ಪಾರ್ಟಿಗೆ ಕರೆದ್ಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಕೊಲೆ..!

Public TV
2 Min Read

ರಾಮನಗರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ರಾಂಪುರ ಗ್ರಾಮದ ಸುನೀಲ್ ಕುಮಾರ್ ಕೊಲೆಯಾದ ರೌಡಿಶೀಟರ್. ಊರೂರು ಸುತ್ತುಕೊಂಡಿದ್ದ ಸುನೀಲ್ ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ. ಈ ವೇಳೆ ಮನೆಯಲ್ಲಿದ್ದ ಸುನೀಲ್‍ನನ್ನ ಅಪರಿಚಿತರು ಪಾರ್ಟಿ ಮಾಡಲೆಂದು ರಾತ್ರಿ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆಯ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಮಾಲೀಕ ಮರಿಯಪ್ಪ ಜಮೀನಿಗೆ ಹೋದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯ ಮುಲ್ಲೇಶ್ ಕುಮಾರ್ ಹೇಳಿದ್ದಾರೆ.

ಕೊಲೆಯಾದ ಸುನೀಲ್ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದನು. ಅಲ್ಲದೇ ಈ ಹಿಂದೆ 2016 ರಲ್ಲಿ ಮೈಸೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಸುನೀಲ್, ಜ್ಯುವೆಲ್ಲರಿ ಅಂಗಡಿ ಮಾಲೀಕನ ಪತ್ನಿಯ ಜೊತೆ ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ಅನೈತಿಕ ಸಂಬಂಧ ಬೆಳೆಸಿದ್ದನು. ಗೃಹಿಣಿಯ ಮನೆಯವರಿಗೆ ವಿಷಯ ತಿಳಿದು ರಂಪಾಟವಾಗಿದ್ದರಿಂದ ಗೃಹಿಣಿ, ಸುನೀಲ್ ಸಂಪರ್ಕ ಬಿಟ್ಟಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ಸುನೀಲ್ ಆಕೆಯ ಮನೆಗೆ ತೆರಳಿ ಕೊಲೆ ಮಾಡಿ ಸೂಟ್‍ಕೇಸ್‍ನಲ್ಲಿ ಮೃತದೇಹವನ್ನು ತುಂಬಿಕೊಂಡು ಸ್ವಗ್ರಾಮ ಚನ್ನಪಟ್ಟಣದ ಮೆಣಸಿಗನಹಳ್ಳಿ ಬಳಿಯ ಕಾಡಿನ ಜಾಡಿನಲ್ಲಿ ಸುಟ್ಟು ಜೈಲುಪಾಲಾಗಿದ್ದನು. ಈತನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಸಹ ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಧಾರಾವಾಹಿಗಳಲ್ಲಿ ನಟಿಸುವ ತನ್ನ ಅತ್ತೆ ಮಗಳಿಗೂ ಕೂಡ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗುತ್ತಿದೆ. ಇನ್ನೂ ಸಾಕಷ್ಟು ಜನರ ಜೊತೆ ದ್ವೇಷವನ್ನು ಸಹ ಕಟ್ಟಿಕೊಂಡಿದ್ದನು. ಈ ಹಿನ್ನೆಲೆಯಲ್ಲಿಯೇ ಹತ್ಯೆ ನಡೆದಿರಬಹುದು ಎಂದು ಚನ್ನಪಟ್ಟಣ ವಿಭಾಗ ಡಿವೈಎಸ್‍ಪಿ ಟಿ. ಮಲ್ಲೇಶ್ ತಿಳಿಸಿದ್ದಾರೆ.

ಇನ್ನೂ ಘಟನೆ ನಂತರ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *