ಶಬರಿಮಲೆ ಚಿನ್ನ ಕಳ್ಳತನ ಕೇಸ್‌ – ಬಳ್ಳಾರಿಯ ಆಭರಣ ವ್ಯಾಪಾರಿ ಅರೆಸ್ಟ್‌

3 Min Read

ತಿರುವನಂತಪುರ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣಕ್ಕೆ (Sabarimala Gold Scam) ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಸ್ಮಾರ್ಟ್ ಕ್ರಿಯೇಷನ್ಸ್‌ನ ಸಿಇಒ ಪಂಕಜ್ ಭಂಡಾರಿ (Pankaj Bandari) ಮತ್ತು ಬಳ್ಳಾರಿಯಲ್ಲಿ ನೆಲೆಸಿರುವ ಆಭರಣ ವ್ಯಾಪಾರಿ ಗೋವರ್ಧನ್ (Govardhan) ಅವರನ್ನು ಬಂಧಿಸಿದೆ.

ಪಂಕಜ್ ಭಂಡಾರಿ ದ್ವಾರಪಾಲಕ ಮೂರ್ತಿಗಳನ್ನು ಕೆಲಸಕ್ಕಾಗಿ ತೆಗೆದುಕೊಂಡ ಹೋದ ನಂತರ ಅವುಗಳ ತೂಕ ಕಡಿಮೆಯಾಗಿದೆ. ಮೂರ್ತಿಯಿಂದ ತೆಗೆದ ಚಿನ್ನವನ್ನು ಗೋವರ್ಧನ್ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಎಸ್‌ಐಟಿ ಆರೋಪಿಸಿದೆ.

ಅಕ್ಟೋಬರ್ 28 ರಂದು ಆರಂಭಿಕ ತನಿಖೆಯ ಭಾಗವಾಗಿ ಎಸ್‌ಐಟಿ ಗೋವರ್ಧನ್ ಅವರ ಆಭರಣ ಅಂಗಡಿಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಈ ಹಗರಣದಲ್ಲಿ ತನ್ನ ಪಾತ್ರವಿಲ್ಲ. ಚಿನ್ನದ ಹೊದಿಕೆಯ ಬಾಗಿಲಿಗೆ ದೇಣಿಗೆಯಾಗಿ ಹಣ ನೀಡಿದ್ದೇನೆ ಎಂದು ಹೇಳಿಕೊಂಡಿದ್ದರು.

ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಅವರು 2019 ರಲ್ಲಿ ದೇವಾಲಯಕ್ಕೆ ಚಿನ್ನದ ಲೇಪಿತ ಬಾಗಿಲನ್ನು ಸಮರ್ಪಣೆ ಮಾಡುವ ಉದ್ದೇಶದಿಂದ ನನ್ನನ್ನು ಸಂಪರ್ಕಿಸಿದ್ದರು. ಬಳ್ಳಾರಿಯಲ್ಲಿ ನಿರ್ಮಿಸಲಾದ ಹೊಸ ಬಾಗಿಲನ್ನು ಶಬರಿಮಲೆ ದೇವಸ್ಥಾನಕ್ಕೆ ಸಾಗಿಸುವ ಮೊದಲು ಅವರ ಆಭರಣ ಅಂಗಡಿಯಲ್ಲಿ ಪ್ರದರ್ಶಿಸಲಾಗಿತ್ತು ಗೋವರ್ಧನ್‌ ತಿಳಿಸಿದ್ದರು.

ಬಳ್ಳಾರಿಯ ಜುವೆಲ್ಲರಿ ಉದ್ಯಮಿ ಗೋವರ್ಧನ್‌
ಬಳ್ಳಾರಿಯ ಜುವೆಲ್ಲರಿ ಉದ್ಯಮಿ ಗೋವರ್ಧನ್‌

ಇಬ್ಬರ ಬಂಧನದೊಂದಿಗೆ ಈ ವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಡಿ.17 ರಂದು ತನಿಖಾ ತಂಡವು ಶಬರಿಮಲೆಯ ಮಾಜಿ ಆಡಳಿತ ಅಧಿಕಾರಿ ಶ್ರೀಕುಮಾರ್ ಅವರನ್ನು ಬಂಧಿಸಿತ್ತು. 2019 ರಲ್ಲಿ ದ್ವಾರಪಾಲಕ ವಿಗ್ರಹಗಳ ಚಿನ್ನದ ಫಲಕಗಳನ್ನು ತೆಗೆದು ಚೆನ್ನೈಗೆ ಸಾಗಿಸಿದಾಗ ಅವರು ಆಡಳಿತ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

ನವೆಂಬರ್‌ನಲ್ಲಿ ಚಿನ್ನದ ಕಳ್ಳತನದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಎಸ್‌ಐಟಿ ಮಾಜಿ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಮತ್ತು ಸಿಪಿಎಂ ನಾಯಕ ಎ ಪದ್ಮಕುಮಾರ್ ಅವರನ್ನು ಬಂಧನ ಮಾಡಿತ್ತು. ಪ್ರಕರಣದಲ್ಲಿ ಅವರನ್ನು ಎಂಟನೇ ಆರೋಪಿ ಎಂದು ಹೆಸರಿಸಲಾಗಿದೆ. ಇದನ್ನೂ ಓದಿ: ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್

ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ಮಾಜಿ ಟಿಡಿಬಿ ಅಧ್ಯಕ್ಷ ಎನ್ ವಾಸು, ಮಾಜಿ ಆಡಳಿತ ಅಧಿಕಾರಿ ಮುರಾರಿ ಬಾಬು, ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಡಿ. ಸುಧೀಶ್ ಕುಮಾರ್ ಮತ್ತು ತಿರುವಾಭರಣಂನ ಮಾಜಿ ಆಯುಕ್ತ ಕೆ.ಎಸ್. ಬೈಜು ಈ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ.

ಅಯ್ಯಪ್ಪ ದೇಗುಲದಲ್ಲಿ ನಡೆದ ಚಿನ್ನದ ಕಳ್ಳತನದಲ್ಲಿ ಅಂತರರಾಷ್ಟ್ರೀಯ ಪುರಾತನ ವಸ್ತುಗಳ ಕಳ್ಳಸಾಗಣೆ ಜಾಲವೂ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು ಈ ಆಯಾಮದಲ್ಲೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಚಿನ್ನದ ಹಗರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆ ಆರಂಭಿಸುವ ಸಾಧ್ಯತೆಯಿದೆ.

ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾದ ಪ್ರಕರಣದ ತನಿಖೆ ನಡೆಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಜಾಗೃತ ದಳಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಈ ಪ್ರಕರಣದಲ್ಲಿ ದೇವಸ್ವಂ ಅಧಿಕಾರಿಗಳ ಲೋಪ ಇರುವುದನ್ನು ಜಾಗೃತಿ ದಳದ ವರದಿಯಲ್ಲಿ ತಿಳಿಸಲಾಗಿತ್ತು. ಹೀಗಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಹಾಗೂ ಎಸ್‌ಐಟಿ ತನಿಖೆ ನಡೆಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಏನಿದು ಪ್ರಕರಣ?
ಇತ್ತೀಚೆಗಷ್ಟೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ  ದ್ವಾರಪಾಲಕ ವಿಗ್ರಹಕ್ಕೆ ಹೊದಿಸಿದ 42.8 ಕೆಜಿ ತೂಕದ ಕವಚದಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿದೆ. ಹಳೆಯ ತಾಮ್ರ ಮತ್ತು ಚಿನ್ನದ (Gold) ಲೇಪನ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಆಯುಕ್ತರು ಆರೋಪಿಸಿದ್ದರು. 2019ರಲ್ಲಿ ದೇವರ ಮೂರ್ತಿಗಳಿಗೆ ಪುನರ್‌ಲೇಪನ ಮಾಡಲಾಗಿತ್ತು. ಈ ವೇಳೆ ತಾಮ್ರದ ಮೂರ್ತಿಗೆ ಹೊದಿಸಿದ್ದ ಚಿನ್ನದ ಕವಚದಲ್ಲಿ 4.5 ಕೆಜಿ ಚಿನ್ನ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ.

Share This Article