ಗೋವಾದಲ್ಲಿ ಇಸ್ರೇಲಿಗನ ಜೊತೆ ಪ್ರೀತಿ – 7 ವರ್ಷ ಲಿವ್‌ಇನ್, ಬಳಿಕ ಪ್ರಿಯಕರನ ಬಿಟ್ಟು ಗುಹೆ ಸೇರಿದ್ದ ರಷ್ಯಾ ಮಹಿಳೆ

Public TV
3 Min Read

– ಗುಹೆಯಲ್ಲೇ ಒಂದು ಮಗುವಿಗೆ ಜನ್ಮ ನೀಡಿದ್ದ ನೀನಾ ಕುಟಿನಾ

ಬೆಂಗಳೂರು/ಕಾರವಾರ: ದಟ್ಟಕಾನನದ ಗುಹೆಯಲ್ಲಿ ವಾಸವಿದ್ದ ರಷ್ಯಾ (Russia) ಮಹಿಳೆ ಕುರಿತು ದಿನಕ್ಕೊಂದು ವಿಷಯಗಳು ಬಯಲಾಗುತ್ತಿದ್ದು, ಸದ್ಯ ಆಕೆಯ ಪ್ರಿಯಕರ ತನ್ನ ಮಕ್ಕಳನ್ನು ಹುಡುಕಿಕೊಂಡು ಬಂದಿದ್ದಾರೆ.

ಮಹಿಳೆ ನೀನಾ ಕುಟಿನಾ ರಷ್ಯಾ ಪ್ರಜೆಯಾಗಿದ್ದು, ಪ್ರಿಯಕರ ಇಸ್ರೇಲ್ (Israel) ಪ್ರಜೆ ಡ್ರೋರ್ ಗೋಲ್ಡ್ ಸ್ಪೇನ್ ವ್ಯಾಪಾರಿ, ಮ್ಯೂಜಿಸಿಯನ್ ಆಗಿದ್ದರು. ಮಕ್ಕಳನ್ನು ಪ್ರಿಯಾ ಮತ್ತು ಅಮಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಇದೇ ರೀತಿ 20 ದೇಶದ ಕಾಡಿನಲ್ಲಿ ವಾಸವಿದ್ದೆವು – ಗೋಕರ್ಣ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಮಾತು

ಸುದ್ದಿ ಮಾಧ್ಯಮದೊಂದಿಗೆ ಪ್ರಿಯಕರ ಮಾತನಾಡಿ, ಗೋವಾಗೆ ತೆರಳಿದ್ದಾಗ ನೀನಾ ಕುಟಿನಾ ಹಾಗೂ ನನ್ನ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2017ರಿಂದ 2024ರವರೆಗೂ ನಾವಿಬ್ಬರು ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದೆವು. ವರ್ಷದಲ್ಲಿ ಆರು ತಿಂಗಳು ಗೋವಾದಲ್ಲಿ ಇರುತ್ತಿದ್ದೆವು. ಇಬ್ಬರು ಕೂಡ ದೊಡ್ಡದಾದ ವಿಲ್ಲಾದಲ್ಲಿ ವಾಸವಾಗಿದ್ದೆವು. 2019ರಿಂದಲೂ ನಾನು ಆಕೆಗೆ ಪ್ರತಿ ತಿಂಗಳು 400 ಡಾಲರ್ (3.5 ಲಕ್ಷ) ಹಣವನ್ನು ಕೊಡುತ್ತಿದ್ದೆ. ಆದರೆ 2024ರ ಡಿಸೆಂಬರ್‌ನಲ್ಲಿ ನೀನಾ ಯಾವುದೇ ಮಾಹಿತಿ ನೀಡದೇ ಗೋವಾದಿಂದ ಹೊರಟು ಹೋಗಿದ್ದಳು. ಬಳಿಕ ನಾನು ಪಣಜಿಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೊಟ್ಟಿದೆ. ಬಳಿಕ ಮಾರ್ಚ್ ತಿಂಗಳಲ್ಲಿ ಆಕೆ ಮಕ್ಕಳ ಜೊತೆಗೆ ಗೋಕರ್ಣದಲ್ಲಿ ಇರುವುದು ಗೊತ್ತಾಗಿದೆ ಎಂದು ತಿಳಿಸಿದರು.

ನನ್ನ ಮಕ್ಕಳನ್ನು ನನಗೆ ಕೊಡಿ, ಸುರಕ್ಷಿತವಾದ ಜಾಗದಲ್ಲಿ ನನ್ನ ಮಕ್ಕಳು ಬೆಳೆಯಬೇಕು. ಆರು ವರ್ಷವಾದ್ರೂ ಶಿಕ್ಷಣ ಕೊಡಿಸಿಲ್ಲ. ಶಾಲೆಗೆ ಕಳಿಸಬೇಕು ಎಂದಿದ್ದಾರೆ. ಆದರೆ ಮಹಿಳೆ ಪ್ರಿಯಕರನ ಜೊತೆ ಮಕ್ಕಳನ್ನು ಕಳಿಸಲು ನಿರಾಕರಿಸುತ್ತಿದ್ದು, ಮಕ್ಕಳು ಪರಿಸರದಲ್ಲೇ ಬೆಳೆಯಬೇಕು ಎಂದು ವಾದ ಮಾಡುತ್ತಿದ್ದಾರೆ. ಇತ್ತ ಪ್ರಿಯಕರ ಮಕ್ಕಳಿಗೆ ಸೋಶಿಯಲ್ ಲೈಫ್ ಬೇಕು, ಎಜುಕೇಷನ್ ಬೇಕು, ಮಕ್ಕಳನ್ನು ಕಸ್ಟಡಿಗೆ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ನೀನಾ ಗುಹೆಯಲ್ಲಿದ್ದಾಗ ಒಂದು ಮಗುವಿಗೆ ಜನ್ಮ ನೀಡಿದ್ದು, ಈ ಎರಡು ಮಕ್ಕಳ ಹೊರತಾಗಿ ರಷ್ಯಾದಲ್ಲಿ ಇನ್ನೊಂದು ಮಗುವಿದೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆ ನೀನಾ, ನನ್ನ ದೊಡ್ಡ ಮಗ ಸಾವನ್ನಪ್ಪಿದ್ದ. ಹೀಗಾಗಿ ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಭಾರತದ ವೀಸಾ ಅವಧಿ ಮುಗಿದಿತ್ತು. ಅದಕ್ಕಾಗಿ ನಾನು 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆ. ಪ್ರಕೃತಿಯ ಜೊತೆಗಿದ್ದು ಅಪಾರವಾದ ಅನುಭವ ಸಿಗುತ್ತದೆ. ಬದುಕಿನಲ್ಲಿ ಚಂದನೆಯ ಅನುಭವ ಸಿಗಬೇಕು ಎನ್ನುವ ಕಾರಣಕ್ಕೆ ಗುಹೆಯಲ್ಲಿ ಪ್ರಕೃತಿಯ ಮಧ್ಯೆ ವಾಸವಾಗಿದ್ದೆ. ಇನ್ನೂ ನನ್ನ ಮಕ್ಕಳು ಯಾವತ್ತೂ ಹಸಿವೆಯಿಂದ ಬಳಲುತ್ತಿರಲಿಲ್ಲ. ಒಳ್ಳೊಳ್ಳೆ ಆಹಾರವನ್ನು ತಯಾರಿಸಿ ತಿನ್ನುತ್ತಿದ್ದೆವು ಎಂದಿದ್ದರು.

ನಾವು ಕಾಡಿನ ಮಧ್ಯೆ ಇದ್ದ ನದಿಯಲ್ಲಿ ಈಜುತ್ತಿದ್ದೆವು, ಮಕ್ಕಳು ಕೂಡ ಈಜುತ್ತಿದ್ದರು. ಮಕ್ಕಳು ವಾಟರ್ ಫಾಲ್ಸ್ನಲ್ಲಿ ಚೆನ್ನಾಗಿ ಆಟವಾಡುತ್ತಿದ್ದರು. ಚೆನ್ನಾಗಿ ನಿದ್ದೆ ಕೂಡ ಮಾಡುತ್ತಿದ್ದೆವು. ನಾವು ಮೂರು ಜನ ಪ್ರಕೃತಿಯ ಮಧ್ಯೆ ಖುಷಿಯಾಗಿ ಜೀವನ ಮಾಡುತ್ತಿದ್ದೆವು. ಹಳ್ಳಿಯ ಪಕ್ಕದಲ್ಲಿಯೇ ಈ ಗುಹೆ ಇತ್ತು. ಗುಹೆ ಅಂದ್ರೆ ತೀರಾ ಸಣ್ಣ ಇಕ್ಕಟ್ಟು ಗುಹೆ ಅಲ್ಲ, ವಾಸಕ್ಕೆ ಯೋಗ್ಯವಾಗಿದ್ದ ಗುಹೆಯಾಗಿತ್ತು. ಇನ್ನೂ ಗುಹೆಯೊಳಗೆ ಹಾವುಗಳು ಆಗಾಗ ಹರಿದಾಡುತ್ತಿದ್ದವು, ಆದರೆ ನಾವು ಅವುಗಳಿಗೆ ಏನು ಮಾಡುತ್ತಿರಲಿಲ್ಲ. ಹೀಗಾಗಿ ಹಾವುಗಳು ಸುಮ್ಮನೇ ಹೋಗುತ್ತಿದ್ದವು. ನಾನು ಯಾವತ್ತೂ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿರಲಿಲ್ಲ. ಇಲ್ಲಿಗೆ ಬಂದ ಮೇಲೆ ವೈದ್ಯರ ಬಳಿ ಮಕ್ಕಳನ್ನು ಕರೆದುಕೊಂಡು ಹೋದರು. ಪ್ರಕೃತಿಯ ಮಧ್ಯೆ ಇದ್ದೆವು, ಹೀಗಾಗಿ ಆರೋಗ್ಯವಾಗಿಯೇ ಇರುತ್ತೇವೆ ಎಂದು ತಿಳಿಸಿದ್ದರು.

ಜು.12ರಂದು ಗೋಕರ್ಣದ ರಾಮತೀರ್ಥ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ ಏಕಾಂತವಾಗಿ ವಾಸಿಸುತ್ತಿದ್ದ ರಷ್ಯಾ ಮೂಲದ ಮಹಿಳೆ ಹಾಗೂ ಎರಡು ಪುಟ್ಟ ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. ಸದ್ಯ ಆಕೆಯನ್ನು ತುಮಕೂರಿನಲ್ಲಿರುವ ಎಫ್‌ಆರ್‌ಸಿ (ಅಕ್ರಮವಾಗಿ ವಲಸೆ ಬಂದ ಮಹಿಳೆಯರ ಬಂಧನ ಕೇಂದ್ರ) ಕೇಂದ್ರಕ್ಕೆ ಕರೆತರಲಾಗಿದೆ.ಇದನ್ನೂ ಓದಿ: Uttara Kannada | ದಟ್ಟ ಅರಣ್ಯದ ಗುಹೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ವಾಸ – ರಷ್ಯಾ ಮೂಲದ ಮಹಿಳೆಯ ರಕ್ಷಣೆ

Share This Article