– ಅಣ್ಣನೇ ತುಂಬಿಸಿದ ಕೆರೆಯಲ್ಲಿ ಅಸ್ತಿ ವಿಸರ್ಜನೆ ಮಾಡ್ತಾರೆ
ಹಾಸನ: ಅಣ್ಣ ಬಾಲ್ಯದಿಂದಲೂ ಕಷ್ಟದಲ್ಲೇ ಬೆಳೆದ ಎಂದು ಎಸ್.ಎಲ್.ಭೈರಪ್ಪ (S.L.Bhyrappa) ಅವರನ್ನು ನೆನೆದು ಚಿಕ್ಕಪ್ಪನ ಮಗಳು, ಸಹೋದರಿ ಕಮಲಾ ಅವರು ಭಾವುಕರಾಗಿದ್ದಾರೆ.
ಎಸ್.ಎಲ್.ಭೈರಪ್ಪ ಅವರ ಹೋರಾಟದ ಜೀವನದ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಬಾಲ್ಯದಿಂದಲೂ ಕಷ್ಟದಲ್ಲೇ ಬೆಳೆದ. ವಾರಾನ್ನ, ಭಿಕ್ಷಾನ್ನ ಮಾಡಿ ಕಷ್ಟಪಟ್ಟು ಓದಿದ. ತಾಯಿ, ಅಕ್ಕ, ತಮ್ಮ ಪ್ಲೇಗ್ ಬಂದು ತೀರಿಕೊಂಡರು. ಅಪ್ಪನ ಜೊತೆ ದೇವಾಲಯದಲ್ಲಿ ವಾಸವಿದ್ದ. ಆನಂತರ ಅವರ ತಂದೆ ಲಿಂಗಣ್ಣಯ್ಯ ಸಾವನ್ನಪ್ಪಿದರು ಎಂದು ಕಷ್ಟದ ದಿನಗಳ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಮೈಸೂರಿನಲ್ಲೇ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಘೋಷಣೆ
ನಂತರ ಅಣ್ಣ ಗುಜರಾಜ್‌ನಲ್ಲೇ ಕೆಲಸಕ್ಕೆ ಸೇರಿಕೊಂಡ. ಆದರೆ, ಹುಟ್ಟೂರನ್ನು ಎಂದಿಗೂ ಮರೆಯಲಿಲ್ಲ. ಸಂತೇಶಿವರಕ್ಕೆ ಬಂದಾಗಲೆಲ್ಲಾ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದ. ಗ್ರಾಮದ ಸಮಸ್ಯೆ ಅರಿತು ಕೆರೆ ತುಂಬಿಸುವ ಕಾರ್ಯ ಮಾಡಿದ. ಗ್ರಾಮಕ್ಕೆ ಬಂದಾಗಲೆಲ್ಲಾ ಎಲ್ಲೆಡೆ ಓಡಾಡುತ್ತಿದ್ದ. ತಾನು ಓದಿದ ಶಾಲೆ, ಈಜು ಕಲಿತ ಕೆರೆ ನೋಡುತ್ತಿದ್ದ. ದೇಶದಲ್ಲೇ ಒಳ್ಳೆಯ ವ್ಯಕ್ತಿಯಾಗಿ ಬೆಳೆದ ಎಂದು ನೆನಪಿಸಿಕೊಂಡರು.
ಭೈರಪ್ಪನ ಸಾವು ಅತೀವ ನೋವು ತಂದಿದೆ. ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎನ್ನುವುದು ಅಣ್ಣನ ಆಸೆಯಾಗಿತ್ತು. ಆದರೆ, ದೇಶದ ವಿವಿಧೆಡೆಗಳಿಂದ ಸಾವಿರಾರು ಜನರು ಅಂತಿಮ ದರ್ಶನಕ್ಕೆ ಬರುತ್ತಾರೆ. ಇದು ಚಿಕ್ಕ ಗ್ರಾಮ, ಇಲ್ಲಿ ಅಂತ್ಯಕ್ರಿಯೆ ಮಾಡುವುದು ಕಷ್ಟವಾಗುತ್ತದೆ. ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಆನಂತರ ಅಸ್ತಿಯನ್ನು ಅವರೇ ತುಂಬಿಸಿದ ಕೆರೆಯಲ್ಲಿ ವಿಸರ್ಜನೆ ಮಾಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: 181 ರೂ. ಸಂಬಳ, SL ಭೈರಪ್ಪಗೂ ಹುಬ್ಬಳ್ಳಿಗೂ ಅವಿನಾಭಾವ ನಂಟು
ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ಬುಧವಾರ ಹೃದಯ ಸ್ತಂಭನದಿಂದ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿರಿಯ ಸಾಹಿತಿ ನಿಧನಕ್ಕೆ ಪ್ರಧಾನಿ ಮೋದಿ, ದ್ರೌಪದಿ ಮುರ್ಮು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.