ಉಕ್ರೇನ್ ಬಿಕ್ಕಟ್ಟು- ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ, 60 ಮಂದಿ ಸಾವು

Public TV
1 Min Read

ಕೀವ್: ಉಕ್ರೇನ್‍ನ ಹಳ್ಳಿಯೊಂದರ ಶಾಲೆಯ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ ಎಂದು ಲುಹಾನ್ಸ್ಕ್ ಪ್ರದೇಶದ ಗವರ್ನರ್ ಸೆರ್ಹಿ ಗೈದೈ ಭಾನುವಾರ ಖಚಿತ ಪಡಿಸಿದ್ದಾರೆ.

ಸುಮಾರು 90 ಮಂದಿ ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಶನಿವಾರ ಮಧ್ಯಾಹ್ನ ರಷ್ಯಾದ ಪಡೆಗಳು ಬಾಂಬ್ ದಾಳಿ ನಡೆಸಿದ್ದು, ಆ ಪೈಕಿ 60 ಜನ ಸಾವಿಗೀಡಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಾಂಬ್ ದಾಳಿಯ ನಂತರ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ನಾಲ್ಕು ಗಂಟೆಗಳ ಕಾಲ ಬೆಂಕಿಯನ್ನು ನಂದಿಸಲಾಯಿತು. ನಂತರ ಅವಶೇಷಗಳನ್ನು ತೆರವುಗೊಳಿಸಲಾಯಿತು. ದುರದೃಷ್ಟವಶಾತ್, ಇಬ್ಬರ ಶವಗಳು ಪತ್ತೆಯಾಗಿವೆ. ಮೂವತ್ತು ಜನರನ್ನು ಅವಶೇಷಗಳಿಂದ ರಕ್ಷಿಸಿ ಸ್ಥಳಾಂತರಿಸಲಾಗಿದೆ. ಅವರಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳಡಿಯಲ್ಲಿ ಅರವತ್ತು ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಪಡೆಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿವೆ ಎಂದು ಉಕ್ರೇನ್ ಆರೋಪಿಸಿದೆ. ಈ ಆರೋಪಗಳನ್ನು ಮಾಸ್ಕೋ ತಿರಸ್ಕರಿಸಿದೆ. ಉಕ್ರೇನ್‍ನ ಮೇಲಿನ ರಷ್ಯಾದ 10 ವಾರಗಳ ಯುದ್ಧವು ಸಾವಿರಾರು ಜನರನ್ನು ಕೊಂದಿದೆ. ನಗರಗಳನ್ನು ನಾಶಪಡಿಸಿವೆ. 5 ಮಿಲಿಯನ್ ಉಕ್ರೇನಿಯನ್ನರು ವಿದೇಶಕ್ಕೆ ಪಲಾಯನ ಮಾಡುವಂತೆ ಮಾಡಿದೆ.

ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂಬ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ನಿಲುವನ್ನು ಭದ್ರತಾ ಮಂಡಳಿಯು ಸರ್ವಾನುಮತದಿಂದ ಅಂಗೀಕರಿಸಿದೆ.

ರಷ್ಯಾ ಫೆ. 24ರಂದು ಉಕ್ರೇನ್ ಮೇಲೆ ಆರಂಭಿಸಿದ ಸೇನಾ ಕಾರ್ಯಾಚರಣೆಯ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಸರ್ವಾನುಮತದ ಹೇಳಿಕೆ ಬಂದಿದ್ದು, ಶಾಂತಿ ಮತ್ತು ಭದ್ರತೆಯ ಸ್ಥಾಪನೆ ಬಗ್ಗೆ ತೀವ್ರ ಕಳಕಳಿ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *