ಗುರ್ಗಾಂವ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯ 7 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಇದೇ ಶಾಲೆಯ 11ನೇ ಕ್ಲಾಸ್ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದಿದೆ.
ಆರ್ಯನ್ ಇಂಟರ್‍ನ್ಯಾಷನಲ್ ಗ್ರೂಪ್ ಸಿಇಓ ಆರ್ಯನ್ ಪಿಂಟೋ ಹಾಗೂ ಸಂಸ್ಥಾಪಕ ಅಧ್ಯಕ್ಷ ಆಗಸ್ಟೀನ್ ಪಿಂಟೋ ಮತ್ತು ವ್ಯವಸ್ಥಾಪಕ ನಿರ್ದೇಶಕ ಗ್ರೇಸ್ ಪಿಂಟೋ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಮೂಲಗಳ ಪ್ರಕಾರ ಸಿಬಿಐ, 11ನೇ ತರಗತಿ ವಿದ್ಯಾರ್ಥಿಯನ್ನು ಮಂಗಳವಾರ ರಾತ್ರಿ 11 ಗಂಟೆಗೆ ಸೋಹ್ನಾ ರೋಡ್‍ನಿಂದ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದೆ. ಆದ್ರೆ ವಿದ್ಯಾರ್ಥಿಯನ್ನು ಬಂಧನಕ್ಕೆ ಒಳಪಡಿಸಲಾಗಿದೆಯಾ ಅಥವಾ ವಿಚಾರಣೆ ಬಳಿಕ ವಾಪಸ್ ಕಳಿಸಲಾಗಿದೆಯಾ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ.
ಇದೇ ವರ್ಷ ಸೆಪ್ಟೆಂಬರ್ 8ರಂದು 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಪೊಲೀಸರು ಬಂಧಿಸಿದ್ದರು. ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಬಾಲಕನನ್ನು ಕೊಲೆ ಮಾಡಿದ್ದಾಗಿ ಬಸ್ ಕಂಡಕ್ಟರ್ ಹೇಳಿಕೆ ನೀಡಿದ್ದ. ಆದ್ರೆ ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಹೇಳಿದ್ದರು.
ಬಾಲಕನ ಕೊಲೆ ಪ್ರಕರಣ ದೇಶದಾದ್ಯಂತ ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಶಾಲೆಯಲ್ಲಿ ನೂತನ ಭದ್ರತಾ ಮಾನದಂಡಗಳನ್ನ ಸಿಬಿಎಸ್‍ಇ ಜಾರಿಗೆ ತಂದಿತ್ತು. ಶಾಲೆಯ ಕ್ಯಾಂಪಸ್‍ನಲ್ಲಿ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯ ಜವಾಬ್ದಾರಿ ಶಾಲೆಯ ಆಡಳಿತದವರದ್ದೇ ಆಗಿರುತ್ತದೆ ಎಂದು ಬೋರ್ಡ್ ಹೇಳಿತ್ತು.
ಇದನ್ನೂ ಓದಿ: 2ನೇ ಕ್ಲಾಸ್ ಬಾಲಕನ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಅನುಮಾನ- ಟಾಯ್ಲೆಟ್‍ನಲ್ಲಿದ್ದ ಕಿಟಕಿಗೆ ಕಂಬಿ ಇರ್ಲಿಲ್ಲ