ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

Public TV
2 Min Read

ಮಾತಿನ ಚಕಮಕಿಯಿಂದಾಗಿ ‘ಬಿಗ್ ಬಾಸ್’ (Bigg Boss Season 9) ಮನೆ ಕೊತ ಕೊತ ಕುದಿಯುತ್ತಿದೆ. ಮೊದಲ ದಿನದಂದು ಇಲ್ಲಿಯತನಕ ಪ್ರಶಾಂತ್ ಸಂಬರ್ಗಿ ಮತ್ತು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ(Rupesh Rajanna)  ಮಧ್ಯೆ ಜಗಳವಾಗುತ್ತಲೇ ಇದೆ. ಇಬ್ಬರೂ ಒಂದು ರೀತಿಯಲ್ಲಿ ಹಾವು ಮುಂಗಸಿ ತರಹ ಆಡುತ್ತಿದ್ದಾರೆ. ವೈಯಕ್ತಿಕ ವಿಚಾರವನ್ನು ಕೆದಕಿ, ತಮ್ಮ ಮರ್ಯಾದೆಯನ್ನು ತಾವೇ ಕ್ಯಾಮೆರಾ ಮುಂದೆ ಕಳೆದುಕೊಳ್ಳುತ್ತಿದ್ದಾರೆ. ಕ್ಯಾಪ್ಟೆನ್ಸಿಗಾಗಿ ನಡೆದ ‘ಬಿಗ್ ಬಾಸ್ ಗೋಲ್ಡ್ ಮೈನ್’ ಟಾಸ್ಕ್ ನಲ್ಲಿ ಮತ್ತೆ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ.

ಈ ವಾರದ ಕ್ಯಾಪ್ಟೆನ್ಸಿಗಾಗಿ ವಿಭಿನ್ನ ರೀತಿಯ ಟಾಸ್ಕ್ ಒಂದನ್ನು ಆಯೋಜನೆ ಮಾಡಿದ್ದಾರೆ ಬಿಗ್ ಬಾಸ್. ಈ ಟಾಸ್ಕ್ ನಲ್ಲಿ ನಿಧಿ ಶೋಧಕರು ಚಿನ್ನವನ್ನು ಹುಡುಕಿ, ಅದನ್ನು ವಿಸರ್ಜಕರ ಬಳಿ ವಿನಿಯೋಗಿಸಿ, ಎದುರಾಳಿಯನ್ನು ಕ್ಯಾಪ್ಟೆನ್ಸಿ ಟಾಸ್ಕ್ ನಿಂದ ಹೊರಗಿಡಬೇಕು.  ಮೊದಲ ಸುತ್ತಿನಲ್ಲಿ ರೂಪೇಶ್ ಶೆಟ್ಟಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ರೂಪೇಶ್ ರಾಜಣ್ಣ, ಟಾಸ್ಕ್ ಅನುಸಾರ ಪ್ರಶಾಂತ್ ಸಂಬರ್ಗಿಯನ್ನು ಔಟ್ ಮಾಡಿದರು. ಎರಡನೇ ಸುತ್ತಿನಲ್ಲಿ ವಿನೋದ್ ಗೊಬ್ಬರಗಾಲ ಜೊತೆ ಪ್ರಶಾಂತ್ ಸಂಬರ್ಗಿ ಡೀಲ್ ಮಾಡಿಕೊಂಡು ರೂಪೇಶ್ ರಾಜಣ್ಣನನ್ನು ಹೊರ ಹಾಕಿದರು. ಇದೇ ಜಗಳಕ್ಕೆ ಕಾರಣವಾಯಿತು. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

ಕುತಂತ್ರಿ ಬುದ್ದಿಯಿಂದ ತನ್ನನ್ನು ಔಟ್ ಮಾಡಿದರು ಎಂದು ರೂಪೇಶ್ ರಾಜಣ್ಣ ಕೂಗಾಡಿದರು. ಸಂಬರ್ಗಿ (Prashant Sambargi) ಅವರನ್ನು ‘ಹೇಡಿ, ರಾಜಾ ಇಲಿ’ ಎಂದೆಲ್ಲ ಜರಿದರು. ಮಾತಿಗೆ ಮಾತು ಬೆಳೆದು ‘ಡಬ್ಬಾ ನನ್ ಮಗ, ಹೆದರುಪುಕ್ಲ ರೂಪೇಶ್ ರಾಜಣ್ಣ, ಯಾರ‍್ಯಾರ ಬಳಿ ರೋಲ್ ಮಾಡಿದ್ದಾರೋ, ಏನೋ? ಕನ್ನಡದ ಕಂದ ಹೇಡಿ’ ಅಂತೆಲ್ಲ ಪ್ರಶಾಂತ್ ಸಂಬರಗಿ ಜರಿದರು. ರೋಲ್‌ಕಾಲ್‌ ವಿಚಾರವಾಗಿ ರೂಪೇಶ್ ರಾಜಣ್ಣ ಗರಂ ಆದರು. ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ಬಿಗ್ ಬಾಸ್ ಮನೆಯ ವಾತಾವರಣವೇ ಬದಲಾಯಿತು.

ತನಗೆ ರೋಲ್‌ಕಾಲ್‌ (Roll Call) ಅಂದ ಪ್ರಶಾಂತ್ ಸಂಬರ್ಗಿಯನ್ನು ದುರುಗುಟ್ಟಿ ನೋಡಿದ ರೂಪೇಶ್ ರಾಜಣ್ಣ, ‘ನಾನೇನಾದರೂ ರೋಲ್‌ಕಾಲ್ ಮಾಡಿದ್ದರೆ, ಯಾರಿಂದಾದರೂ ನಯಾಪೈಸೆ ಪಡೆದಿದ್ದರೆ, ಅದನ್ನು ಸಂಬರ್ಗಿ ಸಾಬೀತು ಪಡಿಸಲಿ. ನಾನು ರೋಲ್‌ಕಾಲ್ ಮಾಡಿದ್ದೇನೆ ಅಂತ ಪ್ರೂವ್ ಮಾಡಿದರೆ ಹ್ಯಾಂಗ್ ಮಾಡಿಕೊಳ್ಳಲು ಸಿದ್ಧ’ ಎಂದು ಘೋಷಿಸಿದರು. ‘ಹೊರಗಡೆ ಕೋಟಿ ಕೋಟಿ ವ್ಯವಹಾರ ಮಾಡೋ ಕುತಂತ್ರಿಗಳು ನಾವಲ್ಲ’ ಎಂದು ಪರೋಕ್ಷವಾಗಿ ಸಂಬರ್ಗಿಗೆ ಟಾಂಗ್ ಕೂಡ ಕೊಟ್ಟರು.

ಕನ್ನಡದ (Kannada) ವಿಚಾರದಲ್ಲಿ ಮೊದಲಿನಿಂದಲೂ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಮಧ್ಯೆ ಶೀತಲಸಮರ ನಡೆಯುತ್ತಲೇ ಇದೆ. ಈ ಹಿಂದೆ ‘ಸಂಬರ್ಗಿ ಕನ್ನಡ ವಿರೋಧಿ’ ಎಂದು ರೂಪೇಶ್ ಆರೋಪಿಸಿದ್ದರು. ‘ಕನ್ನಡದ ವಿಚಾರದಲ್ಲಿ ರೂಪೇಶ್ ಏನು ಅಂತ ಎಲ್ಲರಿಗೂ ಗೊತ್ತಿದೆ’ ಎಂದು ಸಂಬರ್ಗಿ ಪ್ರಶ್ನೆ ಮಾಡಿದ್ದರು. ಇದೀಗ ರೋಲ್‌ಕಾಲ್ ವಿಷಯ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ದೊಡ್ಮನೆ ಆಚೆಯೂ ಚರ್ಚೆಗೆ ಕಾರಣವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *