ಅಂಪೈರ್ ವಿರುದ್ಧ ಸಿಟ್ಟಾಗಿ ಬ್ಯಾಟರ್‌ಗಳನ್ನು ಕರೆದ ಪಂತ್ – ನಿಜಕ್ಕೂ ನಡೆದಿದ್ದು ಏನು?

Public TV
3 Min Read

ಮುಂಬೈ: ಐಪಿಎಲ್ ಕ್ರಿಕೆಟ್‌ನಲ್ಲಿ ಆಗಾಗ ವಿವಾದಗಳು ನಡೆಯುತ್ತಿರುತ್ತವೆ. ಆದರೆ ಶುಕ್ರವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಾಸ್ಥಾನ್ ರಾಯಲ್ಸ್ ಪಂದ್ಯ ಹೊಸ ವಿವಾದಕ್ಕೆ ಸಾಕ್ಷಿಯಾಗಿದೆ.

ಕೊನೆಯ ಓವರ್‌ನಲ್ಲಿ ಅಂಪೈರ್ ನೀಡಿದ ತೀರ್ಪಿನಿಂದ ಅಸಮಧಾನಗೊಂಡ ಡೆಲ್ಲಿ ತಂಡದ ನಾಯಕ ರಿಷಭ್‌ಪಂತ್ ನಡೆದುಕೊಂಡ ರೀತಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣ ಮಾತ್ರವಲ್ಲದೇ, ಹಿರಿಯ ಕ್ರಿಕೆಟಿಗರಿಂದಲೂ ಟೀಕೆಗೆ ಗುರಿಯಾಗಿದೆ. ಇಷ್ಟಕ್ಕೂ ಆ ಕೊನೆಯ ಓವರ್‌ನಲ್ಲಿ ನಡೆದಿದ್ದೇನು? ಇಲ್ಲಿದೆ ಮಾಹಿತಿ. ಇದನ್ನೂ ಓದಿ: ಬಟ್ಲರ್‌ ಬಿರುಗಾಳಿ ಬೆದರಿದ ಡೆಲ್ಲಿ – ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ರಾಜಸ್ಥಾನ

wtson

ರಾಜಾಸ್ಥಾನ್ ರಾಯಲ್ಸ್ ನೀಡಿದ 222 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತಾದರೂ ನಂತರದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ವೆಸ್ಟ್ಇಂಡೀಸ್ ಕ್ರಿಕೆಟಿಗ ರೋವನ್ ಪೊವೆಲ್ ಅವರ ಆಟ ತಂಡಕ್ಕೆ ಗೆಲುವಿನ ಆಸೆ ಚಿಗುರುವಂತೆ ಮಾಡಿತ್ತು. ಅಂತಿಮ ಓವರ್‌ನಲ್ಲಿ ಡೆಲ್ಲಿ ತಂಡಕ್ಕೆ 36 ರನ್‌ಗಳು ಬೇಕಾಗಿತ್ತು. ಅಂದರೆ ಆರು ಬಾಲ್‌ನಲ್ಲಿ 6 ಸಿಕ್ಸರ್, ಇದು ಶೇ.90 ರಷ್ಟು ಗೆಲುವು ಅಸಾಧ್ಯ ಎಂಬುದೂ ಗೊತ್ತಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಪೋವೆಲ್ ಸತತ 3 ಎಸೆತಗಳನ್ನೂ ಸಿಕ್ಸ್‌ಗೆ ಅಟ್ಟಿದರು. ಇನ್ನೂ ಮೂರು ಎಸೆತಗಳು ಬಾಕಿ ಇರುವ ವೇಳೆ ದೊಡ್ಡ ಹೈಡ್ರಾಮವೇ ನಡೆದು ಹೋಯಿತು.

ಮೆಕಾಯ್ ಅವರ 3 ಎಸೆತಗಳನ್ನೂ ಸಿಕ್ಸ್ ಬಾರಿಸಿದ್ದರು. ಆದರೆ, 3ನೇ ಎಸೆತ ಫುಲ್‌ಟಾಸ್ ಆಗಿದ್ದು ಇದನ್ನು ಕೂಡ ಪೊವೆಲ್ ಸಿಕ್ಸ್ಗೆ ಅಟ್ಟಿದರು. ಆದರೆ ಇದು ಅವರ ಸೊಂಟದ ಭಾಗಕ್ಕಿಂತಲೂ ಮೇಲಿತ್ತು. ಅಂಪೈರ್ ನೋಬಾಲ್ ಕೊಡದೇ ಇದ್ದರೂ ಡೆಲ್ಲಿ ಆಟಗಾರರು ಕುಳಿತಲ್ಲಿಂದಲೇ ನೋಬಾಲ್ ಸಿಗ್ನಲ್ ತೋರಿಸಿದರು.

ಅಂಪೈರ್ ಇದು ನೋ ಬಾಲ್ ಅಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಸಿಟ್ಟಾದ ಡೆಲ್ಲಿ ನಾಯಕ ರಿಷಭ್‌ಪಂತ್ ಇದು ಅನ್ಯಾಯ ಎಂದು ಮೈದಾನದಲ್ಲಿದ್ದ ರೋವನ್ ಪೊವೆಲ್ ಮತ್ತು ಕುಲೀಪ್ ಯಾದವ್ ಅವರನ್ನು ಉದ್ದೇಶಿಸಿ ಬೌಂಡರಿ ಗೆರೆ ಬಳಿ ನಿಂತು ಟೆಸ್ಟ್ ಕ್ರಿಕೆಟ್‌ನಲ್ಲಿ ಡಿಕ್ಲೇರ್ ಘೋಷಣೆ ಮಾಡುವಂತೆ ಪೆವಿಲಿಯನ್‌ಗೆ ಬನ್ನಿ ಎಂದು ಕರೆದರು.

ಆಕ್ರೋಷದಲ್ಲಿದ್ದ ಪಂತ್ ತಮ್ಮ ತಂಡದ ಕೋಚ್ ಪ್ರವೀಣ್ ಆಮ್ರೆ ಅವರನ್ನು ಅಂಪೈರ್ ಬಳಿ ಚರ್ಚಿಸಲು ಮೈದಾನಕ್ಕೆ ಕಳುಹಿಸಿದರು. ಅಂಗಣಕ್ಕೆ ಧಾವಿಸಿ ಆನ್ ಫೀಲ್ಡ್ ಅಂಪೈರ್‌ಗಳ ಜೊತೆಗೆ ಚರ್ಚಿಸಿ ಕನಿಷ್ಠ 3ನೇ ಅಂಪೈರ್‌ಗೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ, ಲೆಗ್ ಅಂಪೈರ್ ನಿತಿನ್ ಮೆನನ್ ಅದು ನೋ-ಬಾಲ್ ಅಲ್ಲ ಎಂದು ತೀರ್ಪು ನೀಡಿದ್ದ ಕಾರಣ, ಅದೇ ತೀರ್ಪಿಗೆ ಬದ್ಧರಾಗಿ ನಿಂತು ಆಟ ಮುಂದುವರಿಸಲು ಆನ್‌ಫೀಲ್ಡ್ ಅಂಪೈರ್ ತೀರ್ಮಾನಿಸಿದರು. ಅತ್ತ ಬೌಂಡರಿ ಗೆರೆ ಬಳಿಯಿದ್ದ ಆರ್‌ಆರ್ ಬ್ಯಾಟರ್ ಜಾಸ್ ಬಟ್ಲರ್ ಜೊತೆಗೂ ಪಂತ್ ರೇಗಾಡಿದರು. ಹಿರಿಯ ಆಟಗಾರ ಶೇನ್ ವಾಟ್ಸನ್ ಮೇಲೂ ಕೋಪಗೊಂಡರು. ಇದನ್ನೂ ಓದಿ: ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಆಘಾತ – ತಂಡದೊಂದಿಗಿಲ್ಲ ಕೋಚ್ ಪಾಟಿಂಗ್

IPL 2022 JOS BUTLER

ಬಳಿಕ ಡೈವರ್ಟ್ ಆದ ಪೋವೆಲ್ 4ನೇ ಎಸೆತವನ್ನು ಎದುರಿಸುವಲ್ಲಿ ವಿಫಲರಾದರು. 5ನೇ ಎಸೆತದಲ್ಲಿ 2ರನ್‌ಗಳಿಸಿ 6ನೇ ಎಸೆತಕ್ಕೆ ಕ್ಯಾಚ್ ನೀಡಿ ನಿರ್ಗಮಿಸಿದರು. ಗೆಲ್ಲುವ ಕನಸು ಕಂಡಿದ್ದ ಡೆಲ್ಲಿಗೆ ರಿಷಬ್ ಪಂಥ್ ಅವರ ನಿರ್ಧಾರ ತಂಡದ ದಿಕ್ಕನ್ನೇ ಬದಲಾಯಿತು. ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಶುಕ್ರವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ರೋಚಕವಾಗಿತ್ತು. ಜೋಸ್ ಬಟ್ಲರ್, ದೇವದತ್ ಪಡಿಕಲ್ ಹಾಗೂ ಸಂಜು ಸಾಮ್ಸನ್ ಅವರ ಮಿಂಚಿನಾಟ ರನ್ 200ರ ಗಡಿದಾಟುವಂತೆ ಮಾಡಿತ್ತು.

ನೋಬಾಲ್ ನಿಯಮಗಳೇನು?: ಸಾಮಾನ್ಯವಾಗಿ ಬೌಲಿಂಗ್ ವೇಳೆ ಬೌಲರ್ ಕೈನಿಂದ ಬಾಲ್ ಹೊರಡುವ ಮುನ್ನವೇ ಕ್ರೀಸ್‌ನಿಂದ ಕಾಲು ಹೊರಕ್ಕಿದ್ದರೆ ಅದು ನೋಬಾಲ್ ಆಗುತ್ತದೆ. ಈ ತೀರ್ಮಾನ ಮುಖ್ಯ ಅಂಪೈರ್ ನೀಡುತ್ತಾರೆ. ಒಂದು ವೇಳೆ ಕ್ರೀಸ್‌ನಲ್ಲಿ ಸಮಸ್ಯೆಯಿಲ್ಲದೆ ಬಾಲು ಫುಲ್‌ಟಾಸ್ ಆಗಿ ಸೊಂಟಕ್ಕಿಂತ ಮೇಲ್ಭಾಗದಲ್ಲಿದ್ದರೆ ಅದು ನೋಬಾಲ್ ಆಗುತ್ತದೆ. ಈ ತೀರ್ಪನ್ನು ಲೆಗ್‌ಅಂಪೈರ್ ಕೊಡಬೇಕು. ಇಲ್ಲದಿದ್ದರೆ ಅದು ನೋಬಾಲ್ ಆಗುವುದಿಲ್ಲ. ಹಾಗೆಯೇ ಸೊಂಟದ ಮೇಲ್ಭಾಗಕ್ಕೆ ಬಾಲ್ ಬರುವ ಸಾಧ್ಯತೆಯಿದ್ದರೂ ಬ್ಯಾಟ್ಸ್‌ಮನ್‌ ಕ್ರೀಸ್‌ನಿಂದ ಆಚೆಯಿದ್ದರೆ ಅದನ್ನು ನೋಬಾಲ್ ನೀಡದಂತೆ ತೀರ್ಪು ನೀಡಬಹುದು.

Share This Article
Leave a Comment

Leave a Reply

Your email address will not be published. Required fields are marked *