ಶಾಲೆಯಲ್ಲೇ ಹಿರಿಯ ವಿದ್ಯಾರ್ಥಿಗೆ ಚಾಕು ಇರಿತ – ಚಿಕಿತ್ಸೆ ಫಲಿಸದೇ ಬಾಲಕ ಸಾವು

Public TV
2 Min Read

ಅಹಮದಾಬಾದ್‌: ಶಾಲೆಯಲ್ಲಿ (School) ಜಗಳ ನಡೆಯುವ ವೇಳೆ ಸಹಪಾಠಿಯಿಂದ ಚೂರಿ ಇರಿತಕ್ಕೆ ಒಳಗಾದ ವಿದ್ಯಾರ್ಥಿ (Student) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಅಹಮದಾಬಾದ್‌ನ ಸೆವೆಂತ್-ಡೇ ಅಡ್ವೆಂಟಿಸ್ಟ್ ಶಾಲೆಯಲ್ಲಿ (Ahmedabad School Stabbing) ಮಂಗಳವಾರ 8ನೇ ತರಗತಿಯ ವಿದ್ಯಾರ್ಥಿ ಜೊತೆ 10ನೇ ತರಗತಿಯ ವಿದ್ಯಾರ್ಥಿಗೆ ಜಗಳ ನಡೆದಿತ್ತು. ಈ ವೇಳೆ 8ನೇ ತರಗತಿ ವಿದ್ಯಾರ್ಥಿ ಹಿರಿಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿದ್ದ.

ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಈ ವಿಚಾರ ತಿಳಿದು ಮಕ್ಕಳ ಪೋಷಕರು ಶಾಲೆಗೆ ನುಗ್ಗಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.  ಇದನ್ನೂ ಓದಿ: 12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

ಬಾಲಕ ಕುಟುಂಬಸ್ಥರು, ಸಿಂಧಿ ಸಮುದಾಯದ ಸದಸ್ಯರು ಮತ್ತು ಇತರ ಪೋಷಕರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕೊಲೆ ಮಾಡಿದ ಬಾಲಕ ಮುಸ್ಲಿಮ್‌ ಧರ್ಮಕ್ಕೆ ಸೇರಿದ್ದರೆ ಕೊಲೆಯಾದ ವಿದ್ಯಾರ್ಥಿ ಹಿಂದೂ ಧರ್ಮಕ್ಕೆ ಸೇರಿದ್ದರಿಂದ ಪ್ರತಿಭಟನೆ ಜೋರಾಗಿದೆ. ಪ್ರತಿಭಟನಾಕಾರರು ಶಾಲೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಈಗ ಪೋಷಕರ ಜೊತೆ ಹಿಂದೂ ಸಂಘಟನೆಗಳು ಶಾಲೆಯ ಪ್ರಿನ್ಸಿಪಾಲ್‌ ಮತ್ತು ಆಡಳಿತ ಮಂಡಳಿಯ ವಿರುದ್ಧ ದೂರು ನೀಡಿವೆ.

ಜಂಟಿ ಪೊಲೀಸ್ ಆಯುಕ್ತ ಜೈಪಾಲ್ ಸಿಂಗ್ ರಾಥೋಡ್ ಪ್ರತಿಕ್ರಿಯಿಸಿ, ಪೊಲೀಸರು ನಿನ್ನೆಯೇ ಎಫ್‌ಐಆರ್ ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ, ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ. ನಂತರ ಮೃತನ ಕುಟುಂಬ, ಇತರ ವಿದ್ಯಾಳ ಪೋಷಕರು ಮತ್ತು ಸಿಂಧಿ ಸಮುದಾಯದ ಸದಸ್ಯರು ಒಟ್ಟುಗೂಡಿದ್ದಾರೆ. ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

Share This Article