ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ

By
2 Min Read

ಮಡಿಕೇರಿ: ಉಕ್ರೇನ್, ರಷ್ಯಾ ನಡುವೆ ಯುದ್ಧ ಆರಂಭವಾದ ದಿನದಿಂದ ಉಕ್ರೇನ್ ತೊರೆಯಲು ಆರಂಭಿಸಿ ಜೀವದ ಮೇಲಿನ ಆಸೆ ಬಿಟ್ಟು ಒಂದು ವಾರ ನಡೆದುಕೊಂಡು ಬಂದು ಹಂಗೇರಿ ತಲುಪಿದೆವು ಎಂದು ಉಕ್ರೇನ್‍ನಿಂದ ತಾಯ್ನಾಡಿಗೆ ಮರಳಿದ ಕೊಡಗಿನ ಸೀನ್ಯ ಭಯಾನಕ ದಿನಗಳನ್ನು ಬಿಚ್ಚಿಟ್ಟಿದ್ದಾರೆ.

ಉಕ್ರೇನ್, ರಷ್ಯಾ ದೇಶದ ನಡುವೆ ಯುದ್ಧ ಆರಂಭವಾಗಿ 10 ದಿನ ಕಳೆದಿದೆ. ಈಗಾಗಲೇ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುತ್ತಿದ್ದಾರೆ. ಅದರಂತೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೃಷ್ಣ ನಗರದ ವಿದ್ಯಾರ್ಥಿನಿ ಸೀನ್ಯ ಉಕ್ರೇನ್ ನಗರದಿಂದ ಹೈ ರಿಸ್ಕ್ ತೆಗೆದುಕೊಂಡು ಕೊಡಗು ಜಿಲ್ಲೆಗೆ ಅಗಮಿಸಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೀನ್ಯ, ನಾನು ಫೆಬ್ರವರಿ 24 ರಂದು ಭಾರತಕ್ಕೆ ಹೊರಟಿದ್ದೆ, ಆದರೆ ಅಂದೇ ರಷ್ಯಾ, ಉಕ್ರೇನ್ ಯುದ್ಧ ಆರಂಭವಾಗಿತ್ತು. ಹೀಗಾಗಿ ಫ್ಲೈಟ್ ಕ್ಯಾನ್ಸಲ್ ಆಯಿತು ಅದರೂ ಭಾರತಕ್ಕೆ ಬರಬೇಕೆಂದು ಫೆಬ್ರವರಿ 24 ರಂದು ನಡೆಯುವುದಕ್ಕೆ ಆರಂಭಿಸಿದೆ. ಅಂದಿನಿಂದ ಮಾರ್ಚ್ 3 ವರೆಗೆ ನಡೆದುಕೊಂಡು ಉಕ್ರೇನ್‍ನ ಒಂದೊಂದು ಭಾಗದಲ್ಲಿದ್ದು ಒಂದು ವಾರ ನಡೆಯುತ್ತಲೇ ಇದ್ದೆ. ನಮ್ಮ ಕಣ್ಮುಂದೆ ಬಾಂಬ್ ಬ್ಲಾಸ್ಟ್ ಆಗುತ್ತಿದ್ದವು ಅದನ್ನು ನೋಡಿ, ನೋಡಿ ಕೊನೆಗೆ ಹೆದರಿಕೆ ಇಲ್ಲದಂತಾಯಿತು. ಆದರೆ ನಮ್ಮ ಜೀವದ ಮೇಲಿನ ಆಸೆ ಬಿಟ್ಟಿದ್ದೆ, ಕೀವ್ ನಿಂದ ಹುಷ್ಗುರೋ ಯುನಿವರ್‌ಸಿಟಿವರೆಗೆ ನಡೆದೇ ಸಾಗಿದೆವು ಕೊನೆಗೂ ಹಂಗೇರಿ ತಲುಪಿದಾಗ ಇಂಡಿಯನ್ ರಾಯಭಾರಿ ಕಚೇರಿ ಸಹಾಯ ಮಾಡಿತು. ಅದಕ್ಕಾಗಿ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲುವುದಿಲ್ಲ ಎಂದರು.

ಉಕ್ರೇನ್‍ನಲ್ಲಿ ಇರುವಾಗ ನಮ್ಮ ವಸತಿ ಪ್ರದೇಶದಲ್ಲಿ ನಾವು ಇರುವಾಗ ನಮ್ಮ ಕಣ್ಣ ಮುಂದೆ ಯುದ್ಧ ನಡೆಯುತ್ತಿತ್ತು. ಬಾಂಬ್ ದಾಳಿ ಸೈರನ್ ಶಬ್ದಗಳು ಕೇಳುವಾಗ ಬದುಕುವ ವಿಶ್ವಾಸ ಕಳೆದುಕೊಂಡಿದ್ದೆ. ಅದರೆ ದೇವರ ದಯೆಯಿಂದ ಬದುಕಿ ಬಂದಿದ್ದೇನೆ. ನಮ್ಮ ದೇಶದ ಪ್ರಧಾನಿ ಮೋದಿ ಹಾಗೂ ರಾಯಭಾರಿ ಕಚೇರಿಯ ಆಧಿಕಾರಿಗಳು ಸಾಕಷ್ಟು ಸಹಾಯ ಮಾಡಿದ್ದಾರೆ. ಆದರೆ ಯುದ್ಧ ಸನ್ನಿವೇಶ ನನ್ನ ಕಣ್ಣ ಮುಂದೆ ಹಾಗೆ ಇದೆ. ಈಗಲೂ ನಾನು ಸಣ್ಣ ಶಬ್ದ ಕೇಳಿದ್ರೆ ಬೆಚ್ಚಿಬೀಳುತ್ತೇನೆ. ಅಷ್ಟು ಭಯ ನನಗೆ ಕಾಡಿದೆ. ನಾನು ಕೊಡಗಿನಲ್ಲಿ ಇರುವಾಗ ಅಷ್ಟು ದೂರ ನಡೆಯುವುದಕ್ಕೂ ಯೋಚನೆ ಮಾಡತ್ತ ಇದ್ದೆ, ಅದ್ರೆ ಇದೀಗಾ ನಾನೇ ಮನೆಗೆ ಬಂದು ಯೋಚನೆ ಮಾಡಿದೆ, ಅಷ್ಟು ದೂರ ಹೇಗೆ ನಡೆದೆ ಎಂದು. ಇದೀಗ ನನ್ನ ಮೇಲೆ ನನಗೆ ವಿಶ್ವಾಸ ಇದೆ ಯಾವುದೇ ಕಷ್ಟ ಬಂದರು ಎದುಸಿರುವ ಶಕ್ತಿ ಈ ಯುದ್ಧದ ಸನ್ನಿವೇಶದಿಂದ ಕಲಿತಿದ್ದೇನೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ತಾಯ್ನಾಡಿಗೆ

ಸೀನ್ಯರ ತಾಯಿ ಅನ್ಮಮ್ಮ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗಳು ಉಕ್ರೇನ್‍ನಲ್ಲಿ ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡು ನಮ್ಮ ಮಗಳು ಬದುಕಿ ಬರುತ್ತಾಳೆ ಎನ್ನುವ ಆತ್ಮವಿಶ್ವಾಸವನ್ನು ನಾವು ಕಳೆದುಕೊಂಡಿದ್ದೇವು. ಅದರೆ ದೇವರು ನಮ್ಮ ಮಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ನಮಗೆ ಅದೇ ಸ್ವಲ್ಪ ಖುಷಿಯ ವಿಚಾರ ಆದರೆ ಕನ್ನಡಿಗ ನವೀನ್ ಮೃತ ಪಟ್ಟಿದ್ದು, ಈಗಲೂ ಜೀರ್ಣಿಸಿಕೊಳ್ಳಲು ಅಸಾದ್ಯವಾಗಿದೆ. ಆದಷ್ಟು ಬೇಗಾ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಾಪಸ್ ಬಂದರೆ ಸಾಕು ನಾವು ದೇವರಲ್ಲಿ ಅದನ್ನೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *