ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ಹಾಗೂ ಬಿಜೆಪಿ ನಡವಳಿಕೆ ಬಗ್ಗೆ ಆರ್‌ಎಸ್‌ಎಸ್ ಗರಂ ಆಗಿದೆ. ಶನಿವಾರ ರಾತ್ರಿ ಮೂರು ಗಂಟೆಗಳ ಕಾಲ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ಕಿಡಿಕಾರಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನೂ ಆರ್‌ಎಸ್‌ಎಸ್ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಹೊರಗಿಟ್ಟು ಸಭೆ ನಡೆಸಲು ಆರ್‌ಎಸ್‌ಎಸ್ ಮುಂದಾಗಿತ್ತು. ಬಿಜೆಪಿ ಹೈಕಮಾಂಡ್ ನಾಯಕರೊಬ್ಬರ ಮನವಿ ಬಳಿಕ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿತು. ಇದನ್ನೂ ಓದಿ: ಆಂಜನೇಯಸ್ವಾಮಿ ಕನ್ನಡ ನಾಡಿನ ಪುತ್ರ: ಬೊಮ್ಮಾಯಿ
ಸಭೆ ಆರಂಭವಾಗುತ್ತಿದ್ದಂತೆ ಆರ್‌ಎಸ್‌ಎಸ್ ಮುಖಂಡರೊಬ್ಬರು ಗರಂ ಆದರು. ನಾವು ನಿಮ್ಮನ್ನು ಬಿಟ್ಟು ಸಭೆ ಮಾಡಬೇಕೆಂದು ತೀರ್ಮಾನ ಮಾಡಿದ್ದೆವು. ಆದರೆ ಜನತೆಗೆ ತಪ್ಪು ಸಂದೇಶ ಹೋಗುತ್ತೆ ಅಂತಾ ರಾಷ್ಟ್ರೀಯ ನಾಯಕರೊಬ್ಬರು ಮನವಿ ಮಾಡಿಕೊಂಡರು. ಅದಕ್ಕಾಗಿ ನಿಮ್ಮ ನಾಲ್ವರನ್ನು ಸಭೆಗೆ ಆಹ್ವಾನಿಸಿದ್ದು ಎಂದು ಆರಂಭದಲ್ಲೇ ತರಾಟೆಗೆ ತೆಗೆದುಕೊಂಡರು.
ಮೂರು ಗಂಟೆ ಸಭೆಯಲ್ಲಿ ಪಕ್ಷ, ಸರ್ಕಾರಕ್ಕೆ ಆರ್‌ಎಸ್‌ಎಸ್ ಬುದ್ದಿಮಾತು ಹೇಳಿದೆ. ಪಕ್ಷದಲ್ಲಿ ಬರೀ ಗೊಂದಲ, ಒಬ್ಬೊಬ್ಬ ಒಂದೊಂದು ಮಾತಾಡ್ತಾನೆ, ಯಾರು ಜವಾಬ್ದಾರಿ ಹೊರುತ್ತಾರೆ? ಸಂಪುಟ ಪುನಾರಚನೆ, ಕೆಲ ಬದಲಾವಣೆಗಳ ಕುರಿತು ಎಲ್ಲರೂ ಅವರ ಮೂಗಿನ ನೇರಕ್ಕೆ ಮಾತಾಡುತ್ತಾರೆ. ಕೆಲವರು ಪಕ್ಷದ ವಿಚಾರದಲ್ಲೂ ಬಹಿರಂಗವಾಗಿ ಏನೇನೋ ಮಾತಾಡುತ್ತಿದ್ದಾರೆ. ಯಾರು ಅವರಿಗೆಲ್ಲ ಅಧಿಕಾರ ಕೊಟ್ಟವರು ಎಂದು ಆರ್‌ಎಸ್‌ಎಸ್ ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ, ಕಾಂಗ್ರೆಸ್ ವಂಶವಾದವನ್ನು ಮಾತ್ರ ಬಿಡಲ್ಲ: ಬಿಜೆಪಿ
ಪಕ್ಷದ ವಕ್ತಾರ ಎಲ್ಲಿದ್ದಾರೆ? ಏನ್ ಮಾತಾಡ್ತಿದ್ದಾರೆ? ಸರ್ಕಾರಕ್ಕೆ ಯಾರಾದರೂ ವಕ್ತಾರರು ಇದ್ದಾರಾ? ರಾಜಕೀಯ ನಿರ್ಣಯಗಳು ಹಾಗೂ ಸರ್ಕಾರದ ನಿರ್ಣಯಗಳ ವೇಳೆ ಯಾರು ಮಾತನಾಡ್ತಾರೆ? ರಾಜಕೀಯ ನಿರ್ಣಯ, ಸರ್ಕಾರದ ನಿರ್ಣಯದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿ ರಾಜಕಾರಣ ನಮಗೆ ಮುಖ್ಯ. ಆದರೆ ಆ ಕೆಲಸ ಯಾರು ಮಾಡುತ್ತಿದ್ದಾರೆ? ಸರ್ಕಾರದ ಕೆಲಸಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ, ಬರೀ ವಿವಾದಗಳ ಬಗ್ಗೆ ಮಾತಾಡುತ್ತಾರೆ. ಇದು ಸರ್ಕಾರ, ಪಕ್ಷಕ್ಕೆ ಒಳ್ಳೆ ಹೆಸರು ತರುತ್ತಾ ಎಂದು ಸಿಎಂ, ರಾಜ್ಯಾಧ್ಯಕ್ಷ ಇಬ್ಬರ ಮೇಲೂ ಆರ್‌ಎಸ್‌ಎಸ್ ಕಿಡಿಕಾರಿತು.