ಶಿರೂರು ಶ್ರೀ ಧರಿಸಿದ್ದ 1ಕೋಟಿ ರೂ. ಮೌಲ್ಯದ ಚಿನ್ನ ಸೇಫ್- ಎಲ್ಲಿದೆ ಆ ಚಿನ್ನಾಭರಣಗಳು?

Public TV
1 Min Read

ಉಡುಪಿ: ಶಿರೂರು ಸ್ವಾಮೀಜಿಯವರು ಧರಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಚಿನ್ನ ಭದ್ರವಾಗಿದೆ. ಈ ಚಿನ್ನಾಭರಣಗಳನ್ನು ಶೀರೂರು ಶ್ರೀಗಳ ಪೂರ್ವಶ್ರಮಕ್ಕೆ ಸಲ್ಲಿಕೆ ಮಾಡಲಾಗಿದೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶಿರೂರು ಶ್ರೀಗಳು ಧರಿಸುತ್ತಿದ್ದ ಚಿನ್ನಾಭರಣ ಸೇಫಾಗಿದೆ. ರಮ್ಯಾ ಶೆಟ್ಟಿ ಚಿನ್ನಾಭರಣ ಕದ್ದಿಲ್ಲ. ಸ್ವಾಮೀಜಿ ಆಪ್ತರೂ ಚಿನ್ನಾಭರಣ ಎಗರಿಸಿಲ್ಲ. ಕೆಲ ಮಾಧ್ಯಮಗಳಲ್ಲಿ ಚಿನ್ನಾಭರಣ ಕಾಣೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದ್ರೆ ಇದೀಗ ಚಿನ್ನಾಭರಣಗಳನ್ನು ಆಸ್ಪತ್ರೆಯ ವೈದ್ಯರು ಸ್ವಾಮೀಜಿ ಕುಟುಂಬಕ್ಕೆ ನೀಡಿದ್ದಾರೆ ಅಂತ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಶನಿವಾರ ಮರಣೋತ್ತರ ವರದಿ?;
ಜುಲೈ 19 ರಂದು ಶೀರೂರು ಶ್ರೀ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಶ್ರೀಗಳ ಸಾವಿನ ಕುರಿತು ಇನ್ನೆರಡು ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬರಲಿದೆ. ಶನಿವಾರ ಮರಣೋತ್ತರ ಪರೀಕ್ಷೆಯ ವರದಿ ಸಿಗುವ ಸಾಧ್ಯತೆಗಳಿದ್ದು, 6 ವಾರದ ನಂತರ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಕೈ ಸೇರುವ ಸಾಧ್ಯತೆಯಿದೆ. ಈ ಎರಡೂ ವರದಿ ಬಂದ ಬಳಿಕ ಸಾವಿನ ತನಿಖೆ ಮಹತ್ವ ಪಡೆಯಲಿದೆ.

ಜುಲೈ 31ರಂದು ಆರಾಧನೆ:
ಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನಸ್ಥ ಹಿನ್ನೆಲೆಯಲ್ಲಿ ಜುಲೈ 31 ರಂದು ಶಿರೂರು ಸ್ವಾಮೀಜಿ ಆರಾಧನೆ ಕಾರ್ಯಕ್ರಮವಿದೆ. ಶ್ರೀಗಳು ನಿಧನ ಹೊಂದಿದ ಹದಿಮೂರನೇ ದಿನ ಸೋದೆಮಠದ ನೇತೃತ್ವದಲ್ಲಿ ಈ ಆರಾಧನೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಹಿರಿಯಡ್ಕ ಸಮೀಪದ ಮೂಲಮಠ ಶೀರೂರಿನಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

ಅನಗತ್ಯ ಮಾನಹಾನಿ:
ಸ್ವಾಮೀಜಿಯ ಚಿನ್ನವನ್ನು ಸ್ವಾಮೀಜಿ ಆಪ್ತ ಬುಲೆಟ್ ಗಣೇಶ್ ಎಂಬವರು ಕದ್ದಿದ್ದಾರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗಣೇಶ್, ನಾನು ಆರೋಪಿಯಲ್ಲ. ನಾನು ಚಿನ್ನ ಕದ್ದಿಲ್ಲ. ನನ್ನನ್ನು ಯಾರೂ ಈವರೆಗೆ ವಿಚಾರಣೆ ಮಾಡಿಲ್ಲ. ಅನಗತ್ಯವಾಗಿ ನನ್ನ ಮಾನಹಾನಿ ಮಾಡಲಾಗುತ್ತಿದೆ ಅಂತ ಕಿಡಿಕಾರಿದ್ದಾರೆ.

ಸ್ವಾಮೀಜಿ ಚಿನ್ನಕ್ಕೂ ನನಗೂ ಸಂಬಂಧವಿಲ್ಲ. ಸ್ವಾಮೀಜಿ ಜೊತೆ ಯಾವುದೇ ಆರ್ಥಿಕ ವ್ಯವಹಾರ ಇಲ್ಲ. ನಾನು ಸ್ವಾಮೀಜಿ ಪಾರ್ಟ್‍ನರ್ ಅಲ್ಲ. ನಾನು ಶಿರೂರು ಸ್ವಾಮೀಜಿಯ ಭಕ್ತನಾಗಿದ್ದು, ಅನುಮಾನಾಸ್ಪದ ಸಾವಿನ ತನಿಖೆಯಾಗಬೇಕು ಅಂತ ಅವರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *