ಜೈಶಂಕರ್‌ ಜೊತೆಗೆ ಇರಾನ್‌ ವಿದೇಶಾಂಗ ಸುದೀರ್ಘ ಮಾತುಕತೆ – ಭಾರತದ ಸಲಹೆ ಆಲಿಸಿದ ಅಬ್ಬಾಸ್‌!

2 Min Read

– ಇರಾನ್‌ ದಾಳಿ ಎಚ್ಚರಿಕೆ ಬೆನ್ನಲ್ಲೇ ಅಮೆರಿಕ ಭದ್ರತಾ ಸಿಬ್ಬಂದಿ ಸ್ಥಳಾಂತರ

ಟೆಹ್ರಾನ್‌/ನವದೆಹಲಿ: ಇರಾನ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಸರ್ವಾಧಿಕಾರಿ ಖಮೇನಿ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶವನ್ನು ಸಹಜ ಸ್ಥಿತಿಗೆ ತರುವುದು ಸವಾಲಿನ ಕೆಲಸವಾಗಿದೆ. ಈ ಮಧ್ಯೆ ಇರಾನ್‌ನ ವಿದೇಶಾಂಗ ಸಚಿವ ಸೈಯ್ಯದ್‌ ಅಬ್ಬಾಸ್‌ ಅರಾಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಡಾ.ಎಸ್‌ ಜೈಶಂಕರ್‌ ಅವರಿಗೆ ದೂರವಾಣಿ ಕರೆ ಮಾಡಿದ್ದು, ಇರಾನ್‌ ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದಾರೆ.

ಬುಧವಾರ ಸಂಜೆ ಇರಾನ್‌ ವಿದೇಶಾಂಗ ಸಚಿವ ಸೈಯ್ಯದ್‌ ಅಬ್ಬಾಸ್‌ ಅರಾಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌ ಅವರಿಗೆ ದೂರವಾಣಿ ಕರೆ ಮಾಡಿದ್ದು, ಇಬ್ಬರೂ ನಾಯಕರು ಸುದೀರ್ಘವಾಗಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಖಮೇನಿ ಬೆಂಬಲಿಸಿ ಕಾರ್ಗಿಲ್‌ ಮುಸ್ಲಿಮರ ಪ್ರತಿಭಟನೆ – ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ

ಈ ಕುರಿತು ಸ್ವತಃ ವಿದೇಶಾಂಗ ಸಚಿವಾಲಯದ ಸಚಿವರೇ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಅವರಿಂದ ಕರೆ ಬಂದಿದೆ. ಇರಾನ್ ಮತ್ತು ಸುತ್ತಮುತ್ತಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇರಾನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ ನೀಡಿದ ಕೆಲವೇ ಗಂಟೆಗಳ ಬಳಿಕ, ಜೈಶಂಕರ್‌ ಮತ್ತು ಸೈಯ್ಯದ್‌ ಅಬ್ಬಾಸ್‌ ನಡುವೆ ದೂರವಾಣಿ ಮಾತುಕತೆ ನಡೆದಿರುವುದು ಗಮನ ಸೆಳೆದಿದೆ. ಅಲ್ಲದೇ ಭಾರತವು “ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೂ ಭಾರತೀಯ ಪ್ರಜೆಗಳು ಇಸ್ಲಾಮಿಕ್ ಗಣರಾಜ್ಯ ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು”ಎಂದೂ ಸಲಹೆ ನೀಡಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ; 2,000 ಮಂದಿ ಸಾವು

ಅಮೆರಿಕ ಭದ್ರತಾ ಸಿಬ್ಬಂದಿ ಸ್ಥಳಾಂತರ 
ಇರಾನ್‌ನಲ್ಲಿ ಉದ್ವಿಗ್ನತೆ ಮುಂದುವರಿದಿರುವಂತೆಯೇ ತನ್ನ ಪ್ರಾದೇಶಿಕ ನೆಲೆಗಳಿಂದ ಭದ್ರತಾ ಸಿಬ್ಬಂದಿಯನ್ನ ಸ್ಥಳಾಂತರಗೊಳಿಸುವಂತೆ ಅಮೆರಿಕ ಸೂಚಿಸಿದೆ ಎಂದು ವರದಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ, ಒಂದು ವೇಳೆ ದಾಳಿ ನಡೆಸಿದರೆ ಅಮೆರಿಕದ ಪ್ರಾದೇಶಿಕ ನೆಲೆಗಳ ಮೇಲೂ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ತನ್ನ ನಾಗರಿಕರ ಭದ್ರತೆ ಹಾಗೂ ಮಿಲಿಟರಿ ಸೌಲಭ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Share This Article