ಖರೀದಿಸಿದ ದರದಲ್ಲೇ RSSನಿಂದ ತರಕಾರಿ ಮಾರಾಟ

Public TV
1 Min Read

– ಮನೆಬಾಗಿಲಿಗೆ ತರಕಾರಿ ಹಂಚಿಕೆ

ಚಿಕ್ಕಮಗಳೂರು: ಜಿಲ್ಲೆಯ ಆರ್‌ಎಸ್‌ಎಸ್ ಸಂಚಾಲಿತ ಸೇವಾಭಾರತಿ ವತಿಯಿಂದ ಪ್ರತಿ ದಿನ 12 ಲಗೇಜ್ ಆಟೋಗಳಲ್ಲಿ ಇಡೀ ಚಿಕ್ಕಮಗಳೂರು ನಗರಕ್ಕೆ  ತರಕಾರಿ ಹಂಚುತ್ತಿದ್ದು, ಯಾವುದೇ ಲಾಭ ಪಡೆಯದೆ ಎಪಿಎಂಸಿ ಹಾಗೂ ರೈತರ ಬಳಿ ಖರೀದಿಸಿದ ದರಕ್ಕೆ ಮನೆ ಬಾಗಿಲಿಗೆ ತಲುಪಿಸುತ್ತಿದೆ.

ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಒಂದೆಡೆ ಪೊಲೀಸರ ಭಯ, ಮತ್ತೊಂದೆಡೆ ಕೊರೊನಾದ ಆತಂಕ. ಇನ್ನೊಂದೆಡೆ ಇದನ್ನೇ ಲಾಭವಾಗಿಸಿಕೊಂಡ ಕೆಲ ವ್ಯಾಪಾರಿಗಳು ಬೇಕಾಬಿಟ್ಟಿಯಾಗಿ ದರ ಹೆಚ್ಚಿಸಿ ತರಕಾರಿ ಮಾರುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಅಂತರವನ್ನು ಸಹ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಜನಸಾಮಾನ್ಯರು ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ.

ಇದನ್ನು ತಪ್ಪಿಸಲು ಆರ್‌ಎಸ್‌ಎಸ್ ಸಂಚಾಲಿತ ಸೇವಾಭಾರತಿ ತಂಡ ಜನರಿಗೆ ಸಹಾಯ ಮಾಡುತ್ತಿದ್ದು, ಕೊಂಡ ರೇಟಿಗೆ ಮನೆ ಬಾಗಿಲಿಗೆ ತರಕಾರಿ ತಲುಪಿಸುತ್ತಿದೆ. ಕೆಲ ತರಕಾರಿಗಳನ್ನು ಹೊಲಗದ್ದೆಗಳಿಗೆ ಹೋಗಿ ರೈತರಿಂದ ಖರೀದಿಸುತ್ತಾರೆ. ಮತ್ತೆ ಕೆಲವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ಪ್ರತಿ ದಿನ 12 ಲಗೇಜ್ ಆಟೋಗಳಲ್ಲಿ ತರಕಾರಿ ಪೂರೈಸುತ್ತಿದ್ದು, ದಿನಕ್ಕೆ ಎರಡ್ಮೂರು ರೌಂಡ್ ಹೊಡೆದು ತರಕಾರಿ ಮಾರುತ್ತಿದ್ದಾರೆ.

ರೈತರಿಂದ ತಂದ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಂಡ ತರಕಾರಿಯನ್ನ ಸೇವಾಭಾರತಿ ಕಾರ್ಯಕರ್ತರು ಅದೇ ರೇಟಿಗೆ ಜನರಗೆ ಮಾರುತ್ತಿದ್ದಾರೆ. ಸಂತೋಷ್ ಕೊಟ್ಯಾನ್, ಮಲ್ಲಿಕಾರ್ಜುನ್, ಶಾಮ, ರಮೇಶ್ ಗವನಹಳ್ಳಿ ನೇತೃತ್ವದ ಈ ಸೇವಾಭಾರತಿ ತಂಡದಲ್ಲಿ ಸುಮಾರು 70 ಜನ ಯುವಕರು ಕೆಲಸ ಮಾಡುತ್ತಿದ್ದು, ಚಿಕ್ಕಮಗಳೂರು ನಗರದ ಜನರಿಗೆ ಸಹಕಾರಿಗಳಾಗಿದ್ದಾರೆ. ವ್ಯಾಪಾರಿಗಳು 10-20 ರೂಪಾಯಿಗೆ ತಂದು 40-50-60 ರೂಪಾಯಿಗೆ ಮಾರುತ್ತಿದ್ದ ತರಕಾರಿಯನ್ನ ಈ ತಂಡ 10 ರೂಪಾಯಿಗೆ ತಂದು 10 ರೂಪಾಯಿಗೆ ಮಾರುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಅನುಕೂಲವಾಗಿದ್ದು, ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *