ಲೋಕಸಭೆಯಲ್ಲಿ ಹೈಡ್ರಾಮಾ: ಕಲಾಪದಲ್ಲಿ ಕೈಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಸಂಸದರು

Public TV
1 Min Read

ನವದೆಹಲಿ: ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು ಕಲಾಪದ ವೇಳೆ ಕೈಕೈ ಮಿಲಾಯಿಸಿದ ಪ್ರಸಂಗ ಇಂದು ನಡೆಯಿತು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಾಠಿಯಿಂದ ಹೊಡೆಯಬೇಕು ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆ ಇಂದೂ ಕೂಡ ಕಲಾಪದಲ್ಲಿ ಪ್ರಸ್ತಾಪವಾಯಿತು. ಪ್ರಶ್ನೋತ್ತರ ಸಮಯದಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದ ಪೂರಕ ಪ್ರಶ್ನೆಗಳನ್ನು ಕೇಳಲು ಸ್ಪೀಕರ್ ಬಿರ್ಲಾ ಅವರು ರಾಹುಲ್ ಗಾಂಧಿ ಅವರಿಗೆ ಕೇಳಿದರು. ಆಗ ಪ್ರಶ್ನೆಯನ್ನು ಕೇಳಲು ಮುಂದಾಗುತ್ತಿದ್ದಂತೆ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು, ಪ್ರಧಾನಿ ಬಗ್ಗೆ ರಾಹುಲ್ ಗಾಂಧಿ ಅವರ ವಿಲಕ್ಷಣ ಹೇಳಿಕೆಯನ್ನು ಸದನವು ಖಂಡಿಸಬೇಕು ಎಂದು ಆಗ್ರಹಿಸಿದರು.

ಹರ್ಷವರ್ಧನ್ ಒತ್ತಾಯದ ಬೆನ್ನಲ್ಲೇ ಬಿಜೆಪಿ ಸಂಸದರು ಜೋರು ಧ್ವನಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮಧ್ಯೆ ಕಾಂಗ್ರೆಸ್ ಸದಸ್ಯರೊಬ್ಬರು ಆಡಳಿತ ಪಕ್ಷದ ಮುಂದಿನ ಸಾಲಿಗೆ ತಲುಪಿದ್ದು ಮತ್ತಷ್ಟು ಗಲಾಟೆಗೆ ಕಾರಣವಾಯಿತು.

ತಮಿಳುನಾಡಿನ ಕಾಂಗ್ರೆಸ್ ಸಂಸದ ಟ್ಯಾಗೋರ್ ಅವರು ಹರ್ಷವರ್ಧನ್ ಮುಂದೆ ಆಗಮಿಸಿದರು. ಅವರನ್ನು ತಡೆಯಲು ಅನೇಕ ಸಚಿವರು ಮತ್ತು ಬಿಜೆಪಿ ಸಂಸದರು ಮುಂದೆ ಬಂದರು. ಟ್ಯಾಗೋರ್ ನಂತರ, ಕೇರಳದ ಕಾಂಗ್ರೆಸ್ ಸಂಸದರೊಬ್ಬರು ಸಹ ಆಡಳಿತ ಪಕ್ಷದತ್ತ ಬಂದರು. ಈ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಸೇರಿದಂತೆ ಅನೇಕ ಸಚಿವರು ಮತ್ತು ಬಿಜೆಪಿ ಸದಸ್ಯರು ಅವರನ್ನು ತಡೆಯಲು ಮುಂದಾದರು. ಆದರೆ ಕಾಂಗ್ರೆಸ್ ಸಂಸದರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು.

ಕಾಂಗ್ರೆಸ್-ಬಿಜೆಪಿ ನಾಯಕರು ಕೈಕೈ ಮಿಲಾಯಿಸಿದ್ದು ಕಲಾಪವನ್ನು ಕೋಲಾಹಲಕ್ಕೆ ನೂಕಿತು. ಆಗ ಸ್ಪೀಕರ್ ಬಿರ್ಲಾ ಅವರು ಸಭೆಯನ್ನು ಮಧ್ಯಾಹ್ನ ಒಂದು ಗಂಟೆಯವರೆಗೆ ಮುಂದೂಡಿದರು.

Share This Article
Leave a Comment

Leave a Reply

Your email address will not be published. Required fields are marked *