ಅಧಿಕಾರಿಗಳ ನಿರ್ಲಕ್ಷ್ಯ- ಪ್ರವಾಹ ಸಂತ್ರಸ್ತರ ನೆರವಿಗೆ ಬಿಡುಗಡೆಯಾಗಿದ್ದ 1 ಕೋಟಿ ರೂ. ಮತ್ತೆ ಡಿಸಿ ಖಾತೆಗೆ

Public TV
2 Min Read

ಮಡಿಕೇರಿ: ಕೊಡಗು ಜಿಲ್ಲೆ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದೆ. ಕಳೆದ 2 ವರ್ಷಗಳಲ್ಲಿ ಸುಮಾರೂ 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿವೆ. ಕಳೆದ ಆರು ತಿಂಗಳ ಹಿಂದೆ ಕೊಡಗಿನಲ್ಲಿ ಕಾವೇರಿ ಉಕ್ಕಿ ಹರಿದ ರಭಸಕ್ಕೆ ಮನೆ ಮಠಗಳನ್ನು ಕಳೆದುಕೊಂಡಿದ್ದ ಎಷ್ಟೋ ಜನರಿಗೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರೆತ್ತಿಲ್ಲ. ನೂರಾರು ರೈತರಿಗೆ ಬೆಳೆ ಪರಿಹಾರವೂ ಸಿಕ್ಕಿಲ್ಲ. ಆದರೆ ಅಧಿಕಾರಿಗಳು ಮಾತ್ರ ಎನ್‍ಡಿಆರ್ ಎಫ್ ನಿಂದ ಬಂದಿದ್ದ ಹಣದಲ್ಲಿ ಒಂದು ಕೋಟಿ ರೂಪಾಯಿಯನ್ನು ಬಳಸದೆ ಜಿಲ್ಲಾಧಿಕಾರಿಗೆ ವಾಪಸ್ಸ್ ಕಳುಹಿಸಿದ್ದಾರೆ.

ಜಿಲ್ಲೆಯ ವಿರಾಜಪೇಟೆ ತಾಲೂಕಿನಾದ್ಯಂತ ಆಗಿದ್ದ ಪ್ರಾಕೃತಿಕ ನಷ್ಟದ ತುರ್ತು ಸೇವೆಗಳಿಗೆ ಮತ್ತು ಪರಿಹಾರಗಳಿಗೆ ಬಳಸಲು ಜಿಲ್ಲಾಧಿಕಾರಿ ಒಂದು ಕೋಟಿ ರೂ. ಹಣವನ್ನು ವಿರಾಜಪೇಟೆಗೆ ನೀಡಿದ್ದರು. ಆದರೆ ತಾಲೂಕು ಕಚೇರಿ ಶಿರಸ್ತೆದಾರ್ ಪೊನ್ನು ಮತ್ತು ಕೇಸ್ ವರ್ಕರ್ ಧನಂಜಯ್ ಡಿಸಿ ನೀಡಿದ್ದ ಚೆಕನ್ನು ತಹಶೀಲ್ದಾರ್ ಅವರ ಖಾತೆಗೆ ಜಮಾಮಾಡಿಲ್ಲ. ಹೀಗಾಗಿ ಚೆಕ್ ಸಮಯ ಮುಗಿದುಹೋಗಿ ಬಳಕೆ ಬಾರದಂತಾಗಿದೆ.

ಈ ಕುರಿತು ವಿರಾಜಪೇಟೆ ತಹಶೀಲ್ದಾರ್ ಮಹೇಶ್ ಅವರನ್ನು ಕೇಳಿದರೆ, ಕೆಲಸದ ಒತ್ತಡದಿಂದ ಚೆಕನ್ನು ಖಾತೆಗೆ ಜಮಾ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚೆಕ್ ಹಾಗೆ ಉಳಿದಿದ್ದು, ಜಿಲ್ಲಾಧಿಕಾರಿಯವರಿಗೆ ವಾಪಸ್ಸ್ ಕಳುಹಿಸಿದ್ದೇವೆ ಎನ್ನುತ್ತಾರೆ. ಆದರೆ ಯಾರಿಂದ ತಪ್ಪಾಯಿತು ಅವರ ವಿರುದ್ಧ ತುಟಿ ಬಿಚ್ಚುತ್ತಿಲ್ಲ.

ಪ್ರವಾಹ ಉಕ್ಕಿ ಹರಿದಾಗ ಸಂತ್ರಸ್ತ ಕೇಂದ್ರಗಳನ್ನು ನಡೆಸಲು ಇದೇ ತಾಲೂಕು ಆಡಳಿತ ಸ್ಥಳೀಯರಿಂದಲೇ ವಸ್ತುಗಳನ್ನು ಖರೀದಿಸಿತ್ತು. ಬಳಿಕ ಐದು ತಿಂಗಳಾದ್ರೂ ಬಡ ವ್ಯಾಪಾರಿಗಳಿಗೆ ಹಣವನ್ನು ಪಾವತಿಸದೆ ಇದ್ದ ಕಾರಣ ವ್ಯಾಪಾರಿಗಳು ಪರದಾಡುವಂತಾಗಿತ್ತು. ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆಗೂ ವ್ಯಾಪಾರಿಗಳು ಮುಂದಾಗಿದ್ದರು. ಎಷ್ಟೋ ಸಂತ್ರಸ್ತರಿಗೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.

ತಕ್ಷಣಕ್ಕೆ ಸಿಕ್ಕಿದ್ದ 10 ಸಾವಿರ ಪರಿಹಾರ ಹಣ ಬಿಟ್ಟರೆ ಮತ್ತೆ ಯಾವುದೇ ಪರಿಹಾರ ಲಭಿಸಿಲ್ಲ. ಹೀಗಾಗಿ ಕೊಟ್ಟ ಹಣವನ್ನೂ ಬಳಸದೆ ಚೆಕನ್ನು ವಾಪಸ್ ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿರಾಜಪೇಟೆಯ ಶಿರಸ್ತೇದಾರ್ ಮತ್ತು ಕೇಸ್ ವರ್ಕರ್ ಧನಂಜಯ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಸರಿಯಾದ ಉತ್ತರ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಚೆಕ್ ವಾಪಸ್ ಆಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಅಧಿಕಾರಿಗಳು ನಮಗೆ ಬೇಕಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *