ಕುರ್ಚಿ ಸಿಗುವುದೇ ಕಷ್ಟ, ಕುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು: ಡಿಕೆಶಿ

Public TV
6 Min Read

– ತುರ್ತು ಪರಿಸ್ಥಿತಿ ಸಮಯದಲ್ಲಿ ನಮ್ಮ ಮನೆ ಮೇಲೆ ರೈಡ್ ಆಗಿತ್ತು
– ನನ್ನ ತಂದೆಗೆ ನನ್ನನ್ನು ಎಂಜಿನಿಯರ್ ಮಾಡಬೇಕು ಎನ್ನುವ ಆಸೆ ಇತ್ತು
– ವಕೀಲರ ಸಂಘಕ್ಕೆ 5 ಕೋಟಿ ರೂ. ಅನುದಾನ

ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿರುವಾಗ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಕಾರ್ಯಕ್ರಮವೊಂದರಲ್ಲಿ ಕುರ್ಚಿ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ.

ವಕೀಲರ ಸಂಘದಿಂದ ಶುಕ್ರವಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು (Kempegowda Jayanthi) ಉದ್ಘಾಟಿಸಿ ಶಿವಕುಮಾರ್ ಮಾತನಾಡಿದರು. ಡಿಸಿಎಂ ಅವರು ಮಾತನಾಡುತ್ತಿದ್ದ ವೇಳೆ ಸಭಾಂಗಣದ ಇಕ್ಕೆಲಗಳಲ್ಲಿ ನಿಂತಿದ್ದ ವಕೀಲರನ್ನು ಉದ್ದೇಶಿಸಿ, ಇಷ್ಟೊಂದು ಕುರ್ಚಿಗಳಿವೆ ಬನ್ನಿ ಕುಳಿತುಕೊಳ್ಳಿ. ಕುರ್ಚಿ ಸಿಗುವುದೇ ಕಷ್ಟ. ಕುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು. ನಿಮ್ಮನ್ನು ನೋಡಿದರೆ ತ್ಯಾಗಿಗಳ ತರಹ ಕಾಣುತ್ತಾ ಇದ್ದೀರಿ ಎಂದು ಚಟಾಕಿ ಹಾರಿಸಿದರು.

ವಕೀಲರ ಬಳಿ ನ್ಯಾಯ ಕೊಡಿಸಿ ಎಂದು ಜನರು ಬರುತ್ತಾರೆ. ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡಬೇಕು. ನಿಮ್ಮ ಬಳಿ ಬಂದ ಕಕ್ಷಿದಾರನಿಗೆ ಸಂತೋಷವಾಗುವಂತೆ ಕೆಲಸ ಮಾಡಬೇಕು. ಕಪ್ಪು ಕೋಟು ಹಾಕಿದ್ದೇನೆ ಎಂದು ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ನಿಮ್ಮ ಹಾಗೂ ಪೊಲೀಸರ ನಡುವೆ ಆಗಾಗ್ಗೆ ಸಂಘರ್ಷವಾಗುತ್ತಾ ಇರುತ್ತಾರೆ. ಈ ಪೋಲಿಸರು ಮೈಮೇಲೆ ಖಾಕಿ ಬಂದ ತಕ್ಷಣ ದೇವರು ಬಂದಂತೆ ಆಡುತ್ತಾರೆ ಎಂದರು.

ಒಂದು ವಾರದೊಳಗೆ ಸಂಘದ ಕಟ್ಟಡಕ್ಕೆ ಸೋಲರ್ ಗ್ರಿಡ್ ವ್ಯವಸ್ಥೆಗೆ ಪರಿಶೀಲನೆ ನಡೆಸಲಾಗುವುದು. ಇದರ ಬಗ್ಗೆ ಹಿಂದೆಯೇ ಮಾತುಕತೆಯಾಗಿತ್ತು. ನೀವು ಅಧಿಕಾರಿಗಳ ಹಿಂದೆ ಬಿದ್ದು ಕೆಲಸ ಮಾಡಿಸಿಕೊಳ್ಳಬೇಕು. ಜೊತೆಗೆ ಈ ಸಂಸ್ಥೆಗೆ ಭೂಮಿ ಬೇಕು ಎಂದು ಹೇಳಿದ್ದೀರಿ. ಆದ ಕಾರಣಕ್ಕೆ 10 ಎಕರೆ ಕಂದಾಯ ಭೂಮಿಯನ್ನು ಲಭ್ಯತೆ ನೋಡಿಕೊಂಡು ನೀಡಲಾಗುವುದು. ನಗರದ 20 ಕಿಮೀ ವ್ಯಾಪ್ತಿಯಲ್ಲಿ ಭೂಮಿ ಇದ್ದರೆ ನೀವೆ ಹುಡುಕಿ. ನಾವು ನೀಡುವ ಹಣವನ್ನು ನಿಮಗೆ ಉಪಯೋಗವಾಗುವ ಉತ್ತಮ ಕೆಲಸಗಳಿಗೆ ವಿನಿಯೋಗಿಸಿ ಎಂದರು. ಇದನ್ನೂ ಓದಿ: 2 ಬಾರಿ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ರೂ ಡಿಕೆಶಿ ಭೇಟಿಗೆ ಅವಕಾಶ ನೀಡದ ರಾಹುಲ್‌!

ವಕೀಲರ ಸಂಘಕ್ಕೆ ಪ್ರತಿ ವರ್ಷ 5 ಲಕ್ಷ ರೂ.ವನ್ನು ಕೆಂಪೇಗೌಡ ಜಯಂತಿ ಆಚರಣೆಗೆ ನೀಡಲಾಗುವುದು. ಸಂಘದ ಉಪಯೋಗಕ್ಕಾಗಿ 5 ಕೋಟಿ ರೂ. ಜಿಬಿಎಯಿಂದ ನೀಡಲಾಗುವುದು. ಕೆಂಪೇಗೌಡ ಪ್ರಶಸ್ತಿಯನ್ನು ಕಡ್ಡಾಯವಾಗಿ ಇಬ್ಬರು ವಕೀಲರಿಗೆ ಪ್ರತಿವರ್ಷ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಯೋಜಿತ ನಗರವಲ್ಲ. ಆದರೆ ಕೆಂಪೇಗೌಡರು ಅಂದೇ ಯೋಜಿತವಾಗಿ ನಗರ ಕಟ್ಟಿದವರು. ಕೃಷ್ಣದೇವರಾಯ ಅವರ ಚಿಂತನೆಗಳನ್ನು ಇಲ್ಲಿ ಅಳವಡಿಸಿದರು. ವ್ಯಾಪಾರ ವಹಿವಾಟುಗಳನ್ನು ಬೆಳೆಸಲು ಈ ಊರನ್ನು ಕಟ್ಟಿ ಬೆಳಗಿದರು. ಅವರ ಆಚಾರ ವಿಚಾರಗಳನ್ನು ಉಳಿಸಲು ʼಗ್ರೇಟರ್ ಬೆಂಗಳೂರು ಪ್ರಾಧಿಕಾರʼದ ಮೂಲಕ ಮುಂದಡಿ ಇಟ್ಟಿದ್ದೇವೆ ಎಂದರು.

ರಾಜ್ಯಪಾಲರು ಸಹ ಶಿವಕುಮಾರ್ ದೂರದೃಷ್ಟಿ ಹೊಂದಿದ್ದಾನೆ ಎಂದು ಸಹಕಾರ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಅಶೋಕ್ ಅವರು ಸಹ ಉತ್ತಮ ಜನನಾಯಕ. ಅವರು ಸಹ ಇದಕ್ಕೆ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ ಕೋಟಿ ರೂ. ಯೋಜನೆಗಳನ್ನು ಬೆಂಗಳೂರಿನ ಅಭಿವೃದ್ದಿಗೆ ಖರ್ಚು ಮಾಡುವ ಆಲೋಚನೆ ಇದೆ ಎಂದರು.

ಕೆಂಪೇಗೌಡ ಜಯಂತಿ, ಪ್ರಾಧಿಕಾರ ಪ್ರಾರಂಭ ಮಾಡಿದವರೇ ನಾವು. ಪ್ರತಿ ಊರಿನಲ್ಲೂ ಕೆಂಪೇಗೌಡ ಜಯಂತಿ ಮಾಡಬೇಕು ಎಂದು ಹೇಳಿದವರು ನಾವೇ. ಬೆಂಗಳೂರು ನಗರ ಅಭಿವೃದ್ದಿ ಇಲಾಖೆಯನ್ನು ಛಲದಿಂದ ತೆಗೆದುಕೊಂಡಿದ್ದೇನೆ. ಈ ನಗರದ ಬಗ್ಗೆ ನನ್ನದೇ ಆದ ಕನಸುಗಳಿವೆ. ತಿಹಾರ್ ಜೈಲಿನಿಂದ ಹೊರಗೆ ಬಂದಾಗ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ನಾನು ಹುಟ್ಟುತ್ತಾ ಕೃಷಿಕ, ನಂತರ ಉದ್ಯಮಿ, ಆಕಸ್ಮಿಕವಾಗಿ ಶಿಕ್ಷಣ ಪ್ರೇಮಿ, ಆಯ್ಕೆಯಿಂದ ರಾಜಕಾರಣಿ. ರಾಜಕಾರಣಿ ಆಗಲೇ ಬೇಕು ಎಂದು ಶಾಲಾ ದಿನಗಳಲ್ಲೇ ಕನಸು ಕಂಡವನು. ಅಲ್ಲಿಂದ ಸಂಘಟನೆ ಮಾಡಿಕೊಂಡು ಬೆಳೆಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ತೆಲಂಗಾಣ ಫೈರ್ ಬ್ರಾಂಡ್ ಟಿ.ರಾಜಾ ಸಿಂಗ್ ರಾಜೀನಾಮೆ ಅಂಗೀಕರಿಸಿದ ಬಿಜೆಪಿ

ನಮ್ಮ ತಂದೆ, ತಾತನ ಹೆಸರು ಕೆಂಪೇಗೌಡ ಎಂದಿದೆ. ನನ್ನ ಮಗನ ಹೆಸರು ಆಕಾಶ್ ಕೆಂಪೇಗೌಡ, ತಮ್ಮನ ಹೆಸರೂ ಸಹ ಕೆಂಪೇಗೌಡ ಎಂದಿತ್ತು ಆನಂತರ ಸುರೇಶ್ ಎಂದು ಮಾಡಿಕೊಂಡ. ಶಿವನಿಗೆ ಹರಕೆ ಮಾಡಿಕೊಂಡು ನನಗೆ ಶಿವಕುಮಾರ್ ಎಂದು ಹೆಸರಿಟ್ಟರು. ಈ ಇತಿಹಾಸ ನನಗೆ ಗೊತ್ತಿಲ್ಲಎಂದರು.

ಉದಾರ ಮನಸ್ಸಿನಿಂದ ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರು. ನಮ್ಮ ಮೂಲವನ್ನು ಮರೆತರೆ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ನಾವು ನಾಲ್ಕು ʼಕೆʼಗಳನ್ನು ಮರೆಯಬಾರದು ಬೆಂಗಳೂರು ಕಟ್ಟಿದ ಕಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರು, ಕನ್ನಡ ಸಾಹಿತ್ಯವನ್ನು ಬೆಳಗಿದ ನಾಡಗೀತೆ ಬರೆದ ಕುವೆಂಪು ಅವರು, ವಿಕಾಸ ಸೌಧ ಕಟ್ಟಿದ ಎಸ್.ಎಂ ಕೃಷ್ಣ ಅವರು ಎಂದು ಹೇಳಿದರು.

ನನ್ನ ತಂದೆಗೆ ನನ್ನನ್ನು ಎಂಜಿನಿಯರ್ ಮಾಡಬೇಕು ಎನ್ನುವ ಆಸೆ. ಆದರೆ ನನಗೆ ವಕೀಲನಾಗುವ ಆಸೆ. ಚಿನ್ನ, ಬೆಳ್ಳಿ ಮನೆಯಲ್ಲಿಯೇ ಇರುವುದು ಸಾಮಾನ್ಯ. ತುರ್ತು ಪರಿಸ್ಥಿತಿ ಸಮಯದಲ್ಲಿ ನಮ್ಮ ಮನೆ ಮೇಲೆ ಅಧಿಕಾರಿಗಳು ರೈಡ್ ಮಾಡಿದ್ದರು. ರೈಡ್ ಮಾಡಿದ ಅಧಿಕಾರಿ ಎಂಜಿನಿಯರ್. ಅದಕ್ಕೆ ನಮ್ಮ ತಂದೆಗೆ ಓದಿಸಬೇಕು ಎನ್ನುವ ಛಲ. ಆದರೆ ಅವರ ಆಸೆ ಕೈಗೂಡಲಿಲ್ಲ ಎಂದರು.

 

ನಾನು ಕೊನೆಯ ವರ್ಷದ ಪದವಿ ಓದುವಾಗಲೇ ದೇವೇಗೌಡರ ವಿರುದ್ದ ಚುನಾವಣೆಗೆ ನಿಲ್ಲುವ ಅವಕಾಶ ಬಂದಿತು. ನಾನು ಎಂಜಿನಿಯರ್ ಆಗಲು ಸಾಧ್ಯವಾಗಲಿಲ್ಲ. ಆದರೆ ಗ್ಲೋಬಲ್ ಅಕಾಡೆಮಿ ಎನ್ನುವ ತಾಂತ್ರಿಕ ವಿದ್ಯಾಲಯ ಪ್ರಾರಂಭ ಮಾಡಿದ್ದೇನೆ. ನೂರಾರು ಜನ ಎಂಜಿನಿಯರ್ ಗಳನ್ನು ತಯಾರು ಮಾಡುತ್ತಿದ್ದೇನೆ. ನನಗೆ ವಕೀಲನಾಗುವ ಅವಕಾಶ ಸಿಗಲಿಲ್ಲ ಅದಕ್ಕೆ ಮಗನನ್ನು ವಕೀಲನನ್ನಾಗಿ ಮಾಡಿದ್ದೇನೆ ಎಂದು ತಿಳಿಸಿದರು.

ನಾನು 29 ವರ್ಷಕ್ಕೆಲ್ಲಾ ಮಂತ್ರಿಯಾದೆ. ಚಿಕ್ಕ ವಯಸ್ಸಿಗೆ ನನಗೆ ಹೆಚ್ಚು ಜವಾಬ್ದಾರಿಗಳು ಹೆಗಲ ಮೇಲೆ ಬಂದವು. ಸದನದಲ್ಲಿ ಘಟಾನುಘಟಿ ನಾಯಕರು ಇದ್ದರು. ವೈ.ಕೆ.ರಾಮಯ್ಯ, ಎ.ಕೆ.ಸುಬ್ಬಯ್ಯ ಅವರು, ನಂಜೇಗೌಡರು ಸೇರಿದಂತೆ ಅನೇಕ ನಾಯಕರ ಮಾತುಗಳನ್ನು ಕೇಳುತ್ತಿದ್ದೆನು. ನನಗೆ ತಲೆ ಸೀಳಿದರೆ ಅಕ್ಷರ ಇರಲಿಲ್ಲ. ನಾನು ಮಾತನಾಡುವುದೆಲ್ಲವು ನನ್ನ ಅನುಭವದ ಮಾತುಗಳು. ಜೀವನದಲ್ಲಿ ಅನುಭವವೇ ಮುಖ್ಯ ಎಂದು ನುಡಿದರು.

ಸನ್ಮಾನ ಮಾಡಿದಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ ಆದ ಕಾರಣ ನಾನು ಇದುವರೆಗು ಪ್ರಶಸ್ತಿ ತೆಗೆದುಕೊಳ್ಳಲು ನಾನು ಹೋಗಿಲ್ಲ. ನಾನು ಚಿತ್ರನಟಿ ಪ್ರೇಮಾ ಅವರ ದೊಡ್ಡ ಅಭಿಮಾನಿ. ಅವರು ಕಾರ್ಯಕ್ರಮದಲ್ಲಿ ನಮ್ಮನ್ನು ನಗಿಸುತ್ತಾರೆ ಎಂದುಕೊಂಡೆ ಏಕೋ ನಮ್ಮನ್ನೆಲ್ಲ ನಗಿಸಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಧಾರವಾಡ ಪೀಠವಾಗಬೇಕು ಎಂದು ಹೋರಾಟ ಮಾಡುತ್ತಿದ್ದರು. ಆಗ ನಾನು ಹಿರಿಯ ವಕೀಲರನ್ನು ಕೇಳಿದರೆ ಅವರೆಲ್ಲರೂ ಇಲ್ಲೇ ಇರಲಿ ಎಂದು ಹೇಳುತ್ತಿದ್ದರು. ಈಗ ಅಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತಿದೆ. ಈ ನಗರದಲ್ಲಿ ಇರುವ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ದೇಶದಲ್ಲಿ ಎಲ್ಲಿಯೂ ಇಲ್ಲ. ದೇಶದ ಅತ್ಯುತ್ತಮ ಸಂಸ್ಥೆಗಳು ಇಲ್ಲಿಯೇ ಏಕೆ ಸ್ಥಾಪನೆ ಮಾಡಲಾಯಿತು. ದೇಶದ ಅನೇಕ ಪ್ರತಿಷ್ಟಿತ ಜನರು೦ ಓದಿದ್ದು ಇಲ್ಲಿಯೇ ಎಂದರು.

ಎಸ್ .ಎಂ. ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ದಿ ಸಚಿವನಾಗಿದ್ದೆ. ಅಂದು ವಿಮಾನ ನಿಲ್ದಾಣಕ್ಕೆ 6 ಸಾವಿರ ಎಕರೆ ನೀಡಲಾಯಿತು. ಇದೇ ವೇಳೆ ರತನ್ ಟಾಟಾ ಅವರನ್ನು ಭೇಟಿ ಮಾಡಲು ಹೋದಾಗ ಅವರು ನೀವು ಹಾಗೂ ಕೇಂದ್ರ ಸರ್ಕಾರ ಒಟ್ಟಿಗೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಇದರ ಶಂಕುಸ್ಥಾಪನೆಗೆ ವಾಜಪೇಯಿ ಅವರು ಬಂದಿದ್ದರು. ಅವರು ಇನ್ನು ಮೇಲೆ ವಿಶ್ವ ನಾಯಕರು ಮೊದಲು ಬೆಂಗಳೂರಿಗೆ ಬಂದು ಆನಂತರ ದೇಶದ ಇತರೇ ಭಾಗಗಳಿಗೆ ಹೋಗುತ್ತಾರೆ ಎಂದು ಹಿರಿಯ ಕಾನೂನು ಸಲಹೆಗಾರರೊಬ್ಬರು ದೆಹಲಿಯಲ್ಲಿ ನನಗೆ ಒಂದು ಮಾತು ಹೇಳಿದರು. ಬೆಂಗಳೂರಿಗೆ ಬಂದವರು ಮತ್ತೆ ವಾಪಸ್ ಬರುವುದಿಲ್ಲವಲ್ಲ ಎಂದರು. ಅದಕ್ಕೆ ನಾನು ನಮ್ಮ ನೆಲದ ಸಂಸ್ಕೃತಿ, ಗುಣ ಎಂದು ಉತ್ತರಿಸಿದೆ ಎಂದು ಹೇಳಿದರು.

ಅಮೆರಿಕ, ಚೈನಾದಲ್ಲಿ ಐಫೋನ್ ತಯಾರು ಮಾಡಲು ಅಧಿಕ ವೆಚ್ಚವಾಗುತ್ತದೆ ಆದ ಕಾರಣಕ್ಕೆ ಇಲ್ಲಿಗೆ ಬಂದು ತಯಾರು ಮಾಡುತ್ತಿದ್ದಾರೆ. ಇದರಿಂದ 50 ಸಾವಿರ ಜನರಿಗೆ ಉದ್ಯೋಗ ದೊರೆತಿದೆ. ಇಲ್ಲಿನ ತಾಂತ್ರಿಕ ನೈಪುಣ್ಯತೆಯೂ ಚೆನ್ನಾಗಿ ಇರುವ ಕಾರಣಕ್ಕೆ ಅವರು ಬಂದಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ವಕೀಲರ ಸಂಘ 25 ಸಾವಿರ ಸದಸ್ಯತ್ವ ಹೊಂದಿದೆ ಎಂದು ಕೇಳಲ್ಪಟ್ಟೆ. ನೀವು ಮನಸ್ಸು ಮಾಡಿದರೆ ಬೆಂಗಳೂರಿನಲ್ಲಿ ಯಾವ ಪಕ್ಷವನ್ನು ಕೂಡ ಅಧಿಕಾರಕ್ಕೆ ತರಬಹುದು, ಬೀಳಿಸಬಹುದು ಎಂದರು.

ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ದಾಟಿದೆ. ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ರಸ್ತೆಯ ಸಾಮರ್ಥ್ಯ ಮಾತ್ರ ಅಷ್ಟೇ ಇದೆ. ಇತ್ತೀಚೆಗೆ ಯಾರೋ ಮೆಟ್ರೋ ಹಳದಿ ಮಾರ್ಗ ಆಗಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದರು. ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕೆಲವರು ಚಟಕ್ಕೆ ಮಾಧ್ಯಮಗಳಲ್ಲಿ ಬರುತ್ತೇವೆ ಎಂದು ಏನೋ ಮಾಡುತ್ತಾರೆ ಎಂದರು.

ಶಿವರಾಂ ಕಾರಂತ ಬಡಾವಣೆಗೆ ಏಳು ಸಾವಿರ ಕೋಟಿ ಬಂಡವಾಳ ಹಾಕಿದ್ದೇವೆ ಆದರೆ ನ್ಯಾಯಲಯದಲ್ಲಿ ದಾವೆ ಹೂಡಿರುವ ಕಾರಣಕ್ಕೆ ಅವರು ಅರ್ಜಿಯನ್ನೇ ತೆಗೆದುಕೊಳ್ಳಬೇಡಿ ಎಂದಿದ್ದಾರೆ. ಇದೆಲ್ಲವೂ ಸರ್ಕಾರಕ್ಕೆ ನಷ್ಟ ಎಂದು ಹೇಳಿದರು.

Share This Article