ಚಾ.ನಗರ| ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟವಾಡಿದ್ರೆ 50,000 ದಂಡ – ಮಾಹಿತಿ ಕೊಟ್ಟವರಿಗೆ 10,000 ಬಹುಮಾನ

Public TV
2 Min Read

ಚಾಮರಾಜನಗರ: ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಜೂಜಾಟಕ್ಕೆ ಕೂಲಿ ಹಣವನ್ನು ಬಳಸುತ್ತಿದ್ದಾರೆ. ಹೀಗೆ ಬಿಡುವುದು ಸರಿಯಲ್ಲ ಎಂದು ಗ್ರಾಮಸ್ಥರು ದಿಟ್ಟ ನಿರ್ಧಾರ ಕೈಗೊಂಡು ಗ್ರಾಮದಲ್ಲಿ ದಂಡಾಸ್ತ್ರ ಪ್ರಯೋಗ ಮಾಡಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಎಂಬ ಊರಲ್ಲಿ ಅಕ್ರಮ ಮದ್ಯ ಮಾರಾಟಗಾರರಿಗೆ, ಕದ್ದುಮುಚ್ಚಿ ಜೂಜಾಟ ಆಡಿಸುತ್ತಿದ್ದವರಿಗೆ ಎಲ್ಲಾ ಸಮುದಾಯದ ಯಜಮಾನರು ಬಿಸಿ ಮುಟ್ಟಿಸಿದ್ದಾರೆ. ಮದ್ಯ ಮಾರಾಟ, ಜೂಜಾಟ ಕಂಡುಬಂದರೆ 50 ಸಾವಿರ ದಂಡ ಕೊಡಬೇಕೆಂಬ ನಿರ್ಣಯ ಕೈಗೊಂಡಿದ್ದಾರೆ. ಗ್ರಾಮದ ದೊಡ್ಡಮ್ಮತಾಯಿ ದೇವಸ್ಥಾನದ ಮುಂಭಾಗ ಸಭೆ ಸೇರಿದ ಉಪ್ಪಾರ ಸಮುದಾಯ, ಪರಿಶಿಷ್ಟ ಜಾತಿ, ಮುಸ್ಲಿಮರು, ವಿಶ್ವಕರ್ಮ, ಕುರುಬ, ಕುಂಬಾರ, ಮಡಿವಾಳ ಹಾಗೂ ಸವಿತ ಸಮಾಜ ಸೇರಿದಂತೆ ಎಲ್ಲಾ ಕೋಮಿನ ಯಜಮಾನರು, ಸ್ವ ಸಹಾಯ ಮಹಿಳಾ ಸಂಘದವರು ಅಕ್ರಮ ಚಟುವಟಿಕೆಗಳು ಗ್ರಾಮದಲ್ಲಿ ನಡೆಯಬಾರದೆಂದು ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದನ್ನೂ ಓದಿ: ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ 

ಗ್ರಾಮದಲ್ಲಿ ಸುಮಾರು 8 ರಿಂದ 10 ಮಂದಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಕಾರಣ ಬೆಳಗಿನ ಜಾವ 4 ಗಂಟೆಯಿಂದಲೇ ಯುವಕರು ಮದ್ಯ ಸೇವನೆಗೆ ಮುಂದಾಗುತ್ತಿದ್ದರು. ಕೆಲವರು ಕೂಲಿ ಕೆಲಸಕ್ಕೂ ಹೋಗದೇ ಕುಡಿದ ಮತ್ತಿನಲ್ಲಿ ರಸ್ತೆ ಬದಿ ಹಾಗೂ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದರು. ಈ ಮಧ್ಯೆ ಕೆಲಸಕ್ಕೆ ಹೋಗುವ ಅನೇಕ ಮಂದಿ ಮದ್ಯ ಸೇವನೆ ಮಾಡಿಯೇ ತೆರಳುತ್ತಿದ್ದರು. ಇದರಿಂದ ದುಡಿದ ಹಣ ಪೋಲಾಗುತ್ತಿತ್ತು. ಸುಮಾರು 4 ರಿಂದ 5 ಕಡೆಗಳಲ್ಲಿ ಅಕ್ರಮವಾಗಿ ಜೂಜಾಟ ಕೂಡ ನಡೆಯುತ್ತಿತ್ತು. ಇದರಿಂದ ಗ್ರಾಮದ ಕೆಲ ಮಂದಿ ಹಗಲು ರಾತ್ರಿ ಎನ್ನದೇ ಜೂಜಾಟದಲ್ಲಿ ತೊಡಗಿದ್ದರಿಂದ ಗ್ರಾಮಸ್ಥರು ಈ ದಿಟ್ಟ ನಿಲುವು ತೆಗೆದುಕೊಂಡಿದ್ದಾರೆ.

ಗ್ರಾಮದ ಎಲ್ಲಾ ಸಮುದಾಯದ ಜನರು ಒಗ್ಗೂಡಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟದ ವಿರುದ್ಧ ಸಮರ ಸಾರಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರಿಗೆ 50 ಸಾವಿರ ರೂ. ದಂಡ, ಜೂಜಾಟ ಆಡಿಸುವವರಿಗೆ 50 ಸಾವಿರ ರೂ. ದಂಡ ಮತ್ತು ಅಕ್ರಮದ ಬಗ್ಗೆ ಮಾಹಿತಿ ಹಾಗೂ ಸಾಕ್ಷಿ ಹೇಳುವವರಿಗೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಟಾಂಟಾಂ ಮಾಡಿದ್ದಾರೆ. ಸಭೆ ಸೇರಿದ ವೇಳೆಯೇ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯದ ಪೌಚುಗಳನ್ನು ಸಭೆಯಲ್ಲೇ ಸುಟ್ಟು ಹಾಕುವ ಮೂಲಕ ನಿರ್ಣಯ ಕೈಗೊಂಡಿದ್ದಾರೆ. ಇದನ್ನೂ ಓದಿ: ದೇವರಿಗೆ ಕೈ ಮುಗಿದು ತಾಳಿ ಕದ್ದ – ಅಡವಿಡಲು ಹೋಗಿ ತಗ್ಲಾಕೊಂಡ

Share This Article