ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

Public TV
2 Min Read

– ಅಡಿಡಾಸ್ ಕಂಪನಿಯ ಶೂಗಳ ಮೇಲೆ ಹಿಮಾದಾಸ್ ಹೆಸರು
– ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿದ ಹಿಮಾದಾಸ್

ನವದೆಹಲಿ: ಕ್ರೀಡಾಪಟುಗಳಿಗಾಗೇ ವಿಶೇಷ ಬಗೆಯ ಶೂ ತಯಾರಿಸುವ ಅಡಿಡಾಸ್ ಕಂಪನಿ ಭಾರತದ ಓಟಗಾರ್ತಿ ಹಿಮಾದಾಸ್ ಅವರ ಹೆಸರನ್ನು ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್-ನಿರ್ಮಿತ ಶೂ ಮೇಲೆ ಪ್ರಿಂಟ್ ಮಾಡಲು ತೀರ್ಮಾನ ಮಾಡಿದೆ.

ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್ ಶೂ ಮೇಲೆ ಹಿಮಾದಾಸ್ ಹೆಸರನ್ನು ಪ್ರಿಂಟ್ ಮಾಡುವುದಾಗಿ ಅಡಿಡಾಸ್ ಭಾನುವಾರ ಹೇಳಿಕೊಂಡಿದೆ. ಇದಾದ ನಂತರ ತಮ್ಮ ಹಿಂದಿನ ದಿನಗಳನ್ನು ನೆನೆದುಕೊಂಡಿರುವ ಹಿಮಾದಾಸ್, ಒಂದು ಕಾಲದಲ್ಲಿ ನಾನು ಉಪಯೋಗಿಸುತ್ತಿದ್ದ ಮಮೂಲಿ ರನ್ನಿಂಗ್ ಶೂಗಳ ಮೇಲೆ ನಾನೇ ಅಡೀಡಸ್ ಎಂದು ಬರೆಯುತ್ತಿದೆ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಹಿಮಾದಾಸ್ ಮೊದಲು ನಾನು ಶಾಲಾ ದಿನಗಳಲ್ಲಿ ಓಡಲು ಆರಂಭಿಸಿದಾಗ ಬರಿಗಾಲಿನಲ್ಲಿ ಓಡುತ್ತಿದ್ದೆ. ಆದರೆ ಮೊದಲು ನಾನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋದಾಗ ನಮ್ಮ ತಂದೆ ಸ್ಪೈಕ್ ಶೂಗಳನ್ನು ತಂದುಕೊಟ್ಟರು. ಅದೂ ಯಾವುದೇ ಕಂಪನಿ ಆಥವಾ ಬ್ರ್ಯಾಂಡೆಡ್ ಶೂ ಆಗಿರಲಿಲ್ಲ. ಆದರೆ ಅದರ ಮೇಲೆ ನಾನು ನನ್ನ ಕೈಯಾರೆ ಅಡಿಡಾಸ್ ಎಂದು ಬರೆದುಕೊಂಡಿದ್ದೆ ಎಂದು ತನ್ನ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಹಿಮಾದಾಸ್ ಅವರು ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ಜೊತೆ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದಿದ್ದು, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಧಿ ಎಂಬುದು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದು ನಮಗೆ ಯಾರಿಗೂ ಗೊತ್ತಿಲ್ಲ. ಒಂದು ಕಾಲದಲ್ಲಿ ನನ್ನ ಶೂಗಳ ಮೇಲೆ ನಾನೇ ಅಡಿಡಾಸ್ ಎಂದು ಬರೆದುಕೊಳ್ಳುತ್ತಿದ್ದೆ. ಇಂದು ಅದೇ ಕಂಪನಿ ನನ್ನ ಹೆಸರನ್ನು ಅವರ ಬ್ರ್ಯಾಂಡೆಡ್ ಶೂ ಮೇಲೆ ಪ್ರಿಂಟ್ ಮಾಡುತ್ತಿದೆ ಎಂದು ಹಿಮಾದಾಸ್ ಹೇಳಿದ್ದಾರೆ.

ಒಂದು ಕಾಲದಲ್ಲಿ ಶೂ ಇಲ್ಲದೇ ಬರಿಗಾಲಿನಲ್ಲಿ ಓಡುತ್ತಿದ್ದ ಹಿಮಾದಾಸ್ ಫಿನ್ಲೆಂಡ್‍ನಲ್ಲಿ ನಡೆದ 2018 ರ ವಿಶ್ವ ಅಂಡರ್ -20 ಚಾಂಪಿಯನ್‍ಶಿಪ್‍ನಲ್ಲಿ 400 ಮೀಟರ್ ಸ್ಪರ್ಧೆ ಯಲ್ಲಿ ಚಿನ್ನ ಗೆದ್ದರು. ನಂತರ ಅವರನ್ನು ಜರ್ಮನಿಯ ಉನ್ನತ ಬ್ರ್ಯಾಂಡ್ ಕಂಪನಿ ಅಡಿಡಾಸ್ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿತ್ತು. ಈಗ ತಮ್ಮ ಕಂಪನಿಯ ಕಸ್ಟಮ್-ನಿರ್ಮಿತ ಶೂಗಳ ಮೇಲೆ ಆಕೆಯ ಹೆಸರನ್ನು ಪ್ರಿಂಟ್ ಮಾಡಲು ಮುಂದಾಗಿದೆ.

ಇದೇ ವೇಳೆ ಇಂಡೋನೇಷ್ಯಾದಲ್ಲಿ ನಡೆದ 2018ರ ಏಷ್ಯನ್ ಕ್ರೀಡಾಕೂಟದ ನಂತರ ಜನರು ಹಿಂದೆಂದಿಗಿಂತಲೂ ಹೆಚ್ಚು ಅಥ್ಲೆಟಿಕ್ಸ್ ಅನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ ಎಂದು ಹಿಮಾದಾಸ್ ಹೇಳಿದ್ದಾರೆ. ಹಿಮಾದಾಸ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀಟರ್ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಮಹಿಳೆಯರ 400 ಮೀಟರ್ ಮತ್ತು ಮಿಶ್ರ 400 ಮೀಟರ್ ರಿಲೇ ರೇಸ್‍ಗಳಲ್ಲಿ ತಲಾ ಒಂದು ಚಿನ್ನದ ಪದಕವನ್ನು ಗೆದ್ದಿದ್ದರು.

ನಾನು ಮುಂದೆ ನಡೆಯುವ ಟೋಕಿಯೋ ಒಲಿಂಪಿಕ್ಸ್ ಕಡೆ ಗಮನ ಹರಿಸಿದ್ದು ಅಭ್ಯಾಸ ನಡೆಸುತ್ತಿದ್ದೇನೆ. ಕೊರೊನಾ ಬಂದಿರುವುದಿರಂದ ನನಗೆ ಇದಕ್ಕೆ ಹೆಚ್ಚಿನ ಸಮಯ ಸಿಕ್ಕಿದೆ. ಸ್ಪರ್ಧೆಯಲ್ಲಿ ನಾವು ಓಡುವಾಗ ಅಭಿಮಾನಿಗಳು ನಮ್ಮ ಹೆಸರನ್ನು ಜೋರಾಗಿ ಕೂಗಿದರೆ ನಮಗೆ ಓಡಲು ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಹಿಮಾ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್ ದಂತಕಥೆ ಸಚಿನ್ ಅವರು ನನ್ನ ರೋಲ್ ಮಾಡೆಲ್ ಆಗಿದ್ದು, ಅವರನ್ನು ಭೇಟಿಯಾದ ಕ್ಷಣ ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ದಾಸ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *