ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಫೈಟ್ ಜೋರಾಗಿದೆ. ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ (Chittapur) ಇಲ್ಲಿಯವರೆಗೆ ಪಥಸಂಚಲನಕ್ಕೆ ಅನುಮತಿ ಸಿಕ್ಕಿಲ್ಲ.
100ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಆರ್ಎಸ್ಎಸ್ ತಾಲೂಕು ಆಡಳಿತವನ್ನು ಕೇಳಿತ್ತು. ಅನುಮತಿ ಕೇಳಿದ ನಂತರ ತಾಲೂಕು ತಹಶೀಲ್ದಾರ ನಾಗಯ್ಯ 12 ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗೆ ಆರ್ಎಸ್ಎಸ್ ಉತ್ತರ ನೀಡಿದ್ದರೂ ಮಧ್ಯರಾತ್ರಿ 11 ಗಂಟೆಯವರೆಗೂ ಅನುಮತಿ ಸಿಕ್ಕಿಲ್ಲ. ಯಾವ ಕಾರಣಕ್ಕೆ ಅನುಮತಿ ನೀಡಿಲ್ಲ ಎನ್ನುವುದರ ಬಗ್ಗೆ ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ವಿವರ ನೀಡಿಲ್ಲ ಇದನ್ನೂ ಓದಿ: RSS ಪಥ ಸಂಚಲನ – ಚಿತ್ತಾಪುರದಲ್ಲಿ ಹಾಕಿದ್ದ ಬ್ಯಾನರ್, ಬಂಟಿಂಗ್ ತೆರವು
ಚಿತ್ತಾಪುರ ತಹಶೀಲ್ದಾರ್ ಕೇಳಿರುವ 12 ಪ್ರಶ್ನೆಗಳು ಏನು?
1.ಪಥ ಸಂಚಲನಲ್ಲಿ ಎಷ್ಟು ಜನ ಭಾಗವಹಿಸುತ್ತಿರಿ? ಆ ವಿವರ ನೀಡಿ?
2.ಪಥ ಸಂಚಲನದಲ್ಲಿ ಚಿತ್ತಾಪೂರ ತಾಲೂಕು ಹೊರತು ಪಡಿಸಿ ಬೇರೆ ತಾಲೂಕಾ ಅಥವಾ ಬೇರೆ ಜಿಲ್ಲೆಯ ಎಷ್ಟು ಜನರು ಭಾಗವಹಿಸುತ್ತಾರೆ?
3.ಬಜಾಜ ಕಲ್ಯಾಣ ಮಂಟಪ ಆವರಣದ ಮಾಲೀಕರ ಅನುಮತಿ ಪತ್ರ ಸಲ್ಲಿಸಿಲ್ಲ ಯಾಕೆ?
4. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತಾ ಕ್ರಮ ವಹಿಸುವ ಒಪ್ಪಿಗೆ ಪತ್ರ ಸಲ್ಲಿಸಿಲ್ಲ ಯಾಕೆ?
5. ಲಾಠಿ ಅಥವಾ ಆಯುಧಗಳ ಕುರಿತು ಮಾಹಿತಿ ನೀಡಿಲ್ಲ ಯಾಕೆ?
6. ತಮ್ಮ ಸಂಘದ ನೋಂದಣಿ ಪ್ರಮಾಣ ಪತ್ರದ ದೃಢೀಕರಣ ಪ್ರತಿ ಸಲ್ಲಿಸಿಲ್ಲ ಯಾಕೆ?
7. ಸದರಿ ಕಾರ್ಯಕ್ರಮದಲ್ಲಿ ಯಾರು ಮುಖ್ಯ ಭಾಷಣಕಾರರು ಭಾಗವಹಿಸುವದರ ಬಗ್ಗೆ ಅವರ ಪೂರ್ಣ ಮಾಹಿತಿ ಸಲ್ಲಿಸಿಲ್ಲ ಯಾಕೆ?
8. ಪಥ ಸಂಚಲನದ ಕಾರ್ಯಕ್ರಮ ಕುರಿತು ತುರ್ತು ಸಂವಹನ ಕೈಗೊಳ್ಳಲು ಜವಾಬ್ದಾರಿಯುತ 10 ಜನ ಸ್ಥಳೀಯ ಮುಖಂಡರ ಮಾಹಿತಿ ನೀಡಿಲ್ಲ ಯಾಕೆ?
9. ಈ ಕಾರ್ಯಕ್ರಮವು ಸ್ಥಳಿಯ ಚಿತ್ತಾಪೂರ ಘಟಕದಿಂದ ಕೈಗೊಳ್ಳುತ್ತಿದ್ದಿರೋ ಅಥವಾ ಮತ್ಯಾವ ಘಟಕದಿಂದ ಕೈಗೊಳ್ಳುತ್ತಿರುವ ಬಗ್ಗೆ ಸ್ಪಷ್ಟಿಕರಣ ನೀಡಿ
10. ಈ ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದು ಆದರೆ ಮುಕ್ತಾಯದ ಸಮಯದ ಬಗ್ಗೆ ಮಾಹಿತಿ ನೀಡಿಲ್ಲ ಯಾಕೆ?
11. ಪಥ ಸಂಚಲನಾ ಕಾರ್ಯಕ್ರಮದ ಮೂಲ ಉದ್ದೇಶದ ಏನು? ವಿವರ ನೀಡಿ.
12. ಉಲ್ಲೇಖದ ತಮ್ಮ ಮನವಿ ಪತ್ರದಲ್ಲಿ ಅಕ್ಟೋಬರ್ 17ರಂದು ವಿನಂತಿ ಪತ್ರ ನೀಡಿರುತ್ತೇವೆ ಎಂದು ತಿಳಿಸಿದ್ದೀರಿ. ಆದರೆ ತಾವು ನಮ್ಮ ಕಛೇರಿಗೆ ಯಾವುದೇ ಮನವಿ ಪತ್ರ ಸಲ್ಲಿಸಿಲ್ಲ.