ಉಡುಪಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ – ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ನವೀನ್ ಕೊಲೆ

Public TV
2 Min Read

ಉಡುಪಿ: ರೌಡಿ ಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ನಡೆದಿದೆ.

ಪಡುಬಿದ್ರೆಯಲ್ಲಿ ನವೀನ್ ಡಿಸೋಜಾ ಕೊಲೆಯಾದ ರೌಡಿಶೀಟರ್. ಪಡುಬಿದ್ರೆ ಸಮೀಪದ ಇನ್ನಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ಲೋರಿಯಾ ಬಾರ್ ನ ಹೊರಗೆ ನವೀನ್ ಡಿಸೋಜಾನ ಮೇಲೆ ದಾಳಿ ನಡೆದಿದ್ದು, ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಬುಧವಾರ ರಾತ್ರಿ ಸುಮಾರು 8 ಗಂಟೆಗೆ ನವೀನ್ ಬಾರ್ ಗೆ ಬಂದಿದ್ದನು. ಎಂದಿನಂತೆ ಮದ್ಯ ಸೇವಿಸಿದ್ದನು. ನಂತರ ಹೊರ ಬಂದಿದ್ದಾನೆ. ಆದರೆ ನವೀನ್ ಹೊರಗೆ ಬರುವುದನ್ನೇ ಮೂರ್ನಾಲ್ಕು ಜನರ ತಂಡ ಹೊಂಚು ಹಾಕಿ ಕುಳಿತ್ತಿತ್ತು ಎಂಬ ಮಾಹಿತಿ ಪೊಲೀಸರಿಂದ ಸಿಕ್ಕಿದೆ. ನಂತರ ಏಕಾಏಕಿ ಎಲ್ಲರೂ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಪರಿಣಾಮ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ನವೀನ್ ಡಿಸೋಜಾ ಮೇಲೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಹೊಡೆದಾಟ, ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದು, ಎಸ್.ಪಿ. ಲಕ್ಷ್ಮಣ್ ನಿಂಬರ್ಗಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಈ ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಹಿಂದಿನ ದ್ವೇಷದ ಕೊಲೆ ಎನ್ನಲಾಗುತ್ತಿದೆ. ನವೀನ್ ಡಿಸೋಜಾ ವಿರೋಧಿಗಳು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸ್ಥಳದಲ್ಲಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಅಪ್‍ಡೇಟ್ ಸುದ್ದಿ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಆರೋಪಿಗಳ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಪಡುಬಿದ್ರೆ ಸಮೀಪದ ಇನ್ನಾ ಗ್ರಾಮದಲ್ಲಿರುವ ಗ್ಲೋರಿಯಾ ಬಾರಿನಲ್ಲಿ ನವೀನ್ ಡಿಸೋಜಾ, ಗಿರೀಶ್ ಮತ್ತು ನಾಗೇಶ್ ಡ್ರಿಂಕ್ಸ್ ಮಾಡೋದಕ್ಕೆ ಸಂಜೆಯೇ ಬಂದಿದ್ದರು. ಮದ್ಯಪಾನ ಮಾಡಿ ಮಧ್ಯರಾತ್ರಿ ಹೊರಬಂದ ಮೂರು ಜನ ಬೈಕ್ ಏರಿ ಮನೆಗೆ ಹೊರಟಿದ್ದರು. ಈ ಸಂದರ್ಭ ಕಾರಿನಲ್ಲಿ ಬಂದು ಹೊಂಚು ಹಾಕುತ್ತಿದ್ದ ದುಷ್ಕರ್ಮಿಗಳು ಬೈಕಿಗೆ ಡಿಕ್ಕಿ ಹೊಡೆಸಿದ್ದಾರೆ. ಮೂರು ಜನ ನೆಲಕ್ಕುರುಳಿದ್ದಾರೆ.

ನವೀನ್ ಮತ್ತು ಗೆಳೆಯರು ಕೆಳಕ್ಕೆ ಬಿದ್ದೊಡನೆ ಕಾರಿನಿಂದ ಇಳಿದ ದುಷ್ಕರ್ಮಿಗಳು ತಲವಾರಿಂದ ದಾಳಿ ನಡೆಸಿದ್ದಾರೆ. ಭಯಗೊಂಡ ಗಿರೀಶ್ – ನಾಗೇಶ್ ಸ್ಥಳದಿಂದ ಭಯಗೊಂಡು ಓಡಿದ್ದಾರೆ. ನವೀನ್ ಡಿಸೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಡುಪಿ ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ.

ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ನವೀನ್ ಡಿಸೋಜಾ ಭಾಗಿಯಾಗಿದ್ದು ಹಲವು ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿತ್ತು. ಆರೋಪಿಗಳ ಬಗ್ಗೆ ಕೆಲ ಸಾಕ್ಷ್ಯಗಳು ದೊರೆತಿದ್ದು ಶೀಘ್ರ ಬಂಧಿಸುವುದಾಗಿ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ಹೇಳಿದ್ದಾರೆ.

ಬಿಳಿ ಸ್ವಿಫ್ಟ್ ಕಾರಿನಲ್ಲಿ ದುಷ್ಕರ್ಮಿಗಳು ಬಂದಿದ್ದರು. ಬೈಕ್ ಹತ್ತಿ ಯು ಟರ್ನ್ ಮಾಡಿ ಹೊರಟಾಗ ಕಣ್ಣಿಗೆ ಲೈಟ್ ಹಾಕಿದ್ದಾರೆ. ಕಾರನ್ನು ಬೈಕಿಗೆ ಗುದ್ದಿ ಬೀಳಿಸಿದ್ದಾರೆ. ತಲ್ವಾರ್ ಬಳಸಿಕೊಂಡು ಹಲ್ಲೆ ಮಾಡಿದ್ದಾರೆ. ಹೊಡೆತದಿಂದ ತಪ್ಪಿಸಿಕೊಳ್ಳಲು ನವೀನ್ ಎರಡು ಕೈಗಳನ್ನು ಮುಂದೆ ತಂದಾಗ ಆದಂತಹ ಗಾಯಗಳು ದೇಹದ ಮೇಲೆ ಇದೆ. ತಲೆಗೆ ಗಂಭೀರ ಗಾಯವಾಗಿದೆ. ಮಣಿಪಾಲ ಕೆಎಂಸಿಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳನ್ನು ಕೂಡಲೇ ಪತ್ತೆ ಮಾಡುತ್ತೇವೆ ಎಂದು ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *