ರಕ್ಷಣಾ ಸಚಿವಾಲಯದ ಸಮಿತಿಯಿಂದ ಪ್ರಜ್ಞಾ ಸಿಂಗ್ ಔಟ್

Public TV
2 Min Read

ನವದೆಹಲಿ: ನಾಥೂರಾಮ್ ಗೋಡ್ಸೆ ದೇಶ ಭಕ್ತ ಎಂದು ಹೇಳಿದ ಬೆನ್ನಲ್ಲೇ ಭೋಪಾಲ್ ಸಂಸದೆ ಸಾಧ್ವಿಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯಿಂದ ಕೈ ಬಿಡಲಾಗಿದೆ.

ಬುಧವಾರವಷ್ಟೇ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಗೋಡ್ಸೆ ದೇಶ ಭಕ್ತ ಎಂಬ ಹೇಳಿಕೆಯನ್ನು ಲೋಕಸಭೆಯಲ್ಲಿ ನೀಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳ ಸಂಸದರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದ ಸಾಧ್ವಿ ಪ್ರಜ್ಞಾಸಿಂಗ್

ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯಿಂದ ತೆಗೆದು ಹಾಕಲಾಗಿದೆ.

ಬುಧವಾರ ಲೋಕಸಭೆಯಲ್ಲಿ ಅವರು ಹೇಳಿಕೆ ನೀಡಿರುವುದು ಖಂಡನಾರ್ಹ. ಇಂತಹ ಹೇಳಿಕೆಗಳು ಹಾಗೂ ಸಿದ್ಧಾಂತಗಳಿಗೆ ಬಿಜೆಪಿ ಎಂದೂ ಬೆಂಬಲ ನೀಡುವುದಿಲ್ಲ ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ ನಡ್ಡಾ ಸಹ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಕ್ಷದಿಂದ ಅಮಾನತುಗೊಳಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಪಕ್ಷ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಸಾಧ್ವಿ ಪ್ರಜ್ಞಾ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಹುಲ್ ಗಾಂಧಿ ಅವರು ಈ ಕುರಿತು ಟ್ವೀಟ್ ಮಾಡಿ, ಟೆರರಿಸ್ಟ್ ಪ್ರಜ್ಞಾ ಅವರು ಟೆರರಿಸ್ಟ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. ಭಾರತದ ಲೋಕಸಭೆಯ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ನಾಮನಿರ್ದೇಶನ ಮಾಡಲಾಗಿತ್ತು.

21 ಸದಸ್ಯರ ಸಂಸದೀಯ ಸಮಾಲೋಚನಾ ಸಮಿತಿಯ ನೇತೃತ್ವವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಿದ್ದಾರೆ. ಈ ಸಮಿತಿಯಲ್ಲಿ ಪ್ರತಿ ಪಕ್ಷದ ಸದಸ್ಯರಾದ ಫಾರೂಕ್ ಅಬ್ದುಲ್ಲಾ ಮತ್ತು ಎನ್‍ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ವಿವಿಧ ಪ್ರಮುಖ ನಾಯಕರು ಇರಲಿದ್ದಾರೆ. ಈ ಸಮಿತಿಗೆ ಸಾಧ್ವಿ ಪ್ರಜ್ಞಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್, 21 ಸಂಸತ್ತಿನ ಹಿರಿಯ ಸದಸ್ಯರು ಇರುವ ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದ ಶಾಂತಿಯನ್ನು ಕದಡುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೇಂದ್ರ ಸರ್ಕಾರ ಸ್ಥಾನ ನೀಡಿರುವುದು ನಿಜಕ್ಕೂ ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *