ಬಡವರಿಗೆ ಆಹಾರ ಪದಾರ್ಥ ಹಂಚಿದ ಸಾಧುಕೋಕಿಲಾ

Public TV
2 Min Read

ಬೆಂಗಳೂರು: ಆರೋಗ್ಯ ತುರ್ತು ಪರಿಸ್ಥಿತಿಯಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಇದರಿಂದಾಗಿ ಆಹಾರವಿಲ್ಲದೆ ಸಾಕಷ್ಟು ಜನರು ಪರದಾಡುತ್ತಿದ್ದಾರೆ. ಕಾರ್ಮಿಕರು, ಬಡವರು, ನಿರ್ಗತಿಕರ ಕಷ್ಟ ಹೇಳತೀರದಾಗಿದೆ. ಹಲವರು ಸಹಾಯ ಮಾಡುತ್ತಿದ್ದರೂ ಸರಿಯಾಗಿ ತಲುಪುತ್ತಿಲ್ಲ. ಹಲವು ನಟರು ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದರೆ, ಇನ್ನೂ ಕೆಲವರು ತಮ್ಮ ಸುತ್ತಲಿನವರಿಗೆ ನೆರವು ನೀಡುತ್ತಿದ್ದಾರೆ. ಅದೇ ರೀತಿ ಕಾಮಿಡಿ ಕಿಂಗ್ ಸಾಧುಕೋಕಿಲ ಸಹ ತಮ್ಮ ಸುತ್ತಲಿನ ಜನರ ನೆರವಿಗೆ ನಿಂತಿದ್ದಾರೆ.

ಹಲವು ನಟ, ನಟಿಯರು ಪಿಎಂ ಕೇರ್ಸ್ ಹಾಗೂ ಸಿಎಂ ಪರಿಹಾರ ನಿಧಿಗೆ ಹಣ ನೀಡುವ ಮೂಲಕ ಧನ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಿನಿಮಾ ಕಾರ್ಮಿಕರ ಬಗ್ಗೆ ಒಲವು ತೋರಿದ್ದಾರೆ. ಹಲವು ನಟ, ನಟಿಯರು ಪ್ರಾಣಿಗಳ ಮೇಲೆ ಅಕ್ಕರೆ ತೋರಿಸುತ್ತಿದ್ದಾರೆ. ಅದೇ ರೀತಿ ಸಾಧು ಕೋಕಿಲಾ ತಮ್ಮ ನೆರೆ ಹೊರೆಯ ಜನರಿಗೆ ನೆರವು ನೀಡುತ್ತಿದ್ದಾರೆ. ಈ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.

ಬಡವರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ವಿತರಿಸಿದ್ದು, ತಾವು ವಾಸಿಸುವ ಹೊಸಕೆರೆ ಹಳ್ಳಿ ಸುತ್ತಮುತ್ತಲಿನ ಜನರಿಗೆ ಆಹಾರ ಸಾಮಗ್ರಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸ್ಲಂ ನಿವಾಸಿಗಳ ಮನೆಗೆ ಭೇಟಿ ನೀಡಿ ಪರಿಸ್ಥಿತಿ ತಿಳಿದಿದ್ದಾರೆ. ನಂತರ ಆಹಾರ ಪದಾರ್ಥಗಳನ್ನು ನೀಡಿದ್ದಾರೆ.

ಈ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸಾಧುಕೋಕಿಲಾ, ನಾವು ಆಹಾರ ಪದಾರ್ಥಗಳನ್ನು ತಂದಿದ್ದೇವೆ. ಆದರೆ ಯಾರಿಗೆ ಕೊಡಬೇಕೆಂಬುದು ತಿಳಿಯುತ್ತಿಲ್ಲ. ನಿಜವಾಗಿಯೂ ಅಗತ್ಯವಿದ್ದವರಿಗೆ ನೀಡಿದರೆ ನಮಗೂ ಸಮಾಧಾನ, ಅವಿರಿಗೂ ಸಂತೃಪ್ತಿ ದೊರೆಯುತ್ತದೆ. ಹೀಗಾಗಿ ಅಗತ್ಯವಿರುವ ಜನರ ಪಟ್ಟಿಯನ್ನು ಸರ್ಕಾರ ಮಾಡಬೇಕು. ಸಹಾಯ ಮಾಡಲು ಬಂದವರನ್ನು ಅಲ್ಲಿಗೆ ಕಳುಹಿಸಬೇಕು. ಎಲ್ಲ ಮನೆಗಳ ಲಿಸ್ಟ್ ಮಾಡಿ ಯಾರಿಗೆ ಅವಶ್ಯಕತೆ ಇದೆ ಎನ್ನುವುನ್ನು ತಿಳಿಸಬೇಕು ಎಂದರು.

ಮಂತ್ರಿಗಳು, ಶಾಸಕರು ಅವರವರ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಅವರ ಏರಿಯಾದ ಬಗ್ಗೆ ತಿಳಿದುಕೊಂಡವರು ಕಾರ್ಪೋರೇಟರ್‍ಗಳು. ಅವರು ಕಾರ್ಯಕರ್ತರು ಹಾಗೂ ಇತರೆ ವಿಧಾನಗಳ ಮೂಲಕ ಇವರು ಬಡವರಿದ್ದಾರೆ, ಇವರಿಗೆ ಆಹಾರ ಪದಾರ್ಥಗಳ ಅವಶ್ಯಕತೆ ಇದೆ ಎಂಬುದರ ಪಟ್ಟಿ ನೀಡಿದರೆ, ಅಂತಹವರಿಗೆ ನಾವು ನೀಡಬಹುದು. ತುಂಬಾ ಜನ ಆಹಾರ ಹಾಗೂ ಆಹಾರ ಪದಾರ್ಥಗಳನ್ನು ತಂದಿದ್ದಾರೆ. ಆದರೆ ಅದನ್ನು ಯಾರಿಗೆ ಹಂಚಬೇಕೆಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲ ಮನೆಗಳಿಗೆ ಸ್ಯಾನಿಟೈಸರ್ ಹಂಚುತ್ತೇವೆ ಎಂದರು. ಆದರೆ ಇನ್ನೂ ನೀಡಿಲ್ಲ. ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಪೋರೇಟರ್ ಕೆಲಸ ಮಾಡುತ್ತಿಲ್ಲ. ಅಗತ್ಯ ವಸ್ತುಗಳನ್ನು ಕೊಳ್ಳಲು ಜನ ಹೊರಗಡೆ ಬರುತ್ತಿದ್ದಾರೆ. ಈ ವ್ಯವಸ್ಥೆಯನ್ನು ಸರಿ ಮಾಡಿದರೆ ಜನ ಹೊರಗಡೆ ಬರುವುದಿಲ್ಲ. ಅಲ್ಲದೆ ಕೊರೊನಾ ಪೀಡೆ ತೊಲಗಿಸಬೇಕಾದಲ್ಲಿ ನಮ್ಮ ಪಕ್ಕದ ಮನೆಯವರಿಗೆ ನಾವು ಸಹಾಯ ಮಾಡಿದರೆ ಸಾಕು. ಹೀಗಾಗಿ ಜನರೇ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಅಲ್ಲದೆ ಎಲ್ಲೆಂದರಲ್ಲಿ ರಾಸಾಯನಿಕ ಸಿಂಪಡಿಸುತ್ತಿದ್ದಾರೆ, ವಿದೇಶದಿಂದ ಬಂದವರೇ ಕೊರೊನಾ ತರುತ್ತಿದ್ದಾರೆ ಅವರು ನೆಲೆಸಿರುವ ಏರಿಯಾಗಳಲ್ಲಿ ಬಿಟ್ಟು, ಸ್ಲಂಗಳಲ್ಲಿ ರಾಸಾಯನಿಕ ಸಿಂಪಡಿಸುತ್ತಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *