ಐಪಿಎಲ್‌ ಅಂಗಳದಲ್ಲಿ ಕ್ಯಾಪ್ಟನ್ಸಿ ಕಿಚ್ಚು – ಕರ್ಮ ಸುಮ್ಮನೆ ಬಿಡಲ್ಲ; ಪಾಂಡ್ಯ ವಿರುದ್ಧ ಫ್ಯಾನ್ಸ್‌ ಫುಲ್‌ ಗರಂ

Public TV
2 Min Read

ಬೆಂಗಳೂರು: 17ನೇ ಆವೃತ್ತಿಯಲ್ಲಿ ಆರಂಭಿಕ ಪಂದ್ಯವನ್ನಾಡಿದ ಮುಂಬೈ ಇಂಡಿಯನ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ ವಿರುದ್ಧ 6 ರನ್‌ಗಳಿಂದ ಸೂಲು ಕಂಡಿತು. 2013 ರಿಂದ ಆರಂಭಿಕ ಪಂದ್ಯಗಳಲ್ಲಿ ಸೋಲಿನೊಂದಿಗೆಯೇ ಮುನ್ನಡೆಯುತ್ತಿದ್ದ ಮುಂಬೈ ಇಂಡಿಯನ್ಸ್‌ ಈ ಬಾರಿಯೂ ಸೋಲು ಕಂಡಿದೆ.

ಇದೇ ಪಂದ್ಯದಲ್ಲಿ ಮುಂಬೈಯ ನೂತನ ನಾಯಕ ಹಾರ್ದಿಕ್​ ಪಾಂಡ್ಯ (Hardik Pandya) ಅವರು ಮಾಜಿ ನಾಯಕ ರೋಹಿತ್​ ಶರ್ಮ(Rohit Sharma) ಅವರನ್ನು ನಡೆಸಿಕೊಂಡ ರೀತಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ವೇಳೆ ಚೆನ್ನೈ ತಂಡದ ನೂತನ ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ ಅವರನ್ನು ಉದಾಹರಣೆ ನೀಡಿ, ಹಿರಿಯ ನಾಯಕನನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋದನ್ನ ಕಲಿತುಕೊಳ್ಳುವಂತೆ ಕಿಡಿ ಕಾರಿದ್ದಾರೆ.

ಕ್ಯಾಪ್ಟನ್ಸಿ ಕಿಚ್ಚು:
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅವರು ಗುಜರಾತ್​ ಬ್ಯಾಟಿಂಗ್​ ವೇಳೆ ರೋಹಿತ್​ ಅವರನ್ನು ಹಲವು ಬಾರಿ ಫೀಲ್ಡಿಂಗ್​ ಬದಲಿಸಿದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್​, ಇನ್ನೊಮ್ಮೆ ಲೆಗ್​ ಸೈಡ್, ಮಿಡ್ ಆಫ್‌ ನತ್ತ ಬದಲಿಸಿದರು. ಮೈದಾನದ ಮೂಲೆ ಮೂಲೆಗೂ ಓಡಾಡಿಸಿದರು. ಅದೆನ್ನೆಲ್ಲ ಸಹಿಸಿಕೊಂಡು ತಾನೊಬ್ಬ ಪ್ಲೇಯರ್‌ ಅಂತೆ ನಡೆದುಕೊಂಡ ರೋಹಿತ್‌ ಶರ್ಮಾ ನಾಯಕ ಹೇಳಿದ ರೀತಿಯಲ್ಲಿ ಫೀಲ್ದಿಂಗ್‌ ನಿರ್ವಹಿಸಿದರು.

ಇನಿಂಗ್ಸ್​ನ ಅಂತಿಮ ಓವರ್​ನಲ್ಲಿ 30 ಯಾರ್ಡ್​ ಸರ್ಕಲ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ರೋಹಿತ್​ ಅವರನ್ನು ಪಾಂಡ್ಯ ಏಕಾಏಕಿ ಲಾಂಗ್​ ಆನ್​ನಲ್ಲಿ ಫೀಲ್ಡಿಂಗ್​ ಮಾಡುವಂತೆ ಸೂಚನೆ ಕೊಟ್ಟರು. ಒಮ್ಮೆ ಗೊಂದಲಕ್ಕೆ ಒಳಗಾದ ರೋಹಿತ್​ ಕೈ ಸನ್ನೆಯ ಮೂಲಕ ನನಗೆ ಹೇಳಿದ್ದಾ? ಕೇಳಿದರು, ಆಗ ಪಾಂಡ್ಯ ಹೌದು ನೀವೆ ಎಂದು ಕೈಸನ್ನೆ ಮೂಲಕ ಹೇಳಿದರು. ನಾಯಕನ ಸೂಚನೆಯಂತೆ ರೋಹಿತ್​ ಬೌಂಡರಿ ಲೈನ್​ ಕಡೆಗೆ ಓಡಿದರು. ಆಗಲೂ ಪಾಂಡ್ಯ ಅಲ್ಲಿಂದ ಬೇರೆ ಕಡೆ ಹೋಗುವಂತೆ ಹೇಳಿದರು.

ರೋಹಿತ್‌ ಶರ್ಮಾ ಅವರನ್ನು ಹಾರ್ದಿಕ್‌ ಪಾಂಡ್ಯ ನಡೆಸಿಕೊಂಡ ರೀತಿಯ ವೀಡಿಯೋ ತುಣುಕು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರಿಂದ ಅಸಮಾಧಾನಗೊಂಡ ರೋಹಿತ್‌ ಶರ್ಮಾ ಅಭಿಮಾನಿಗಳು ಹಾರ್ದಿಕ್‌ ಪಾಂಡ್ಯ ವಿರುದ್ಧ ಕೆಂಡ ಕಾರಿದ್ದಾರೆ. ಅಲ್ಲದೇ ವೇಗಿ ಜಸ್ಪ್ರೀತ್‌ ಬುಮ್ರಾ ಅವರು ನೀಡಿದ ಸಲಹೆಯನ್ನೂ ಪಾಂಡ್ಯ ಕ್ಯಾರೆ ಎನ್ನದೇ ತಮ್ಮಿಷ್ಟದಂತೆ ದರ್ಪ ತೋರಿದ ದೃಶ್ಯವೂ ಕಂಡುಬಂದಿತು.

ಕರ್ಮ ಸುಮ್ಮನೇ ಬಿಡಲ್ಲ:‌
ಹಾರ್ದಿಕ್‌ ಪಾಂಡ್ಯ ಅವರ ವರ್ತನೆಯನ್ನು ಪಂದ್ಯ ಮುಕ್ತಾಯದ ವರೆಗೂ ಸಹಿಸಿಕೊಂಡಿದ್ದ ಫ್ಯಾನ್ಸ್‌, ಪಂದ್ಯದ ಸೋಲಿನ ನಂತರ ಹಾರ್ದಿಕ್‌ ಪಾಂಡ್ಯರನ್ನ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಕರ್ಮ ನಿಮ್ಮನ್ನ ಸುಮ್ಮನೆ ಬಿಡಲ್ಲ, ಸರಿಯಾಗಿ ಮಾಡುತ್ತೆ ಎಂದು ಆಕ್ರೋಶದ ಪೋಸ್ಟ್‌ಗಳನ್ನ ಹಂಚಿಕೊಂಡಿದ್ದಾರೆ.

ಫ್ಯಾನ್ಸ್‌ಗಳ ನಡುವೆ ಬಡಿದಾಟ:
ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಹಾರ್ದಿಕ್​ ಪಾಂಡ್ಯ ಫೀಲ್ಡಿಂಗ್​ ವೇಳೆ ರೋಹಿತ್​ ಅವರನ್ನು ನಡೆಸಿಕೊಂಡ ರೀತಿ ಹಿಟ್‌ಮ್ಯಾನ್‌ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಪಂದ್ಯ ಸೋತ ಬಳಿಕ ಸೋಲಿಗೆ ಪಾಂಡ್ಯ ಅವರೇ ಎಂದು ಬೈಯುತ್ತಿದ್ದರು. ಈ ವೇಳೆ ಹಾರ್ದಿಕ್‌ ಮತ್ತು ರೋಹಿತ್‌ ಅಭಿಮಾನಿಗಳ ನಡುವೆ ಹೊಡೆದಾಟವೇ ನಡೆಯಿತು. ಪರಸ್ಪರ ಮೈದಾನದಲ್ಲೇ ಕೈಕೈ ಮಿಲಾಯಿಸಿದರು. ಈ ವೀಡಿಯೋ ಸಹ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Share This Article