ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

Public TV
1 Min Read

ನವದೆಹಲಿ: ಬಿಜೆಪಿಯಲ್ಲಿ (BJP) ಮತ್ತೆ 75 ವರ್ಷಕ್ಕೆ ರಾಜಕೀಯ ನಿವೃತ್ತಿ ವಿಷಯ ಚರ್ಚೆಗೆ ಬಂದಿದೆ. 75ನೇ ವರ್ಷಕ್ಕೆ ಕಾಲಿಡುವುದು ಪ್ರಕೃತಿಯು ವಿರಾಮ ತೆಗೆದುಕೊಂಡು ಇತರರಿಗೆ ದಾರಿ ಮಾಡಿಕೊಡುವ ಸಂಕೇತವಾಗಿದೆ ಎಂದು ಮೋಹನ್ ಭಾಗವತ್ (Mohan Bhagwat) ಹೇಳಿಕೆ ವ್ಯಾಪಕ ಚರ್ಚೆಗೀಡಾಗಿದೆ.

ನಾಗ್ಪುರದಲ್ಲಿ ಆರ್‌ಎಸ್‌ಎಸ್ ಚಿಂತಕ ಮೊರೋಪಂತ್ ಪಿಂಗಳೆ ಸ್ಮರಣಾರ್ಥ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವತ್ ಮಾತಾಡಿದ್ದರು. ಪಿಂಗಳೆ ಅವರು ರಾಷ್ಟ್ರೀಯ ಸೇವೆಗೆ ಸಮರ್ಥವಾಗಿ ಬದ್ಧರಾಗಿದ್ದರೂ, ವಯಸ್ಸು ಆದ ನಂತರ ಸೊಗಸಾಗಿ ಮುಖ್ಯವಾಹಿನಿಯಿಂದ ಹಿಂದೆ ಸರಿಯುವುದರಲ್ಲಿ ನಂಬಿಕೆ ಇಟ್ಟಿದ್ದರು ಅಂದಿದ್ದಾರೆ. ಈ ಹೇಳಿಕೆಯನ್ನು ವಿಪಕ್ಷಗಳು ಬಳಕೆ ಮಾಡಿಕೊಂಡು ಬಿಜೆಪಿ ಮೇಲೆ ಮುಗಿಬಿದ್ದಿವೆ.

ಸೆಪ್ಟೆಂಬರ್ 17ಕ್ಕೆ ಮೋದಿ 75ನೇ ವರ್ಷ ಪೂರೈಸಲಿದ್ದಾರೆ. ಇದು ಪ್ರಧಾನಿ ಮೋದಿಗೆ (Narendra Modi) ಪರೋಕ್ಷವಾಗಿ ಹೇಳಿರೋದು ಅಂತ ವಿಪಕ್ಷಗಳು ಪ್ರತಿಕ್ರಿಯಿಸಿವೆ. ಉದ್ಧವ್ ಶಿವಸೇನೆ ಸಂಸದ ಸಂಜಯ್ ರಾವತ್ ಪ್ರತಿಕ್ರಿಯಿಸಿ `ಮೋದಿ ಅವರು ಎಲ್‍ಕೆ ಅಡ್ವಾಣಿ, ಜಸ್ವಂತ್ ಸಿಂಗ್ ಮತ್ತು ಮುರಳಿ ಮನೋಹರ್ ಜೋಶಿಯಂತಹ ಹಿರಿಯ ನಾಯಕರನ್ನು 75 ರ ನಂತರ ನಿವೃತ್ತಿ ಹೊಂದುವಂತೆ ಒತ್ತಾಯಿಸಿದ್ದರು. ಅವರು ಅದೇ ಮಾನದಂಡಕ್ಕೆ ಬದ್ಧರಾಗುತ್ತಾರೆಯೇ ಎಂದು ನೋಡೋಣ ಎಂದಿದ್ದಾರೆ.

ಕಾಂಗ್ರೆಸ್‍ನ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ವಿದೇಶ ಪ್ರವಾಸ ಮುಗಿಸಿ ನೀವು ಭಾರತಕ್ಕೆ ಹಿಂತಿರುಗುತ್ತಿರುವ ಸಂದರ್ಭದಲ್ಲಿ ಎಂತಹ ಸುದ್ದಿಯಾಗಿದೆ. ಸೆಪ್ಟೆಂಬರ್ 17ಕ್ಕೆ ನಿಮಗೆ 75 ವರ್ಷ ತುಂಬುತ್ತದೆ ಎಂದು ಸರಸಂಘಚಾಲಕ್ ನೆನಪಿಸಿದ್ದಾರೆ ಎಂದು ಕಾಲೆಳೆದಿದ್ದಾರೆ. ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಮಾತಾಡಿ, ಬೇರೆಯವರಿಗೆ ಬೋಧಿಸುವ ಮುನ್ನ ತಾವು ಅಭ್ಯಾಸ ಮಾಡಬೇಕು ಅಂತ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.

Share This Article