ಕಾರವಾರದಲ್ಲಿ ದಿಢೀರ್ ಬಂದ್- ನೂರಕ್ಕೂ ಹೆಚ್ಚು ಮೀನುಗಾರರ ಬಂಧನ

Public TV
4 Min Read

ಕಾರವಾರ: ಬಹು ನಿರೀಕ್ಷಿತ ಸಾಗರ ಮಾಲಾ ಯೋಜನೆಯ ಮೊದಲ ಹಂತದ ಕಾಮಗಾರಿಯನ್ನು ಕಾರವಾರ ವಾಣಿಜ್ಯ ಬಂದರಿನಲ್ಲಿ ಪ್ರಾರಭಿಸಿರುವುದನ್ನು ವಿರೋಧಿಸಿ ಇಂದು ಮೀನುಗಾರ ಮುಖಂಡರು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ನಿರತ ಮೀನುಗಾರ ಮುಖಂಡರು ಸೇರಿ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದರು. ಪೊಲೀಸರು ಪ್ರತಿಭಟನಾ ನಿರತ ಮೀನುಗಾರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಮೀನುಗಾರರು ಕಾರವಾರ ನಗರದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

ಮುತ್ತಿಗೆ ಹಾಕಿದ ಮಹಿಳಾ ಮೀನುಗಾರರು: ಪ್ರತಿಭಟನಾ ನಿರತ ಮೀನುಗಾರರನ್ನು ಬಂಧಿಸುತ್ತಿದಂತೆ ನೂರಾರು ಮಹಿಳಾ ಮೀನುಗಾರರು ಕಾರವಾರ ವಾಣಿಜ್ಯ ಬಂದರಿನ ಕಾಮಗಾರಿ ನಡೆಸುತ್ತಿರುವ ಸ್ಥಳಕ್ಕೆ ಮುತ್ತಿಗೆ ಹಾಕಿದರು. ಈ ವೇಳೆ ಎಲ್ಲಾ ಮಹಿಳಾ ಮೀನುಗಾರರನ್ನು ಬಂಧಿಸಲಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ಬಂದೋಬಸ್ತ್ ನಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಯ್ತು.

ತೀವ್ರ ವಿರೋಧದ ನಡುವೆಯೇ ಬಂದರು ವಿಸ್ತರಣೆಯ 126 ಕೋಟಿ ರೂ ನ ಜಟ್ಟಿ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಮೀನುಗಾರರು ಇದಕ್ಕೆ ಅಡ್ಡಿಪಡಿಸುವ ಕಾರಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಹೋರಾಟ ಯಾಕೆ? ಮುಂದಿನ ನಡೆ ಏನು?
ಕಳೆದ ನಾಲ್ಕು ತಿಂಗಳಿಂದ ಮೀನುಗಾರರು ಸಾಗರ ಮಾಲಾ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ಯೋಜನೆಯಿಂದಾಗಿ ಮೀನುಗಾರರು ತಮ್ಮ ಸ್ಥಳ ಕಳೆದುಕೊಳ್ಳುವ ಜೊತೆ ಸಂಪ್ರದಾಯಿಕ ಮೀನುಗಾರಿಕೆಗೆ ಹಿನ್ನಡೆ ಆಗಲಿದೆ. ಮೀನುಗಾರರು ತಮ್ಮ ಮೂಲ ಸ್ಥಳವನ್ನು ಕಳೆದುಕೊಳ್ಳಲಿದ್ದು ಕಾರವಾರದ ಕಡಲತೀರ ಸಂಪೂರ್ಣ ಬದಲಾಗಿ ಮೂಲ ರೂಪ ಕಳೆದುಕೊಳ್ಳಲಿದೆ. ಯೋಜನೆಯಿಂದ ಪರಿಸರಕ್ಕೆ ಹಾನಿ, ಈ ಯೋಜನೆಯಿಂದ ಮೀನುಗಾರರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂಬುವುದು ಮೀನುಗಾರರ ಆತಂಕವಾಗಿದೆ.

ಹೀಗಾಗಿ ಹಲವು ಬಾರಿ ಬಂದರು ಇಲಾಖೆ ಹಾಗೂ ಬಂದರು ಸಚಿವರಿಗೆ ಮನವಿ ಸಲ್ಲಿಸುವ ಜೊತೆಗೆ ಮಾತೂಕತೆ ಸಹ ನಡೆದಿತ್ತು. ಆದರೇ ಹಣ ಮಂಜೂರಾದ್ದರಿಂದ ಕಾಮಗಾರಿ ಪ್ರಾರಂಭಿಸಲು ಬಂದರು ಇಲಾಖೆ ಪೊಲೀಸ್ ಇಲಾಖೆಯ ಬಂದೋಬಸ್ತಿನಲ್ಲಿ ಕೆಲಸ ಪ್ರಾರಂಭಿಸಿದೆ.

ಇನ್ನು ಹಲವು ತಿಂಗಳಿಂದ ಮೀನುಗಾರಿಕಾ ಇಲಾಖೆಗೆ ಮನವಿ ನೀಡಿ ಹೋರಾಟ ನೆಡಸಿದರೂ ಕಾಮಗಾರಿ ಪ್ರಾರಂಭಿಸಿ, ಹೋರಾಟಗಾರರನ್ನು ಬಂಧಿಸಲಾಗಿದೆ. ಈಗ ಚಿಕ್ಕದಾಗಿ ಹೋರಾಟ ಮಾಡಿದ್ದೇವೆ. ಮುಂದೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಇಂದಿನಿಂದಲೇ ನಿರಂತರ ಹೋರಾಟ ಮುಂದುವರಿಯಲಿದೆ. ಕಾಮಗಾರಿ ಸ್ಥಗಿತಗೊಳಿಸಿ ಯೋಜನೆ ಕೈ ಬಿಡದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಮೀನುಗಾರ ಸಂಘಟನೆ ನೀಡಿದ್ದು ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದೆ.

ಏನಿದು ಸಾಗರ ಮಾಲ ? ಯೋಜನೆ ರೂಪರೇಷೆ ಏನು?
ಸಾಗರ ಮಾಲಾ ಯೋಜನೆಯು ಬಂದರು ವಿಸ್ತರಣೆಯಾಗಿದ್ದು, ವಾಣಿಜ್ಯ ಬಂದರನ್ನು ರಾಷ್ಟ್ರ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆಯಡಿ ಹಣ ಬಿಡುಗಡೆ ಮಾಡಿದೆ. ಸಾಗರ ಮಾಲಾ ಮೂಲಕ ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ.

ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆಗೆ ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.

5 ಹೆಚ್ಚುವರಿ ಹಡಗು ನಿಲ್ಲುವ ಹಡಗುಕಟ್ಟೆ:
ಎರಡನೇ ಹಂತದ ಕಾಮಗಾರಿಯಿಂದ ಐದು ಹೆಚ್ಚುವರಿ ಹಡಗುಗಳನ್ನು ನಿಲ್ಲಿಸಲು ಅನುಕೂಲವಾಗಲಿದೆ. ಎರಡನೇ ಹಂತದ ವಿಸ್ತರಣೆ ಯೋಜನೆಯಂತೆ ಒಟ್ಟು 1,508 ಮೀಟರ್ ಉದ್ದದಷ್ಟು ಹಡಗುಕಟ್ಟೆ ನಿರ್ಮಿಸಲು ನೀಲ ನಕ್ಷೆ ತಯಾರಿಸಲಾಗಿದೆ. ಇದಕ್ಕಾಗಿ ಕಡಲತೀರದ ಮೇಲಿನ ಉದ್ಯಾನದ ಸಮೀಪದಿಂದ ಪೂರ್ವದೆಡೆಗೆ 1160 ಮೀಟರ್‍ನಷ್ಟು ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

 

ಈಗಾಗಲೇ ಮಣ್ಣು ಪರೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಸದ್ಯ 2017-18 ನೇ ಸಾಲಿನ ಬಜೆಟ್‍ನಲ್ಲಿ ಬಿಡುಗಡೆಯಾದ 125 ಕೋಟಿ ರೂ. ಹಣದಲ್ಲಿ 820 ಮೀಟರ್ ಉದ್ದದ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಉಳಿದ ಹಣ ಬಿಡುಗಡೆಯಾದ ನಂತರ ಬಾಕಿ ಕಾಮಗಾರಿ ನಡೆಸಲಾಗುತ್ತದೆ. ತಡೆಗೋಡೆ ಸುಮಾರು 17 ರಿಂದ 10 ಮೀಟರ್ ಅಗಲಕ್ಕೆ ಸಮುದ್ರ ಮಟ್ಟದಿಂದ ನಾಲ್ಕೈದು ಮೀಟರ್‍ನಷ್ಟು ಎತ್ತರಕ್ಕೆ ನಿರ್ಮಾಣವಾಗಲಿದೆ.

ವಾಣಿಜ್ಯ ಬಂದರಿನ ವಿಸ್ತರಣೆಗಾಗಿ ಕಡಲ ತೀರದ ಉದ್ಯಾನದಲ್ಲಿರುವ ಪ್ಯಾರಾಗೋಲಾದ ಸಮೀಪದಿಂದ 840 ಮೀಟರ್‍ನಷ್ಟು ಉದ್ದದ ತಡೆಗೋಡೆ ನಿರ್ಮಾಣಕ್ಕೆ 126 ಕೋಟಿ ಹಣ ಬಿಡುಗಡೆಯಾಗಿದೆ.ಬಂದರು ವಿಸ್ತರಣೆ ಆದರೇ ರಾಜ್ಯದ ಮೊದಲ ಅತೀ ದೊಡ್ಡ ಬಂದರಾಗಿ ಕಾರವಾರದ ವಾಣಿಜ್ಯ ಬಂದರು ರೂಪಗೊಳ್ಳಲಿದ್ದು, ವಾಣಿಜ್ಯ ವಹಿವಾಟು, ಆದಾಯ ಸರ್ಕಾರಕ್ಕೆ ಹೆಚ್ಚಾಗಲಿದೆ. ಪ್ರವಾಸೋದ್ಯಮ, ಉದ್ಯೋಗ ದೊರೆಯುವ ಜೊತೆ ಕಾರವಾರ ನಗರಿ ಆರ್ಥಿಕ ಪ್ರಗತಿ ಕಾಣಲಿದೆ ಎಂಬುದು ಸರ್ಕಾರದ ವಾದವಾಗಿದೆ.

ಒಟ್ಟಿನಲ್ಲಿ ಸಾಗರಮಾಲಾ ಯೋಜನೆ ವಿರೋಧದ ಕಿಡಿ ಇಡೀ ಕಾರವಾರ ನಗರವನ್ನು ಸ್ತಬ್ಧಗೊಳಿಸಿದ್ದು ಮುಂದಿನ ದಿನಗಳಲ್ಲಿ ಯಾವ ಮಟ್ಟ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *