ಮಂಗಳೂರು: ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ವರ್ಷ ಹಿಂದೆ ಆರಂಭಗೊಂಡಿರುವ ‘ರೋಟರಿ ಅಮೃತ- ಎದೆಹಾಲಿನ ಘಟಕ’ ಅವಧಿ ಪೂರ್ವ ಜನನದ ಶಿಶುಗಳ ಜೀವ ಉಳಿಸುವಲ್ಲಿ ಜೀವ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿವೆ.
ರೋಟರಿ ಕ್ಲಬ್ ಮಂಗಳೂರು ವತಿಯಿಂದ 2022ರ ಮಾರ್ಚ್‌ನಲ್ಲಿ 35 ಲಕ್ಷ ರೂ. ಮೊತ್ತದಲ್ಲಿ ಮಾನವೀಯ ಸೇವೆ ರೂಪದಲ್ಲಿ ಪ್ರಾರಂಭವಾಗಿರುವ ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕದಲ್ಲಿ 8,265 ತಾಯಂದಿರು ದಾನ ಮಾಡಿರುವ 508 ಲೀ. ಹಾಲನ್ನು ಪ್ಯಾಶ್ಚರೀಕರಣ ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿದ್ದ 366 ನವಜಾತ ಶಿಶುಗಳಿಗೆ ನೀಡಲಾಗಿದೆ.
‘ಅವಧಿ ಪೂರ್ವ ಅಂದರೆ, ಆರೇಳು ತಿಂಗಳಲ್ಲಿ ಮಗು ಹುಟ್ಟಿದರೆ, ತಾಯಿಯಲ್ಲಿ ಹಾಲಿರುವುದಿಲ್ಲ. ನೈಸರ್ಗಿಕ ಹಾಲಿನಿಂದ ಮಗುವಿನ ಹಸಿವು ನೀಗಿಸಲು ಮಿಲ್ಕ್ ಬ್ಯಾಂಕ್ ವರದಾನವಾಗಿದ್ದು, ಅದರಲ್ಲಿ ತಾಯಿ ಹಾಲಿನ ಎಲ್ಲ ಪೌಷ್ಟಿಕಾಂಶ ಇರುತ್ತವೆ. ಅವಧಿ ಪೂರ್ವ ಜನನದ ಶಿಶುವಿನ ಹೃದಯ, ಶ್ವಾಸಕೋಶ, ಕರುಳು ಸಹಿತ ಅವಯವಗಳು ಬೆಳೆದಿರುವುದಿಲ್ಲ. ನೈಸರ್ಗಿಕ ಹಾಲು ಕೊಟ್ಟರೆ ಬೆಳವಣಿಗೆ ಸುಲಭವಾಗುತ್ತದೆ.
‘ಸಾಮಾನ್ಯವಾಗಿ ಅವಧಿ ಪೂರ್ವ ಶಿಶುಗಳಲ್ಲಿ ಎನ್‌ಇಸಿ- ನೆಕ್ರೋಟೈಸಿಂಗ್ ಎಂಟಿರೊಕೊಲಿಟಿಸ್ ಅಂದರೆ ಶೀತಲ ಘಟಕದಲ್ಲಿ ಶೇಖರಿಸಿರುವ ಎದೆ ಹಾಲು. ಕರಳು ಕೊಳತಂಥ ಸ್ಥಿತಿ ಇರುತ್ತದೆ. ತಾಯಿಯ ನೈಸರ್ಗಿಕ ಹಾಲು ಕೊಟ್ಟರೆ, ಅಂತಹ ಕರುಳಿಗೆ ರಕ್ಷಣೆ ಸಿಗುತ್ತದೆ. ಮಿಲ್ಕ್ ಬ್ಯಾಂಕ್ ಸ್ಥಾಪನೆಯಾದ ಬಳಿಕ ಯಾವುದೇ ಎನ್‌ಇಸಿ ಸಮಸ್ಯೆ ಉಲ್ಬಣಗೊಂಡಿಲ್ಲ. ಆರ್‌ಒಪಿ- ಕಣ್ಣಿನ, ಬಿಪಿಡಿ-ಶ್ವಾಸಕೋಶದ ಸಮಸ್ಯೆಗೂ ರಾಮಬಾಣ. ಹೀಗಾಗಿ, ಶಿಶುಗಳ ಸಾವಿನ ಪ್ರಮಾಣ ಕಡಿಮೆಯಾಗಿ, ಲೇಡಿಗೋಷನ್ ಎನ್‌ಐಸಿಯುಗೆ ಈ ಘಟಕ ದೇವರೇ ಕೊಟ್ಟ ವರ’.
ಅವಧಿ ಪೂರ್ವ ಜನಿಸಿದ ಶಿಶುಗಳಲ್ಲಿ ಶೇ.32ರಷ್ಟು ಸಾವನ್ನಪ್ಪುತ್ತವೆ. ಎದೆ ಹಾಲು ಘಟಕದ ಪರಿಕಲ್ಪನೆಯಿಂದಾಗಿ ಈ ಶಿಶುಗಳು ಬದುಕುಳಿಯುವಂತಾಗಿದೆ. ಯಾವುದೇ ಕೃತಕ ಹಾಲು ಸಂಪೂರ್ಣ ಆಹಾರವಲ್ಲ, ಎದೆ ಹಾಲು ಮಾತ್ರ ಪರಿಪೂರ್ಣ ಹಾಲಾಗಿದ್ದು, ಶಿಶು ಮರಣ ಸಂಖ್ಯೆ ಕಡಿಮೆ ಮಾಡುವಲ್ಲಿ ಪ್ರಮುಖ ಕೊಡುಗೆ ನೀಡಿದೆ ಎಂದು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ತಿಳಿಸಿದ್ದಾರೆ.
ತಾಯಿ ಎದೆಯಿಂದ ಪ್ರಥಮ ಮೂರು ದಿನಗಳಲ್ಲಿ ಸಿಗುವ ಹಳದಿ ಬಣ್ಣ ಗಾಢವಾದ ಹಾಲು- ಕೊಲೊಸ್ಟಂ ನಿಸರ್ಗದ ಪ್ರಥಮ ವ್ಯಾಕ್ಸಿನ್. ಇಲ್ಲಿ ದಾನ ಮಾಡುವ ಹಾಲಿನಲ್ಲಿ ಕೊಲೊಸ್ಟಂ ಅಂಶ ಕೂಡ ಸಿಗುವ ಮೂಲಕ ಪರೋಕ್ಷವಾಗಿ ಮಗುವಿನ ಬೆಳವಣಿಗೆಗೆ ನೆರವಾಗುತ್ತದೆ. ಇಲ್ಲಿ 27 ವಾರದಲ್ಲಿ ಹುಟ್ಟಿದ ಅತ್ಯಂತ ಕಡಿಮೆ ಅವಧಿಯ, ಅತ್ಯಂತ ಕಡಿಮೆ 718 ಗ್ರಾಂ ತೂಕದ ಶಿಶುವಿಗೂ ಜೀವದಾನ ಸಿಕ್ಕಿದ್ದು, ಇಂತಹ ಜಾದೂಗಳು ಹ್ಯೂಮನ್ ಮಿಲ್ಕ್ ಬ್ಯಾಂಕ್‌ನಿಂದ ಮಾತ್ರ ಸಾಧ್ಯ. ಅಧಿಕ ಹಾಲಿರುವ ತಾಯಂದಿರು, ಇನ್ನೊಬ್ಬ ತಾಯಿ-ಶಿಶುಗೆ ಹಾಲು ಕೊಟ್ಟ ಸಂತೃಪ್ತ ಭಾವ ಇರುತ್ತದೆ.
ಹಾಲು ಕೊಡುವ ಕ್ರಮ: ಕೆಲವು ಬಾಣಂತಿಯರಲ್ಲ ಎದೆ ಹಾಲು ಹೆಚ್ಚಿದ್ದು, ನೋವು ಅನುಭವಿಸುತ್ತಿರುತ್ತಾರೆ. ಅಂಥವರು ವೈದ್ಯರ ಸಲಹೆಯಂತೆ ದಾನ ಮಾಡಲು ಬಯಸುತ್ತಾರೆ. ಅವರಿಗೆ ಆಪ್ತ ಸಮಾಲೋಚನೆ ನಡೆಸಿ, ಘಟಕಕ್ಕೆ ಕಳುಹಿಸಲಾಗುತ್ತದೆ.
ಕೆ-ಶೀಟ್ ಸಹಿತ ಬರುವ ತಾಯಂದಿರ ಫೈಲ್ ಚೆಕ್ ಮಾಡಿ, ಸಂಪೂರ್ಣ ಆರೋಗ್ಯವಂತರು ಎಂದು ಖಾತ್ರಿಯಾದ ಬಳಿಕವೇ ಹಾಲು ಪಡೆಯಲಾಗುತ್ತದೆ. ತಾಯಿಗೆ ಸೆರೋಲಜಿ ಪರೀಕ್ಷೆಗಳಾದ ಹೆಚ್‌ಐವಿ, ಹೆಚ್‌ಬಿಎಸ್‌ಎಜಿ. ವಿಡಿಆರ್‌ಎಲ್, ಹೆಚ್‌ಸಿವಿ ಪರೀಕ್ಷೆ ಮಾಡಲಾಗುತ್ತವೆ. ಎಲ್ಲವೂ ನೆಗೆಟಿವ್ ಇರಬೇಕು ಎನ್ನುತ್ತಾರೆ ಎದೆ ಹಾಲು ಘಟಕದ ಭವ್ಯಾ.
ಪಡೆದ ಹಾಲನ್ನು ಮೈನಸ್ 20ರಲ್ಲಿ ಮೂರು ತಿಂಗಳು ಇಡಬಹುದು. ಅಷ್ಟರೊಳಗೆ ಪ್ಯಾಶ್ಚರೀಕರಣ ಮಾಡಿ, ಸಂಗ್ರಹಿಸಿದ ದಿನಾಂಕದಿಂದ ಆರು ತಿಂಗಳು ಶೇಖರಿಸಿಡಬಹುದು. ಪ್ಯಾಶ್ಚರೀಕರಣ ನಡೆದ ತಕ್ಷಣ ಕಲ್ಟರ್ ಟೆಸ್ಟ್‌ಗೆ ಕಳುಹಿಸಿ, ಈ ಹಾಲು ಶಿಶುಗಳಿಗೆ ಉಣಿಸಬಹುದು ಎಂಬ ಪ್ರಯೋಗಾಲಯದ ವರದಿ ಬಂದ ಬಳಿಕಷ್ಟೇ ಎನ್‌ಐಸಿಯು ಶಿಶುಗಳಿಗೆ ಬಳಕೆ ಮಾಡಲಾಗುತ್ತದೆ.
8,265 ತಾಯಂದಿರಿಂದ ಎದೆಹಾಲು ದಾನ
508 ಲೀ. ಎದೆಹಾಲು ಸಂಗ್ರಹ
ತೀವ್ರ ನಿಗಾ ಘಟಕದಲ್ಲಿದ್ದ 366 ನವಜಾತ ಶಿಶುಗಳಿಗೆ ನೀಡಿಕೆ