– ಮುಂದಿನ ಅಧ್ಯಕ್ಷರ ಆಯ್ಕೆವರೆಗೆ ರಾಜೀವ್ ಶುಕ್ಲಾ ಹಂಗಾಮಿ ಅಧ್ಯಕ್ಷ
ನವದೆಹಲಿ: ಭಾರತದ ಮಾಜಿ ಆಲ್‌ರೌಂಡರ್ ರೋಜರ್ ಬಿನ್ನಿ (Roger Binny) ಅವರು ಬಿಸಿಸಿಐ (BCCI) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ಸದ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಜೀವ್ ಶುಕ್ಲಾ (Rajeev Shukla) ಮುಂದಿನ ಚುನಾವಣೆಯವರೆಗೂ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿಯಮಗಳ ಪ್ರಕಾರ, 70 ವಯಸ್ಸಿನ ನಂತರ ಯಾವುದೇ ಪದಾಧಿಕಾರಿಗಳು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ. ಇತ್ತೀಚಿಗೆ ಜು.19ರಂದು ರೋಜರ್ ಬಿನ್ನಿ ಅವರು 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಹೀಗಾಗಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್
2017ರ ಸುಪ್ರೀಂ ಕೋರ್ಟ್‌ನ (Supreme Court) ಶಿಫಾರಸುಗಳ ಪ್ರಕಾರ, ಬಿಸಿಸಿಐನಂತಹ ಕೆಲವು ಭಾರತೀಯ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಒಟ್ಟು ಒಂಬತ್ತು ವರ್ಷಗಳು ಅಥವಾ ಸತತ ಆರು ವರ್ಷಗಳನ್ನು ಪೂರೈಸಿದ ನಂತರ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಈ ನಿಯಮಗಳು ಹೊಸ ನಾಯಕತ್ವವನ್ನು ಉತ್ತೇಜಿಸುವ ಮತ್ತು ಅಧಿಕಾರದ ಕೇಂದ್ರೀಕರಣವನ್ನು ತಡೆಯುವ ಮೂಲ ಗುರಿಯನ್ನು ಹೊಂದಿದೆ.
ಬುಧವಾರ (ಆ.29) ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯು ಶುಕ್ಲಾ ಅವರ ನೇತೃತ್ವದಲ್ಲಿ ನಡೆದಿತ್ತು. ಸಭೆಯಲ್ಲಿ ಡ್ರೀಮ್ 11 ಒಪ್ಪಂದವನ್ನು ಮುಕ್ತಾಯಗೊಳಿಸುವುದರ ಜೊತೆಗೆ ಮುಂದಿನ ಎರಡೂವರೆ ವರ್ಷಗಳ ಕಾಲ ಹೊಸ ಪ್ರಾಯೋಜಕರ ಹುಡುಕಾಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನೂ ಸೆಪ್ಟೆಂಬರ್ 10ರಂದು ಏಷ್ಯಾ ಕಪ್ ಪ್ರಾರಂಭವಾಗುವುದರೊಳಗೆ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳುವುದು ಬಿಸಿಸಿಐಗೆ ಹೊಸ ಸವಾಲಾಗಿ ಪರಿಣಮಿಸಿದೆ.
ಏಷ್ಯಾ ಕಪ್‌ಗೆ ಇನ್ನು ಎರಡೇ ವಾರಗಳು ಬಾಕಿಯಿದ್ದು, ಈ ಸಮಯದಲ್ಲಿ ಹೊಸ ಟೆಂಡರ್ ಹುಡುಕಿ, ಅದರ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಏಷ್ಯಾ ಕಪ್‌ಗೆ ಅಲ್ಪಾವಧಿಯ ಪ್ರಾಯೋಜಕರ ಅವಶ್ಯಕತೆಯಿದೆ. ಆದರೆ ನಾವು ಮುಂದಿನ ಎರಡೂವರೆ ವರ್ಷಗಳ ಕಾಲ ಅಂದರೆ 2027ರ ಏಕದಿನ ವಿಶ್ವಕಪ್‌ವರೆಗೆ ಹೊಸ ಪ್ರಾಯೋಜಕರನ್ನು ಹುಡುಕುವಲ್ಲಿ ಗಮನಹರಿಸುತ್ತಿದ್ದೇವೆ ಎಂದಿರುವುದಾಗಿ ಮೂಲಗಳು ತಿಳಿಸಿವೆ.ಇದನ್ನೂ ಓದಿ: ಹುಬ್ಬಳ್ಳಿ | ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನ – ಪಾಲಿಕೆಯಿಂದ ಅಧಿಕೃತ ಘೋಷಣೆ