IPS ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ ಸಿಬಿಐಗೆ ಶಾಕ್‌ – 5 ಕೋಟಿ ಹಣ, ಮರ್ಸಿಡಿಸ್‌, ಆಡಿ ಕಾರು ವಶಕ್ಕೆ

1 Min Read

ಚಂಡೀಗಢ: ಪಂಜಾಬ್‌ನ ರೋಪರ್ ರೇಂಜ್‌ನಲ್ಲಿ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ನೇಮಕಗೊಂಡ ಹಿರಿಯ ಐಪಿಎಸ್ ಅಧಿಕಾರಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಐಪಿಎಸ್ ಅಧಿಕಾರಿ ಮನೆಯಿಂದ 5 ಕೋಟಿ ರೂ. ನಗದು, ಮರ್ಸಿಡಿಸ್, ಆಡಿ ಕಾರು ವಶಕ್ಕೆ ಪಡೆದಿದ್ದಾರೆ.

8 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ತನಿಖೆ ವೇಳೆ ಸಿಬಿಐಗೆ ಶಾಕ್‌ ಎದುರಾಗಿದೆ. ಐಪಿಎಸ್‌ ಅಧಿಕಾರಿ ಮನೆಯಲ್ಲಿ 5 ಕೋಟಿ ರೂ. ನಗದು, ಐಷಾರಾಮಿ ವಾಹನಗಳು, ಆಭರಣಗಳು ಮತ್ತು ಉನ್ನತ ದರ್ಜೆಯ ವಾಚ್‌ಗಳು ಸೇರಿದಂತೆ ಅಪಾರ ಸಂಪತ್ತು ಪತ್ತೆಯಾಗಿದೆ.

2009 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಿಐಜಿ ಹರ್‌ಚರಣ್ ಸಿಂಗ್ ಭುಲ್ಲರ್ ಮತ್ತು ಅವರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಕೃಷ್ಣ ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಸ್ಥಳೀಯ ಉದ್ಯಮಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಇತ್ಯರ್ಥಗೊಳಿಸಲು, ಹರ್‌ಚರಣ್‌ ಈ ಮಧ್ಯವರ್ತಿಯ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಪಂಜಾಬ್‌ನ ಫತೇಘರ್ ಸಾಹಿಬ್‌ನಲ್ಲಿರುವ ಆಕಾಶ್ ಬಟ್ಟಾ ಎಂಬ ವ್ಯಾಪಾರಿ ಐದು ದಿನಗಳ ಹಿಂದೆ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಸಿಬಿಐ ಈ ಪ್ರಕರಣ ದಾಖಲಿಸಿತ್ತು. ಡಿಐಜಿ ಭುಲ್ಲರ್ ಅವರು ಆರಂಭಿಕ ಲಂಚವಾಗಿ 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಇತ್ಯರ್ಥಗೊಳಿಸಿದ ನಂತರ ಉಳಿದ ಹಣ ನೀಡದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರೆಂದು ದೂರಲಾಗಿತ್ತು.

ಸಿಬಿಐನ ಎಫ್‌ಐಆರ್ ಪ್ರಕಾರ, ಭುಲ್ಲರ್ ತನ್ನ ಸಹಚರ ಕೃಷ್ಣ ಮೂಲಕ ಲಂಚಕ್ಕೆ ಒತ್ತಾಯಿಸಿದ್ದಾರೆ. ಕೃಷ್ಣ ಪದೇ ಪದೇ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.

Share This Article