೆ ಕಾಡುತ್ತೆ. ಅದರಲ್ಲಿಯೂ ಬ್ರ್ಯಾಂಡ್ ಆಗಿ ಬಿಟ್ಟಿದ್ದ ಡಾಲಿ ಮತ್ತು ಕಾಕ್ರೋಚ್ ಪಾತ್ರಧಾರಿಗಳಾಗಿದ್ದ ಧನಂಜಯ್ ಮತ್ತು ಸುಧಿಯಂಥವರೂ ಜೊತೆಯಾಗ್ತಾರಾ ಎಂಬ ಕುತೂಹಲವೂ ಕಾಡುತ್ತೆ. ಇದಕ್ಕೆ ಸಿಕ್ಕ ಉತ್ತರ ಪ್ರೇಕ್ಷಕರನ್ನು ಥ್ರಿಲ್ ಆಗಿಸುವಂತಿದೆ. ಯಾಕಂದ್ರೆ, ಸಲಗ ಚಿತ್ರದಲ್ಲಿಯೂ ಧನಂಜಯ್ ಮತ್ತು ಸುಧಿ ಪಾತ್ರ ನಿರ್ವಹಿಸಲಿದ್ದಾರೆ. ಆ ಪಾತ್ರಗಳೂ ಕೂಡಾ ಟಗರು ಪಾತ್ರಗಳಂತೆಯೇ ತೀರಾ ಭಿನ್ನವಾಗಿರಲಿವೆ!

ಇನ್ನುಳಿದಂತೆ ಟಗರುವಿನಂಥಾ ಸೂಪರ್ ಹಿಟ್ ಚಿತ್ರದ ತಂಡವೇ ತಮ್ಮ ಚಿತ್ರಕ್ಕೆ ಸಾಥ್ ನೀಡಿರೋದರಿಂದ ದುನಿಯಾ ವಿಜಯ್ ಕೂಡಾ ಖುಷಿಗೊಂಡಿದ್ದಾರೆ. ಅದ್ಭುತವಾದೊಂದು ಕಥೆಯ ಮೂಲಕ ತೆರೆ ಮೇಲೆ ಬರುವ ಭರವಸೆಯ ಮಾತುಗಳನ್ನೂ ಅವರಾಡಿದ್ದಾರೆ. ಇನ್ನೂ ಮುಖ್ಯ ಸಂಗತಿಯೆಂದರೆ, ಟಗರು ಚಿತ್ರದ ಮೂಲಕ ಭಿನ್ನವಾದ ಸಂಗೀತದ ತರಂಗಗಳನ್ನೆಬ್ಬಿಸಿದ್ದ ಚರಣ್ ರಾಜ್ ಸಲಗಕ್ಕೆ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿ ಹೊಸ ಟ್ರೆಂಡ್ ಸೆಟ್ ಮಾಡಲು ತಯಾರಿ ಆರಂಭಿಸಿದ್ದಾರೆ.

ಆದರೆ ಸಲಗ ಚಿತ್ರದ ನಿರ್ದೇಶಕರು ಯಾರೆಂಬುದನ್ನು ಮಾತ್ರ ಗೌಪ್ಯವಾಗಿಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರತಂಡ ಅದನ್ನೂ ರಿವೀಲ್ ಮಾಡಲಿದೆ. ಇದೀಗ ಭರದಿಂದ ಸಲಗಕ್ಕಾಗಿ ತಯಾರಿಗಳು ನಡೆಯುತ್ತಿವೆ. ಈ ತಿಂಗಳಲ್ಲಿಯೇ ಎಲ್ಲ ಪೂರ್ವಭಾವಿ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡು ಮುಂದಿನ ತಿಂಗಳಿಂದ ಸಲಗ ಚಿತ್ರೀಕರಣ ಶುರುವಾಗೋ ಲಕ್ಷಣಗಳಿವೆ.

Share This Article
Leave a Comment

Leave a Reply

Your email address will not be published. Required fields are marked *