IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

By
2 Min Read

ಶಿಮ್ಲಾ: ಶಿಮ್ರಾನ್‌ ಹೆಟ್ಮೇಯರ್‌, ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ. ಕೊನೆಯವರೆಗೂ ಹೋರಾಡಿದ ಪಂಜಾಬ್‌ ಕಿಂಗ್ಸ್‌ ಸೋಲಿನೊಂದಿಗೆ ವಿದಾಯ ಹೇಳಿದೆ.

ಪಂಜಾಬ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ 14 ಅಂಕ ಪಡೆದು +0.148 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ. ಒಂದು ವೇಳೆ ಭಾನುವಾರದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ತಂಡಗಳು ಸೋತರೇ ರಾಜಸ್ಥಾನ್‌ ರಾಯಲ್ಸ್‌ಗೆ ಪ್ಲೇ ಆಫ್‌ ತಲುಪುವ ಅವಕಾಶ ಸಿಗಲಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ರಾಜಸ್ಥಾನ್‌ ರಾಯಲ್ಸ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಗೆಲುವು ಸಾಧಿಸಿತು.

ಕೊನೆಯ 4 ಓವರ್‌ಗಳಲ್ಲಿ ರಾಜಸ್ಥಾನ್‌ಗೆ 39 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 6 ರನ್‌, 18ನೇ ಓವರ್‌ನಲ್ಲಿ 14 ರನ್‌ ಹಾಗೂ 19ನೇ ಓವರ್‌ನಲ್ಲಿ 11 ರನ್‌ ಸೇರ್ಪಡೆಯಾಯಿತು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಶಿಮ್ರಾನ್‌ ಹೆಟ್ಮೇಯರ್‌ 28 ಎಸೆತಗಳಲ್ಲಿ ಭರ್ಜರಿ 46 ರನ್‌ (4 ಬೌಂಡರಿ, 3 ಸಿಕ್ಸ್‌) ಚಚ್ಚಿ ಔಟಾದರು. ಕೊನೆಯ 6 ಎಸೆತಗಳಲ್ಲಿ 9 ರನ್‌ ಬೇಕಿದ್ದಾಗ. ಮೊದಲ 3 ಎಸೆತಗಳಲ್ಲಿ 4 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ಕ್ರೀಸ್‌ ತೆಗೆದುಕೊಂಡ ಧ್ರುವ್‌ ಜುರೆಲ್‌ ಸಿಕ್ಸ್‌ ಬಾರಿಸುವ ಮೂಲಕ ಜಯ ತಂದುಕೊಟ್ಟರು.

ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್ ರಾಯಲ್ಸ್‌ ಮೊದಲ ವಿಕೆಟ್‌ ಕಳೆದುಕೊಂಡರೂ 2 ವಿಕೆಟ್‌ಗೆ ಉತ್ತಮ ಆರಂಭ ಪಡೆಯಿತು. 2ನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕಲ್‌ ಹಾಗೂ ಯಶಸ್ವೀ ಜೈಸ್ವಾಲ್‌ ಭರ್ಜರಿ ಅರ್ಧ ಶತಕ ಸಿಡಿಸಿ ಔಟಾದರು.

ಜೈಸ್ವಾಲ್‌ 36 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು. ಈ ಮೂಲಕ 14 ಲೀಗ್‌ ಪಂದ್ಯಗಳಲ್ಲಿ 600 ರನ್‌ ಪೂರೈಸಿದರು. ಪಡಿಕಲ್‌ 30 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಕೊನೆಯ ಪಂದ್ಯದಲ್ಲೂ ನಾಯಕ ಸಂಜು ಸ್ಯಾಮ್ಸನ್‌ ಕೇವಲ 2 ರನ್‌ ಗಳಿಸಿ ನಿರಾಸೆ ಮೂಡಿಸಿದರು. ರಿಯಾನ್‌ ಪರಾಗ್‌ 12 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿಯೊಂದಿಗೆ 20 ರನ್‌ ಗಳಿಸುವ ಮೂಲಕ ತಂಡಕ್ಕೆ ಇನ್ನಷ್ಟು ರನ್‌ ಕೊಡುಗೆ ನೀಡಿದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್‌ ಕರ್ರನ್‌, ಜಿತೇಶ್‌ ಶರ್ಮಾ ಹಾಗೂ ಶಾರೂಖ್‌ ಖಾನ್‌ ಬ್ಯಾಟಿಂಗ್‌ ನೆರವಿನಿಂದ 187 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

ಜಿತೇಶ್‌ ಶರ್ಮಾ 44 ರನ್‌ (28 ಎಸೆತ, 3 ಸಿಕ್ಸ್‌, 3 ಬೌಂಡರಿ) ಗಳಿಸಿದರೆ, ಶಾರೂಖ್‌ ಖಾನ್‌ 41 ರನ್‌ (23 ಎಸೆತ, 2 ಸಿಕ್ಸರ್‌, 4 ಬೌಂಡರಿ), ಸ್ಯಾಮ್‌ ಕರ್ರನ್‌ 49 ರನ್‌ (31 ಎಸೆತ, 4 ಬೌಂಡರಿ, 2 ಸಿಕ್ಸ್‌) ಗಳಿಸಿ ಅಜೇಯರಾಗುಳಿದರು. ನಾಯಕ ಶಿಖರ್‌ ಧವನ್‌ 17 ರನ್‌, ಅಥರ್ವ್‌ ಟೈಡೆ 19 ರನ್‌ ಕೊಡುಗೆ ನೀಡಿದರು.

ರಾಜಸ್ಥಾನ್‌ ಪರ ನವದೀಪ್‌ ಸೈನಿ 4 ಓವರ್‌ಗಳಲ್ಲಿ 40 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ ಹಾಗೂ ಆಡಂ ಜಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Share This Article