ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!

Public TV
2 Min Read

ರಿಷಿ ನಾಯಕನಾಗಿ ನಟಿಸಿರುವ `ರುದ್ರ ಗರುಡ ಪುರಾಣ’ ಚಿತ್ರ ಜನವರಿ 24ರಂದು ತೆರೆಕಾಣಲಿದೆ. ಈಗಾಗಲೇ ಟೀಸರ್, ಹಾಡುಗಳ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಈ ಸಿನಿಮಾದ ಮತ್ತೊಂದು ಹಾಡು ಇದೀಗ ಬಿಡುಗಡೆಗೊಂಡಿದೆ.

ಈಗಾಗಲೇ ಟೀಸರ್ ಮತ್ತು ಒಂದಷ್ಟು ಹಾಡುಗಳೊಂದಿಗೆ ಸದರಿ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಯಾವುದೇ ಪ್ರಚಾರದ ಭರಾಟೆಗಳಿಲ್ಲದೆ ಗಟ್ಟಿ ಕಂಟೆಂಟಿನ ಮುನ್ಸೂಚನೆಯೊಂದಿಗೆ ಕುತೂಹಲ ಮೂಡಿಸಿರೋ `ರುದ್ರ ಗರುಡ ಪುರಾಣ’ದಲ್ಲೊಂದು ಪ್ರೇಮ ಕಥನವೂ ಮಿಳಿತಗೊಂಡಿದೆ. ಅದರ ಖುಷಿಯ ಭಾವದ ತೀವ್ರತೆಯನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡಂತಿರೋ ಈ ಹಾಡಿಗೀಗ ಕೇಳುಗರ ಕಡೆಯಿಂದ ವ್ಯಾಪಕ ಮೆಚ್ಚುಗೆ, ಹೆಚ್ಚೆಚ್ಚು ವೀಕ್ಷಣೆಗಳು ಸಿಗಲಾರಂಭಿಸಿವೆ.

ಅದೇನೇನೋ ಖುಷಿ ತಂದೆ, ಅದೇನೇನೋ ನಶೇ ತಂದೆ ಅಂತ ಶುರುವಾಗೋ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಇತ್ತೀಚೆಗೆ ಮತ್ತೆ ಮತ್ತೆ ಗುನುಗಿಸಿಕೊಳ್ಳೋ ಹಾಡುಗಳ ಮೂಲಕ ಹೆಸರಾಗಿರುವವರು ಸಂಜಿತ್. ಅವರ ಹಿಟ್ ಲಿಸ್ಟಿಗೆ ಈ ಹಾಡೂ ಕೂಡಾ ಸೇರಿಕೊಳ್ಳೋ ಲಕ್ಷಣಗಳಿದ್ದಾವೆ. ದೀಪಿಕಾ ವರದರಾಜನ್ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ. ಕೃಷ್ಣಪ್ರಸಾದ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಸದರಿ ಗೀತೆಗೆ ಕಾಂತಾರಾ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಮಿಸ್ಟ್ರಿ ಥ್ರಿಲ್ಲರ್ ಜಾನರಿನ ರುದ್ರ ಗರುಡ ಪುರಾಣದಲ್ಲೊಂದು ಪ್ರೇಮ ಕಥನವೂ ಇದೆ. ಪ್ರೀತಿ ಅಂದ್ರೆ ನಾನಾ ಪದರಗಳಿರುವ ಮಾಯೆ. ಅದರಲ್ಲಿ ಕಿಬ್ಬೊಟ್ಟೆಯಲ್ಲಿ ಚಿಟ್ಟೆ ಹಾರಾಡಿದಂಥಾ ಅನೂಹ್ಯ ಖುಷಿಯೂ ಸೇರಿಕೊಂಡಿದೆ. ಅಂಥಾದ್ದೊಂದು ಆಹ್ಲಾದ ತುಂಬಿಕೊಂಡಂತಿರೋ ಈ ಹಾಡು ವೇಗವಾಗಿ ಕೇಳುಗರನ್ನು ಆವರಿಸಿಕೊಳ್ಳುತ್ತಿದೆ.

ಕನ್ನಡಕ್ಕೆ ಒಂದಷ್ಟು ವಿಭಿನ್ನ ಸಿನಿಮಾಗಳನ್ನು ಕೊಟ್ಟಿರುವವರು ನಿರ್ದೇಶಕ ಜೇಕಬ್ ವರ್ಗೀಸ್. ದಶಕಗಳ ಕಾಲ ಅವರ ಗರಡಿಯಲ್ಲಿ ಪಳಗಿಕೊಂಡಿರುವ ನಂದೀಶ್ `ರುದ್ರ ಗರುಡ ಪುರಾಣ’ವನ್ನು ನಿರ್ದೇಶನ ಮಾಡಿದ್ದಾರೆ. ಜೇಕಬ್ ಅವರಿಂದ ಪ್ರಭಾವಿತರಾಗಿ, ವಿಶಿಷ್ಟ ಕಥಾ ವಸ್ತುವನ್ನು ಮುಟ್ಟುವ ಗುಣ ಹೊಂದಿರುವ ನಂದೀಶ್, ಈ ಮೂಲಕ ಹೊಸಾ ಆವೇಗದ ಕಥೆಯೊಂದಕ್ಕೆ ದೃಷ್ಯ ರೂಪ ನೀಡಿದ್ದಾರೆ. ಅದರ ಒಟ್ಟಾರೆ ಕಸುವು ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ನಲ್ಲಿ ಪ್ರತಿಫಲಿಸಿದೆ. ವಿಶೇಷವೆಂದರೆ, ಆಪರೇಷನ್ ಅಲಮೇಲಮ್ಮ, ಕವಲು ದಾರಿಯಂಥಾ ಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಿಷಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಮೈಸೂರು ಹುಡುಗಿ ಪ್ರಿಯಾಂಕಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಮಿಸ್ಟ್ರಿ ಥ್ರಿಲ್ಲರ್ ಬಗೆಯ ಸಿನಿಮಾ. ಒಂದು ಘಟನೆಯ ಬಗ್ಗೆ ತನಿಖೆಗಿಳಿಯುತ್ತಾ, ಪ್ರೇಕ್ಷಕರೆದುರು ಹೊಸಾ ಜಗತ್ತೊಂದು ತೆರೆದುಕೊಂಡು ಹೋಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈಗಿರುವ ಕ್ರೇಜ್ ಅನ್ನು ಆಧರಿಸಿ ಹೇಳೋದಾದರೆ, ರುದ್ರ ಗರುಡ ಪುರಾಣ ಈ ವರ್ಷದ ಆರಂಭವನ್ನು ಗೆಲುವಿನ ಮೂಲಕ ಕಳೆಗಟ್ಟಿಸುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

 

Share This Article