ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಬಿಜೆಪಿ ನಾಯಕರು ಮುತ್ತಿಗೆಗೆ ಯತ್ನ

Public TV
1 Min Read

– ಸಚಿವ ಖರ್ಗೆ ರಾಜೀನಾಮೆಗೆ ಪಟ್ಟು

ಕಲಬುರಗಿ: ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ನಾಯಕರನ್ನು ಮಾರ್ಗ ಮಧ್ಯೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಖರ್ಗೆ ಮನೆಗೆ ಮುತ್ತಿಗೆಗೆ ಕೇಸರಿ ಪಡೆ ಮುಂದಾಗಿತ್ತು. ಸಚಿವರ ಮನೆಯಲ್ಲಿ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿದೆ.

ಜಗತ್ ವೃತ್ತದಿಂದ ಖರ್ಗೆ ಮನೆವರೆಗೆ ಪಾದಯಾತ್ರೆ ನಡೆಸಿ ಮುತ್ತಿಗೆಗೆ ಹೊರಟಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೈರಾಗಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಮನೆಗೆ ಬಿಜೆಪಿ ಮುತ್ತಿಗೆ ಹಿನ್ನೆಲೆ ಕಲಬುರ್ಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರಿಯಾಂಕ್ ಖರ್ಗೆ ಮನೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಪೊಲೀಸ್ ಹೈ ಅಲರ್ಟ್ ಆಗಿದ್ದಾರೆ. ಐವಾನ್ ಶಾಹಿ ಮಾರ್ಗದಲ್ಲೇ ಬ್ಯಾರಿಕೇಡ್ ಹಾಕಿ ಮುತ್ತಿಗೆ ಯತ್ನ ತಡೆಗಟ್ಟಲು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ. ಒಂದು ಜಲಫಿರಂಗಿ ಸೇರಿ ಮುತ್ತಿಗೆ ಯತ್ನ ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ಪೊಲೀಸರ ಸರ್ಪಗಾವಲಿದೆ.

ಬಿಜೆಪಿ ಕಾರ್ಯಕರ್ತರು ಬರುತ್ತಿದ್ದಂತೆ ಪೊಲೀಸರು ಮಾರ್ಗ ಮಧ್ಯೆ ತಡೆದರು. ಬ್ಯಾರಿಕೇಟ್‌ ತಳ್ಳಿ ಮುಂದೆ ಸಾಗಲು ಬಿಜೆಪಿ ನಾಯಕರು ಈ ವೇಳೆ ಯತ್ನಿಸಿದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ಮಾಡಿಕೊಡದೇ ನಾಯಕರನ್ನು ವಶಕ್ಕೆ ಪಡೆದರು.

Share This Article