ಸಿಎಂ ಜಿಲ್ಲೆಯಲ್ಲೇ ಆಟೋ, ಟ್ಯಾಕ್ಸಿ ಚಾಲಕರಿಗೆ ಆರ್‌ಟಿಒ ಅಧಿಕಾರಿಗಳಿಂದ ಪಂಗನಾಮ

Public TV
1 Min Read

– ಕೊರೊನಾ ಪರಿಹಾರದಲ್ಲೂ ವಸೂಲಿಗಿಳಿದ ಆಫೀಸರ್ಸ್

ಶಿವಮೊಗ್ಗ: ಕೊರೊನಾ ವೈರಸ್ ಕಾಣಿಸಿಕೊಂಡ ದಿನದಿಂದಲೂ ಒಬ್ಬೊಬ್ಬರು ಒಂದೊಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿಯೂ ಅತೀ ಹೆಚ್ಚು ಸಮಸ್ಯೆಗೆ ಒಳಗಾದವರು ಅಂದ್ರೆ ದಿನ ದುಡಿಮೆಯ ಕಾರ್ಮಿಕರು. ಹೀಗಾಗಿ ರಾಜ್ಯ ಸರ್ಕಾರ ಇವರ ನೆರವಿಗೆ ನಿಂತಿದೆ. ಅದರಲ್ಲೂ ವಸೂಲಿ ಶುರುವಾಗಿದೆ.

ಹೌದು. ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಆಟೋ ಚಾಲಕರು ಅಧಿಕಾರಿಗಳಿಗೆ ಧಿಕ್ಕಾರ ಹಾಕಿದ್ದಾರೆ. ಕೊರೊನಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಇದರಲ್ಲೂ ಲಾಭ ಮಾಡೋಕೆ ಹೊರಟಿರೋ ಆರ್‌ಟಿಒ ಬ್ರೋಕರ್ ಗಳು ಸುಲಿಗೆಗೆ ಇಳಿದಿದ್ದಾರೆ.

ಹಣ ಪಡೆಯಲು ಆನ್‍ಲೈನ್‍ನಲ್ಲಿ ಅರ್ಜಿ ಹಾಕುತ್ತೇವೆ. ಒಂದು ಅರ್ಜಿ ಹಾಕಲು 120 ರೂಪಾಯಿ ಕೊಡಬೇಕು ಅಂತೇಳಿ ನಂಬಿಸಿದ್ದಾರೆ. 5 ಸಾವಿರ ಬರುತ್ತಲ್ಲ ಅಂತ ಶಿವಮೊಗ್ಗ ನಗರವೊಂದರಲ್ಲೇ ಸುಮಾರು 300 ರಿಂದ 400 ಮಂದಿ ಚಾಲಕರು ಈ ರೀತಿ ಹಣ ನೀಡಿ ಕಳೆದುಕೊಂಡಿದ್ದಾರೆ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಅಲ್ಲಾಭಕ್ಷಿ ಅಳಲು ತೋಡಿಕೊಂಡಿದ್ದಾರೆ.

ಇದೆಲ್ಲಾ ಗೊಂದಲಗಳನ್ನು ನೋಡಿಯೇ ಶುಕ್ರವಾರ ಸಾರಿಗೆ ಆಯುಕ್ತರು ಇದಕ್ಕೆ ತೆರೆಯೆಳೆದು ಪರಿಹಾರದ ಹಣವನ್ನು ಆನ್‍ಲೈನ್ ಮೂಲಕವೇ ತಲುಪಿಸುತ್ತೇವೆಂದು ಪ್ರಕಟಣೆ ಹೊರಡಿಸಿದ್ದಾರೆ. ಈ ಅನುದಾನ ಸುಮಾರು 7 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಡ್ರೈವರ್‍ಗಳಿಗೆ ಸಿಗಲಿದೆ.

ಒಟ್ಟಾರೆ ಸರ್ಕಾರ ಒಳ್ಳೆಯ ಉದ್ದೇಶದಿಂದ ಯೋಜನೆ ಜಾರಿಗೊಳಿಸಿದರೆ, ಅದನ್ನು ದುರುಪಯೋಗ ಮಾಡಿಕೊಳ್ಳುವವರು, ಬಂಡವಾಳ ಮಾಡಿಕೊಳ್ಳುವವರು ಹಲವು ಮಂದಿ ಹುಟ್ಟಿಕೊಳ್ಳುತ್ತಾರೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆ. ಹೀಗಾಗಿಯೇ ಚಾಲಕರು ಇಂತಹ ಮೋಸಕ್ಕೆ ಒಳಗಾಗಿ ಹಣ ಕಳೆದುಕೊಳ್ಳಬೇಡಿ ಎಂದು ಆಟೋ ಚಾಲಕರ ಸಂಘದ ಮುಖಂಡರು ಚಾಲಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಅರ್ಜಿ ಹೆಸರಿನಲ್ಲಿ ಚಾಲಕರಿಂದ ಹಣ ವಸೂಲಿಗೆ ಇಳಿದಿದ್ದ ಬ್ರೋಕರ್ ಗಳ ವಿರುದ್ದ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *