ದಾಖಲೆ ನಿರ್ಮಿಸಿದ ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 500 ಪೆಗಾಸಸ್ ಬೈಕ್: ಬೆಲೆ ಎಷ್ಟು? ವೈಶಿಷ್ಟ್ಯವೇನು?

Public TV
3 Min Read

ನವದೆಹಲಿ: ಜನಪ್ರಿಯ ಬೈಕ್ ತಯಾರಿಕಾ ಕಂಪೆನಿಯಾದ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತನ್ನ ನೂತನ ಲಿಮಿಟೆಡ್ ಆವೃತ್ತಿಯ ಕ್ಲಾಸಿಕ್ 500 ಪೆಗಾಸಸ್ ಬೈಕನ್ನು ಆನ್‍ಲೈನ್‍ನಲ್ಲಿ 178 ಸೆಕೆಂಡ್‍ನಲ್ಲಿ ಮಾರಾಟ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಹೌದು, ರಾಯಲ್ ಎನ್‍ಫೀಲ್ಡ್ ತನ್ನ ನೂತನ ಮಾದರಿ ಹಾಗೂ ಲಿಮಿಟೆಡ್ ಎಡಿಷನ್ ನ ಕ್ಲಾಸಿಕ್ 500 ಪೆಗಾಸಸ್ ಬೈಕನ್ನು ಬುಧವಾರ ಸಂಜೆಯಿಂದ ಆನ್‍ಲೈನ್ ಬುಕ್ಕಿಂಗ್ ಪ್ರಾರಂಭಿಸಿತ್ತು. ಈ ವೇಳೆ ಬಿಡುಗಡೆಗೊಂಡ ಕೇವಲ 178 ಸೆಕೆಂಡುಗಳಲ್ಲೇ ಎಲ್ಲಾ ಬೈಕ್‍ಗಳು ಸೋಲ್ಡ್ ಔಟ್ ಆಗಿದೆ.

ಕ್ಲಾಸಿಕ್ 500 ಪೆಗಾಸಸ್ ಆವೃತ್ತಿಯು ರಾಯಲ್ ಎನ್‍ಫೀಲ್ಡ್ ನಲ್ಲಿ ಲಿಮಿಟೆಡ್ ಎಡಿಷನ್ ಆಗಿದ್ದು, ಒಟ್ಟಾರೆ ವಿಶ್ವದಲ್ಲಿ ಕೇವಲ 1000 ಬೈಕ್‍ಗಳನ್ನು ರೋಡಿಗಿಳಿಸಲು ಸಂಸ್ಥೆ ನಿರ್ಧರಿಸಿತ್ತು. ಭಾರತೀಯ ಗ್ರಾಹಕರಿಗಾಗಿ 250 ಬೈಕುಗಳನ್ನು ಮೀಸಲಿಟ್ಟಿತ್ತು. ಭಾರತದಲ್ಲಿ ಬಿಡುಗಡೆಗೊಂಡ ಬಳಿಕ ನೂತನ ಪೆಗಾಸಸ್ ಬೈಕ್ 178 ಸೆಕೆಂಡ್‍ನಲ್ಲಿ ಸೋಲ್ಡ್ ಔಟ್ ಆಗಿ ದಾಖಲೆ ನಿರ್ಮಿಸಿದೆ.

ಈ ಮೊದಲು ಸಂಸ್ಥೆ ಜುಲೈ 18 ರಂದು ಬುಕ್ಕಿಂಗ್ ಶುರುಮಾಡಿತ್ತು, ಆದರೆ ಸಾವಿರಾರು ಬುಲೆಟ್ ಪ್ರೇಮಿಗಳು ಇದನ್ನು ಖರೀದಿಸಲು ಮುಗಿಬಿದ್ದಿದ್ದರು. ಅಲ್ಲದೇ ಅತಿ ಹೆಚ್ಚಿನ ಗ್ರಾಹಕರು ಏಕಕಾಲಕ್ಕೆ ಬೈಕ್ ಬುಕ್ಕಿಂಗ್‍ಗೆ ಪ್ರತಿಕ್ರಿಯಿಸಿದ್ದರಿಂದ ವೆಬ್‍ಸೈಟ್‍ನಲ್ಲಿ ತಾಂತ್ರಿಕದೋಷ ಕಾಣಿಸಿತ್ತು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಬುಲೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯು ವೆಬ್‍ಸೈಟನ್ನು ಸರಿಪಡಿಸಿ ನೂತನ ಮಾದರಿಯನ್ನು ಬುಧವಾರ ಸಂಜೆಯಿಂದ ಆರಂಭಿಸುವುದಾಗಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು.

ಕ್ಲಾಸಿಕ್ 500 ಪೆಗಾಸಸ್ ವಿಶೇಷತೆ ಏನು?
2ನೇ ಮಹಾಯುದ್ಧದಲ್ಲಿ `ಫ್ಲೈಯಿಂಗ್ ಫ್ಲಿಯಾ’ ಎಂದು ಜನಪ್ರಿಯವಾಗಿದ್ದ (RE/WD125) ಮೊಟಾರ್ ಸೈಕಲ್ ಪ್ರೇರಣೆಯಿಂದ ಕ್ಲಾಸಿಕ್ 500 ಪೆಗಾಸಸ್ ಬೈಕನ್ನು ಕಂಪೆನಿ ವಿನ್ಯಾಸಗೊಳಿಸಿತ್ತು. ಯುದ್ಧದ ವೇಳೆ ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಸೈನಿಕರು ಬಳಸಿದ್ದ ಬೈಕುಗಳನ್ನು ಹೋಲುವ ರೂಪದಲ್ಲಿಯೇ ನಿರ್ಮಿಸಿದೆ.

ಬೆಲೆ ಎಷ್ಟು? ಯಾವ ಬಣ್ಣಗಳಲ್ಲಿ ಸಿಗುತ್ತೆ?
ಭಾರತದಲ್ಲಿ ಕ್ಲಾಸಿಕ್ 500 ಪೆಗಾಸಸ್‍ನ ಬೆಲೆ ದೆಹಲಿ ಎಕ್ಸ್ ಶೋ ರೂಂಗೆ 2.4 ಲಕ್ಷ ರೂಪಾಯಿ ಆಗಿದೆ. ಈ ಲಿಮಿಟೆಡ್ ಎಡಿಷನ್‍ನ ಬುಲೆಟ್ ಕೇವಲ ಎರಡು ಬಣ್ಯಗಳಲ್ಲಿ ಲಭ್ಯವಿದ್ದು, ಒಂದು ಸೈನ್ಯದ ಬಣ್ಣವನ್ನು ಪ್ರತಿನಿಧಿಸುವ ಸರ್ವೀಸ್ ಬ್ರೌನ್ ಆಗಿದ್ದರೆ ಮತ್ತೊಂದು ಒಲಿವ್ ಡ್ರಾಬ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿತ್ತು.

ಕ್ಲಾಸಿಕ್ 500 ಪೆಗಾಸಸ್ ಎಂಜಿನ್ ಮತ್ತು ಸಸ್ಪೆನ್ಷನ್:
ಕ್ಲಾಸಿಕ್ 500 ಪೆಗಾಸಸ್ ಬೈಕ್‍ಗಳು 499 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ 27.2-ಬಿಎಚ್‍ಪಿ ಮತ್ತು 41.3-ಎನ್‍ಎಂ ಟಾರ್ಕ್ ಹಾಗೂ 4000 ಆರ್ ಪಿಎಂ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಫ್ರಂಟ್ ಸಸ್ಪೆನ್ಷನ್ ಟೆಲಿಸ್ಕೋಪಿಕ್ 35 ಎಂಎಂ ಫೋಕ್ರ್ಸ್ 130 ಎಂಎಂ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಟ್ವಿನ್ ಗ್ಯಾಸ್ 5-ಹಂತದಲ್ಲಿ ಹೊಂದಾಣಿಕೆಯ ಮಾಡುವ 80 ಎಂಎಂ ಸಸ್ಪೆನ್ಷನ್ ಹೊಂದಿದೆ.

ಬ್ರೇಕ್ ಹಾಗೂ ಟೈರ್ ಗಳು:
ಮುಂದುಗಡೆ 90/90 ಅಳತೆಯ 19 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಹಿಂದುಗಡೆ 120/80 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.

ಸುತ್ತಳತೆ ಹಾಗೂ ತೂಕ:
ಪೆಗಾಸಸ್ ಬೈಕ್ ನ ಉದ್ದxಅಗಲxಎತ್ತರ: 2140ಎಂಎಂ x 790ಎಂಎಂ x 1090ಎಂಎಂ ಆಗಿದ್ದು, ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ ಆಗಿದೆ. ಇಂಧನ ಸಾಮರ್ಥ್ಯ 13.5 ಲೀಟರ್ ಆಗಿದ್ದು, ಒಟ್ಟು ತೂಕ 194 ಕೆಜಿ ಇದೆ.

ಇತರೆ ಫೀಚರ್ ಗಳು:
ಹ್ಯಾಂಡಲ್ ಬಾರ್, ಹೆಡ್‍ಲೈಟ್, ಎಕ್ಸಾಸ್ಟ್ ಮಫ್ಲರ್, ಲೆದರ್ ಸ್ಟ್ಯಾಪ್, ಕ್ಯಾನವಾಸ್ ಪ್ಯಾನಿಯರ್ಸ್ ಮತ್ತು ಫ್ಯೂಲ್ ಟ್ಯಾಂಕ್ ಮೇಲೆ ಪೆಗಾಸಸ್ ಲೊಗೊ ಬೈಕಿನ ಅಂದವನ್ನು ಹೆಚ್ಚಿಸಿದೆ. RE/WD125 ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಚಾಸಿಸ್, ಬ್ರೇಕ್ ಹಾಗೂ ಟೈಯರ್ ಗಳು ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 500 ಮಾದರಿಯನ್ನೇ ಹೋಲುತ್ತದೆ.

Share This Article
Leave a Comment

Leave a Reply

Your email address will not be published. Required fields are marked *