ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗೆ ಧ್ವನಿಯಾಗಬೇಕಿದ್ದ ಸುವರ್ಣಸೌಧಕ್ಕೆ (Suvarna Soudha) ನ್ಯಾಯ ಕೊಡಿಸುವಲ್ಲಿ ಸರ್ಕಾರ ತಾತ್ಸರ ತೋರುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ. ಬೆಂಗಳೂರಿನ ವಿಧಾನಸೌಧ ಮೇಲಿರುವ ಪ್ರೀತಿ ಬೆಳಗಾವಿ ಸುವರ್ಣಸೌಧ ಮೇಲೇಕಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಎರಡೆರಡು ಸಲ ಪ್ರಸ್ತಾವನೆ ಸಲ್ಲಿಸಿದ್ದರೂ ಸುವರ್ಣಸೌಧ ನವೀಕರಣಕ್ಕೆ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. 13 ವರ್ಷಗಳಿಂದ ಬೆಳಗಾವಿಯ ಸುವರ್ಣಸೌಧ ಸುಣ್ಣ-ಬಣ್ಣ ಕಂಡಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಕೋಟ್ಯಂತರ ವೆಚ್ಚದ ಪೀಠೋಪಕರಣವೂ ಗೆದ್ದಲು ಹಿಡಿಯುವ ಆತಂಕ ಶುರುವಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಇಂಥ ಕಟ್ಟಡಗಳಿಗೆ ಸುಣ್ಣ-ಬಣ್ಣ ಹಚ್ಚಿ ನಿರ್ವಹಣೆ ಮಾಡಬೇಕೆಂಬ ನಿಯಮ ಇದ್ದರೂ, ಸೌಧ ನಿರ್ಮಾಣವಾಗಿ 13 ವರ್ಷ ಕಳೆದರೂ ಈವರೆಗೆ ಒಮ್ಮೆಯೂ ಸುಣ್ಣ-ಬಣ್ಣ ಬಳಿದಿಲ್ಲ.
ಸುವರ್ಣಸೌಧ ನವೀಕರಣಕ್ಕೆ 10 ಕೋಟಿ ಬಿಡುಗಡೆ ಮಾಡುವಂತೆ ಕಳೆದ ವರ್ಷ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದು ಕಾರಣ ನೀಡಿ ಕಳೆದ ವರ್ಷ ಸಲ್ಲಿಸಿದ್ದ ಪ್ರಸ್ತಾವನೆ ರಿಜೆಕ್ಟ್ ಮಾಡಲಾಗಿತ್ತು. ಈ ವರ್ಷವೂ ಮತ್ತೆ 11 ಕೋಟಿ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿಕಾರಿಗಳಿಂದ ಪ್ರಸ್ತಾವನೆ ಸಲ್ಲಿಸಿದರೂ, ಸರ್ಕಾರ ಕ್ಯಾರೆ ಎನ್ನುತ್ತಿಲ್ಲ.
11 ಕೋಟಿ ಕೇಳಿದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 1 ಕೋಟಿ ರೂಪಾಯಿ ಮಾತ್ರ. ಇದು ಉತ್ತರ ಕರ್ನಾಟಕದ ಜನರ ಕಣ್ಣು ಕೆಂಪಾಗಿಸಿದೆ. ಒಂದು ಕೋಟಿಯಲ್ಲೇ ನಿರ್ವಹಣೆ ಮಾಡಿಕೊಳ್ಳಿ ಎಂದು ಹಣಕಾಸು ಇಲಾಖೆಯ ಸೂಚನೆ ನೀಡಿದೆ. ಈ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ ತಮ್ಮ ಅಸಹಾಯಕತೆಯನ್ನು ಮಾಧ್ಯಮಗಳ ಎದುರೇ ಬಿಚ್ಚಿಟ್ಟಿದ್ದಾರೆ. ಸುವರ್ಣಸೌಧ ನಿರ್ವಹಣೆ ಜವಾಬ್ದಾರಿ ಜಿಲ್ಲಾಡಳಿತದ್ದು ಎಂದು ಹೇಳಿ ಹೊರಟ್ಟಿ ಜಾರಿಕೊಂಡಿದ್ದಾರೆ.
