ಗಾಂಧಿ ದೇಶದ ಮಗ – ವಿವಾದಕ್ಕೀಡಾದ ಸಾಧ್ವಿ ಪ್ರಜ್ಞಾ ಸಿಂಗ್

Public TV
2 Min Read

ಭೋಪಾಲ್: ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಹಾತ್ಮ ಗಾಂಧೀಜಿಯವರು ದೇಶದ ಮಗ ಎಂದು ಹೇಳಿಕೆ ನೀಡುವ ಮೂಲಕ ಸಾಧ್ವಿ ಅವರು ವಿವಾದಕ್ಕೀಡಾಗಿದ್ದಾರೆ.

ಇಂದು ಭೋಪಾಲ್‍ನ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರನ್ನು ದೇಶದ ಮಗ. ಅವರು ಮಾಡಿರುವ ಒಳ್ಳೆಯ ಕೆಲಸವನ್ನು ನಾನು ಮೆಚ್ಚುತ್ತೇನೆ. ಅವರು ರಾಷ್ಟ್ರಕ್ಕಾಗಿ ಮಾಡಿರುವ ಒಳ್ಳೆಯ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ. ನಾನು ಕೂಡ ಗಾಂಧೀಜಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತೇನೆ. ಅವರ ಒಳ್ಳೆಯ ಕೆಲಸವನ್ನು ನಾವು ಕೂಡ ಹೊಗಳುತ್ತೇವೆ. ಅವರು ಮಾಡಿದ ಕೆಲಸವನ್ನು ನಾವೂ ಅನುಸರಿಸುತ್ತೇವೆ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆ. ಇದನ್ನು ಓದಿ: ಗೋಡ್ಸೆಯಿಂದ ಗಾಂಧೀಜಿ ದೇಹ ಹತ್ಯೆ, ಪ್ರಜ್ಞಾಸಿಂಗ್‍ರಿಂದ ಆತ್ಮದ ಕೊಲೆ: ಕೈಲಾಶ್ ಸತ್ಯಾರ್ಥಿ

ಮಹಾತ್ಮ ಗಾಂಧೀಜಿ ಅವರು 150ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿಯಿಂದ ರಾಷ್ಟ್ರವ್ಯಾಪಿ ಗಾಂಧಿ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯಲ್ಲಿ ಬಿಜೆಪಿಯ ಹಲವಾರು ನಾಯಕರು ಭಾಗವಹಿಸಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಗಾಂಧೀಜಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಬಾಲಿವುಡ್ ಸ್ಟಾರ್ ಗಳ ಜೊತೆ ಸಂವಾದ ನಡೆಸಿದ್ದಾರೆ. ಆದರೆ ಸಾಧ್ವಿ ಪ್ರಜ್ಞಾ ಮಾತ್ರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.

ಇದೇ ವೇಳೆ ಸಾಧ್ವಿ ಪ್ರಜ್ಞಾ ಅವರನ್ನು ನೀವು ಯಾಕೆ ಮಹಾತ್ಮ ಗಾಂಧೀಜಿ ಅವರ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿಲ್ಲ ಎಂದು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಾಧ್ವಿ ಪ್ರಜ್ಞಾ ನಾನು ಗಾಂಧಿಯನ್ನು ಮೆಚ್ಚುತ್ತೇನೆ ಅವರ ಒಳ್ಳೆಯ ಕೆಲಸವನ್ನು ಪ್ರಶಂಸೆ ಮಾಡುತ್ತೇನೆ. ಆದರೆ ನೀವು ಕೇಳಿದ ಎಲ್ಲ ಪ್ರಶ್ನೆಗಳಿಗೂ ವಿವರಣೆ ನೀಡುವ ಅಗತ್ಯ ನನಗಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಗೋಡ್ಸೆ ಒಬ್ಬರನ್ನು ಕೊಂದ್ರೆ ರಾಜೀವ್ ಕೊಂದಿದ್ದು 17 ಸಾವಿರ – ಕ್ಷಮೆ ಕೇಳಿದ ಕಟೀಲ್

2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ ಸಾಧ್ವಿ ಪ್ರಜ್ಞಾ ಇದಕ್ಕೂ ಮುನ್ನ ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ವಿಚಾರವಾಗಿ ಬಿಜೆಪಿ ಸಾಧ್ವಿ ಪ್ರಜ್ಞಾಗೆ ಶೋಕಾಸ್ ನೋಟಿಸ್ ಕೂಡ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *