ನವದೆಹಲಿ: ಹಬ್ಬದ ಸಮಯದಲ್ಲಿ ರೈಲ್ವೇಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ. ಹಬ್ಬದ ಸಮಯದಲ್ಲಿ ಪ್ರಯಾಣದಟ್ಟಣೆ ನಿರ್ವಹಣೆ ಮತ್ತು ಬುಕ್ಕಿಂಗ್ ಸರಳಗೊಳಿಸಲು ಭಾರತೀಯ ರೈಲ್ವೇ (Indian Railways) ರೌಂಡ್ ಟ್ರಿಪ್ ಪ್ಯಾಕೇಜ್ (Round Trip Package) ಆರಂಭಿಸಿದೆ. ಈ ಪ್ಯಾಕೇಜ್ ಅನ್ವಯ ರಿಟರ್ನ್ ಟಿಕೆಟ್ ಬುಕ್ (Ticket Book) ಮಾಡಿದವರಿಗೆ 20% ರಿಯಾಯಿತಿ ಸಿಗಲಿದೆ.
ನಿಯಮಗಳು ಮತ್ತು ಷರತ್ತುಗಳು ಏನು?
ನಿಗದಿತ ಅವಧಿಯಲ್ಲಿ ತಮ್ಮ ವಾಪಸಾತಿ ಪ್ರಯಾಣವನ್ನು ಆಯ್ಕೆ ಮಾಡುವ ಪ್ರಯಾಣಿಕರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ:
ಈ ಯೋಜನೆಯಡಿಯಲ್ಲಿ, ಒಂದೇ ಗುಂಪಿನ ಪ್ರಯಾಣಿಕರಿಗೆ ಮುಂದಿನ ಮತ್ತು ಹಿಂದಿರುಗುವ ಪ್ರಯಾಣ ಎರಡಕ್ಕೂ ಬುಕ್ ಮಾಡಿದಾಗ ರಿಯಾಯಿತಿಗಳು ಅನ್ವಯವಾಗುತ್ತವೆ. ಹಿಂದಿರುಗುವ ಪ್ರಯಾಣದ ಪ್ರಯಾಣಿಕರ ವಿವರಗಳು ಮುಂದಿನ ಪ್ರಯಾಣದಂತೆಯೇ ಇರಬೇಕಾಗುತ್ತದೆ.
ಪ್ರಯಾಣಕ್ಕೆ ಯಾವ ದರ್ಜೆಯ ಟಿಕೆಟ್ ಬುಕ್ ಮಾಡಿದ್ದೀರೋ ಅದೇ ದರ್ಜೆಯ ರಿಟರ್ನ್ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಹಿಂದಿರುಗುವ ಪ್ರಯಾಣದ ಮೂಲ ದರದಲ್ಲಿ ಮಾತ್ರ ಒಟ್ಟು 20% ರಿಯಾಯಿತಿಗಳನ್ನು ನೀಡಲಾಗುತ್ತದೆ. ಇದನ್ನೂ ಓದಿ: ʻಇದು ಯುದ್ಧದ ಯುಗವಲ್ಲʼ – ಮೋದಿ ಸಂದೇಶ ಉಲ್ಲೇಖಿಸಿ ಅಮೆರಿಕ-ರಷ್ಯಾ ಮಾತುಕತೆಗೆ ಭಾರತ ಬೆಂಬಲ
ಈ ಯೋಜನೆಯಡಿಯಲ್ಲಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಯಾವುದೇ ಶುಲ್ಕ ಮರುಪಾವತಿ (Refund) ನೀಡುವುದಿಲ್ಲ. ಒಂದು ಬಾರಿ ಟಿಕೆಟ್ ಬುಕ್ ಮಾಡಿದ ನಂತರ ಯಾವುದೇ ಬದಲಾವಣೆಗೆ ಅನುಮತಿಸಲಾಗುವುದಿಲ್ಲ.
ರಿಯಾಯಿತಿ ದರದಲ್ಲಿ ಹಿಂದಿರುಗುವ ಪ್ರಯಾಣ ಬುಕ್ಕಿಂಗ್ ಮಾಡುವಾಗ ಯಾವುದೇ ರಿಯಾಯಿತಿಗಳು, ರೈಲು ಪ್ರಯಾಣ ಕೂಪನ್‌ಗಳು, ವೋಚರ್ ಆಧಾರಿತ ಬುಕಿಂಗ್‌ಗಳು, ಪಾಸ್‌ಗಳು ಅಥವಾ ಪಿಟಿಒಗಳು ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ.
ಮುಂದಿನ ಮತ್ತು ಹಿಂದಿರುಗುವ ಪ್ರಯಾಣದ ಟಿಕೆಟ್‌ಗಳನ್ನು ಇಂಟರ್ನೆಟ್ (ಆನ್‌ಲೈನ್) ಬುಕಿಂಗ್ ಅಥವಾ ಕಚೇರಿಗಳಲ್ಲಿ ಕೌಂಟರ್ ಬುಕಿಂಗ್ ಮೂಲಕ ಒಂದೇ ಮೋಡ್ ಅನ್ನು ಬಳಸಿಕೊಂಡು ಬುಕ್ ಮಾಡಬೇಕು.
ಟಿಕೆಟ್ ಬುಕಿಂಗ್ ಯಾವಾಗ ಪ್ರಾರಂಭ?
ರಾಜಧಾನಿ, ಶತಾಬ್ದಿ, ಡುರಾಂಟೊ ಮತ್ತು ಇತರ ಫ್ಲೆಕ್ಸಿ ದರ ರೈಲುಗಳಲ್ಲಿ ರಿಯಾಯಿತಿ ಅನ್ವಯಿಸುವುದಿಲ್ಲ. ಆಗಸ್ಟ್ 14 ರಿಂದ ಅಕ್ಟೋಬರ್ 13 ರಿಂದ 26 ವರೆಗಿನ ಪ್ರಯಾಣಕ್ಕೆ ಮತ್ತು ನವೆಂಬರ್ 17 ರಿಂದ ಡಿಸೆಂಬರ್ 1ರ ಅವಧಿಯ ರಿಟರ್ನ್ ಟಿಕೆಟ್ ಬುಕ್ ಮಾಡಬಹುದು. ಅಕ್ಟೋಬರ್ 13 ರಿಂದ 26 ಅವಧಿಯಲ್ಲಿ ರಿಟರ್ನ್ ಟಿಕೆಟ್ ಮಾಡಿದರೆ ಆಫರ್ ಸಿಗುವುದಿಲ್ಲ. 60 ದಿನಗಳ ಮೊದಲೇ ಮುಂಗಡ ಬುಕ್ಕಿಂಗ್ ಮಾಡಬೇಕೆಂಬ ನಿಯಮ ಈ ರೌಂಡ್ ಟ್ರಿಪ್ ಪ್ಯಾಕೇಜಿಗೆ ಅನ್ವಯವಾಗುವುದಿಲ್ಲ.