ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು -‌ ಎನ್‌ಕೌಂಟರ್‌ಗೆ ರೌಡಿಶೀಟರ್ ಬಲಿ

Public TV
1 Min Read

ವಿಜಯಪುರ: ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಒಬ್ಬ ಪೊಲೀಸರ ಗುಂಡಿಗೆ ಬಲಿಯಾಗಿದ ಘಟನೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ಹೊರ ಭಾಗದಲ್ಲಿ ನಡೆದಿದೆ.

ಯುನಸ್ ಪಟೇಲ್ (35) ಎನ್‌ಕೌಂಟರ್‌ಗೆ (Encounter) ಬಲಿಯಾದ ನಟೋರಿಯಸ್‌ ರೌಡಿಯಾಗಿದ್ದಾನೆ. ಈತ ವಿಜಯಪುರ (Vijayapura) ನಗರದ ಗಾಂಧಿ ಚೌಕ್ ವ್ಯಾಪ್ತಿಯಲ್ಲಿ ಅ.17 ರಂದು ಓರ್ವನಿಗೆ ಚಾಕು ತೋರಿಸಿ 25 ಸಾವಿರ ಹಣ ದರೋಡೆ ಮಾಡಿದ್ದ. ನಂತರ ಆತನ ಸ್ಕೂಟಿಯನ್ನೇ ದರೋಡೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ ವಿದ್ಯಾರ್ಥಿನಿ ಕತ್ತು ಕೊಯ್ದು ಹತ್ಯೆ ಕೇಸ್‌ – ಪಾಗಲ್‌ ಪ್ರೇಮಿ ಬಂಧನ

ಆರೋಪಿ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರೋ ಮಾಹಿತಿ ಅರಿತ ಪೊಲೀಸರು ಸೆರೆ ಹಿಡಿಯಲು ತೆರಳಿದ್ದರು. ಸಿಂದಗಿ ತಾಲೂಕಿನ ರಾಂಪುರ್ ಬಳಿ ಆರೋಪಿ ಯುನಸ್‌ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಇಬ್ಬರು ಕಾನ್ಸ್‌ಟೇಬಲ್‌ ಹಾಗೂ ಇನ್ಸ್‌ಪೆಕ್ಟರ್‌ ಮೇಲೆ ಆರೋಪಿ ದಾಳಿಗೆ ಯತ್ನಿಸಿದ್ದಾನೆ. ಆಗ ಆಯತಪ್ಪಿ ಇನ್ಸ್‌ಪೆಕ್ಟರ್‌ ಪ್ರದೀಪ್ ತಳಕೇರಿ ಬಿದ್ದಿದ್ದಾರೆ. ಈ ವೇಳೆ ಎಚ್ಚರಿಕೆ ನೀಡಲು ಇನ್ಸ್‌ಪೆಕ್ಟರ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಶರಣಾಗದೇ ಯುನಸ್ ಹಲ್ಲೆಗೆ ಯತ್ನಿಸಿದ್ದಾನೆ.

ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿ ಯುನಸ್ ಕಾಲಿಗೆ ಇನ್ಸ್‌ಪೆಕ್ಟರ್‌ ಗುಂಡು ಹಾರಿಸಿದ್ದಾರೆ. ನಂತರ ಆರೋಪಿಗೆ ಸಿಂದಗಿ ತಾಲೂಕು ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾಸ್ಪತ್ರೆಯ ವೈದ್ಯರು ಆರೋಪಿ ಮೃತಪಟ್ಟಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಯುನಸ್ ಮೇಲೆ ಎರಡು ಕೊಲೆ ಪ್ರಕರಣ, ಒಂದು ಕೊಲೆ ಯತ್ನ, ಸೇರಿದಂತೆ ಒಟ್ಟು 12 ಪ್ರಕರಣಗಳಿವೆ. ಈ ಕುರಿತು ತನಿಖೆ ಮುಂದುವರಿಯುತ್ತಿದೆ. ಇದನ್ನೂ ಓದಿ: ‘ವೋಟ್ ಚೋರಿ’ ಪ್ರಕರಣ | ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಮನೆ, ಬಾರ್ ಮೇಲೆ ಎಸ್‌ಐಟಿ ದಾಳಿ

Share This Article