ನಾಲ್ವರು ಆಟಗಾರರ ಹೆಸರನ್ನು ಹೇಳಿ ಥ್ಯಾಂಕ್ಸ್‌ ಎಂದ ಅಶ್ವಿನ್‌

By
1 Min Read

ಬ್ರಿಸ್ಪೇನ್‌: ಗೂಗ್ಲಿ ಎಸೆದು ಬ್ಯಾಟ್ಸ್‌ಮನ್‌ಗಳಿಗೆ ಶಾಕ್‌ ನೀಡುತ್ತಿದ್ದ ಅಶ್ವಿನ್‌ (R Ashwin) ದಿಢೀರ್‌ ನಿವೃತ್ತಿ ಹೇಳಿ ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ತಮ್ಮ ಕೊನೆಯ ಸುದ್ದಿಗೋಷ್ಠಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿ ನಾಲ್ವರು ಆಟಗಾರರ ಹೆಸರನ್ನು ಉಲ್ಲೇಖಿಸಿದ್ದಾರೆ.

ಆಸ್ಟ್ರೇಲಿಯಾ (Australia) ವಿರುದ್ಧದ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಬಳಿಕ ರೋಹಿತ್‌ ಶರ್ಮಾ ಜೊತೆ ಅಶ್ವಿನ್‌ ಸುದ್ದಿಗೋಷ್ಠಿಗೆ ಆಗಮಿಸಿದರು. ಈ ವೇಳೆ ನಾನು ಕೆಲವರ ಹೆಸರನ್ನು ಹೇಳಲು ಬಯಸುತ್ತೇನೆ. ನನ್ನ ಕ್ರಿಕೆಟ್‌ ಪ್ರಯಾಣದಲ್ಲಿ ಭಾಗವಾದ ಎಲ್ಲಾ ಕೋಚ್‌ಗಳು, ಪ್ರಮುಖವಾಗಿ ರೋಹಿತ್, ವಿರಾಟ್, ಅಜಿಂಕ್ಯ, ಚೇತೇಶ್ವರ ಪೂಜಾರ ಅವರು ಹಿಂದುಗಡೆ ನಿಂತು ಕ್ಯಾಚ್‌ಗಳನ್ನು ಪಡೆದು ನನಗೆ ವಿಕೆಟ್‌ ಗಳಿಸುವಲ್ಲಿ ನೆರವಾಗಿದ್ದಾರೆ ಎಂದರು.

 

ಭಾರತೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ನನ್ನಲ್ಲಿ ಇನ್ನೂ ಸಾಮರ್ಥ್ಯ ಇದೆ ಎಂದು ನಾನು ಭಾವಿಸಿದ್ದೇನೆ. ಬಹುಶಃ ಅದನ್ನು ಕ್ಲಬ್ ಮಟ್ಟದ ಕ್ರಿಕೆಟ್‌ನಲ್ಲಿ ಪ್ರದರ್ಶಿಸಲಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

ರೋಹಿತ್‌ ಶರ್ಮಾ ಸೇರಿದಂತೆ ಸಹ ಆಟಗಾರರೊಂದಿಗೆ ಸಾಕಷ್ಟು ನೆನಪುಗಳನ್ನು ಸೃಷ್ಟಿಸಿದ ನೆನಪು ನನ್ನಲ್ಲಿದೆ. ಬಿಸಿಸಿಐ ಮತ್ತು ಸಹ ಆಟಗಾರರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.

ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ದೊಡ್ಡ ಧನ್ಯವಾದ. ನಾನು ಅವರ ವಿರುದ್ಧ ಆಡುವ ಸಮಯವನ್ನು ಆನಂದಿಸಿದೆ. ಇದು ಭಾವನಾತ್ಮಕ ಕ್ಷಣವಾಗಿರುವ ಕಾರಣ ನಾನು ಯಾವುದೇ ಪ್ರಶ್ನೆಯನ್ನು ತೆಗೆದುಕೊಳ್ಳುವುದಿಲ್ಲ ಎಂದರು.

ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ಅಶ್ವಿನ್ ಭಾಗವಹಿಸುವುದಿಲ್ಲ. ಡಿಸೆಂಬರ್ 19 ರಂದು ಅಶ್ವಿನ್ ಭಾರತಕ್ಕೆ ತೆರಳುತ್ತಿದ್ದಾರೆ ಎಂದು ರೋಹಿತ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

 

Share This Article