ಯಾವ ಹೆಣ್ಣುಮಕ್ಳು ಮದ್ವೆಯಾಗಿ ದೀಪ ಹಚ್ಚುತ್ತಾಳೋ ಅದು ಅವರ ಮನೆ: ಯಶ್

Public TV
3 Min Read

– ಇದು ಜನರಲ್ಲಿ ಇರೋ ಕಾಮನ್‍ಸೆನ್ಸ್
– ಮಂಡ್ಯದ ಬಗ್ಗೆ ಅಣ್ಣನಿಗೆ ನಾಟಕದ ಪ್ರೀತಿ ಇರಲಿಲ್ಲ

ಮಂಡ್ಯ: ಯಾವ ಹೆಣ್ಣುಮಕ್ಕಳು ಮದುವೆಯಾಗಿ ದೀಪ ಹಚ್ಚುತ್ತಾಳೋ ಅದು ಅವರ ಮನೆ ಆಗುತ್ತೆ. ಇದು ಜನರಲ್ಲಿ ಇರೋ ಕಾಮನ್ ಸೆನ್ಸ್ ಎಂದು ನಟ ಯಶ್ ಹೇಳಿದ್ದಾರೆ.

ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಎಂದು ಸಂಸದ ಶಿವರಾಮೇಗೌಡ ಹೇಳಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾವ ಹೆಣ್ಣುಮಕ್ಕಳು ಮದುವೆಯಾಗಿ ದೀಪ ಹಚ್ಚುತ್ತಾಳೋ ಅದು ಅವರ ಮನೆ ಆಗುತ್ತೆ. ಇದು ಜನರಲ್ಲಿ ಇರೋ ಕಾಮನ್ ಸೆನ್ಸ್. ಅದು ಬಿಟ್ಟು ಇವರು ಗೌಡ್ತಿನೋ ಅಲ್ವೋ ಜಾತಿಗಳನ್ನ ತರುವುದು ಅದೆಲ್ಲ ತಪ್ಪು. ಸುಮಲತಾ ನಿಮ್ಮ ಮಂಡ್ಯದ ಸೊಸೆ. ಅಂಬರೀಶ್ ಅಣ್ಣ ನಿಮ್ಮ ಮಂಡ್ಯದ ಮಗ. ಇಂಡಿಯಾದಲ್ಲಿ ಮಂಡ್ಯ ಎನ್ನುವ ಪದ ಎಲ್ಲೇ ಬಂದರು ಅಲ್ಲಿ ಅಂಬರೀಶ್ ಅಣ್ಣ ಎಂಬ ಹೆಸರು ಬರಲೇ ಬೇಕು. ಅದು ಆ ವ್ಯಕ್ತಿ ಬೆಳೆಸಿಕೊಂಡ ಪ್ರೀತಿ. ಯಾವಾಗ ಹೋದರು ಮಂಡ್ಯ, ಮಂಡ್ಯ ಎಂದು ಹೇಳುತ್ತಿದ್ದರು. ಮಂಡ್ಯ ಅಂದರೆ ಎಲ್ಲಿಬೇಕಾದರೂ ಬದುಕಬಹುದು. ವಿದೇಶಕ್ಕೆ ಹೋದರೂ ಮಂಡ್ಯ ಎಂದು ಹೇಳುತ್ತಿದ್ದರು. ಜೀವನದಲ್ಲಿ ಮಂಡ್ಯ ಮೇಲೆ ಪ್ರೀತಿ ಇಟ್ಟುಕೊಂಡಿದ್ದರು ಎಂದರು.

ಅಂಬರೀಶ್ ನಿಧನರಾಗುವ ದಿನ ಬಸ್ ಅಪಘಾತದ ಘಟನೆ ನೋಡಿ ನೊಂದುಕೊಂಡು ತುಂಬಾ ಕುಸಿದಿದ್ದರು. ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅವರು ಮಂಡ್ಯದ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದರು. ಅವರ ಮಂಡ್ಯದ ಮೇಲೆ ನಾಟಕದ ಪ್ರೀತಿ ಇಟ್ಟುಕೊಂಡಿರಲಿಲ್ಲ. ಅಂಬರೀಶ್ ಅಣ್ಣನಿಗೆ ಮಂಡ್ಯ ಜನತೆ ಅಂದರೆ ಎಷ್ಟು ಪ್ರೀತಿ ಇದೆಯೋ ಮಂಡ್ಯ ಜನಕ್ಕೆ ಅಂಬರೀಶ್ ಅಣ್ಣ ಅಂದರೆ ಅಷ್ಟೇ ಪ್ರೀತಿ. ಆ ಸಂಬಂಧ ಅಳಿಸುವುದಕ್ಕೆ ಆಗಲ್ಲ ಎಂದು ಯಶ್ ಹೇಳಿದರು.

ಇವತ್ತಿನ ದಿನ ಒಂದು ಘಟನೆ ಯಾವ ರೀತಿ ತಲುಪಿದೆ ಅಂದರೆ ಇದು ಸ್ವಾಭಿಮಾನದ ಪ್ರಶ್ನೆ ಆಗಿದೆ. ಆ ಹೆಣ್ಣುಮಗಳು ನಿಮ್ಮ ಮಡಿಲಲ್ಲಿ ಇದ್ದಾರೆ. ಇಲ್ಲಿರುವ ತಾಯಂದಿರಿಗೆ ಇದು ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಇದು ನಿಮ್ಮ ಗೆಲುವು ಆಗಬೇಕು. ಏಕೆಂದರೆ ಹೆಣ್ಣುಮಕ್ಕಳು ಧೈರ್ಯ ಮಾಡಿ ಮುಂದೆ ಬರುತ್ತಾರೆ. ಯಾರಾದರೂ ಮುಂದೆ ಧೈರ್ಯವಾಗಿ ಮುಂದೆ ಬರುತ್ತಾರೆ ಅಂದ ತಕ್ಷಣ ಅವರನ್ನು ಅಲ್ಲೇ ಹೊಸಕಿ ಹಾಕುವುದಕ್ಕೆ ನೋಡಬಾರದು. ಮಂಡ್ಯ ಜನತೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಒಳ್ಳೆಯ ನಾಯಕರನ್ನು ಆಯ್ಕೆ ಮಾಡಿದ್ದಾರೆ. ಈಗ ಒಂದು ಹೆಣ್ಣು ಬಂದು ನಿಂತಿದ್ದಾರೆ ಇದು ಒಂದು ಕೊಡುಗೆ ಆಗಬೇಕು ಎಂದು ತಿಳಿಸಿದ್ದಾರೆ.

ಶಿವರಾಮೇಗೌಡ ಹೇಳಿದ್ದೇನು?
ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುರೇಶ್‍ಗೌಡರನ್ನು ಕರೆ ತಂದ ರಮ್ಯಾರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ವಿರುದ್ಧ ಕಿಡಿಕಾರಿದ್ದರು.

ಅಂಬರೀಶ್ ನಮ್ಮ ಗೌಡ್ರು ಓಕೆ, ಆದ್ರೆ ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ಬಿಟ್ಟು ಜಾತಿಯವರನ್ನ ಮದುವೆ ಆದಮೇಲೆ ಹೇಗೆ ಗೌಡ್ತಿ ಆಗುತ್ತಾರೆ ಎಂದು ಶಿವರಾಮೇಗೌಡ ಪ್ರಶ್ನೆ ಮಾಡಿದ್ದರು. ನಮ್ಮ ಸಿಎಂ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ದರೂ ಕೂಡ ಇಲ್ಲ ಸಲ್ಲದ ಆರೋಪ ಮಾಡಿದ್ರೆ ಕೈ ಕಟ್ಟಿ ಕುಳಿತು ಕೊಳ್ಳಲು ಆಗುತ್ತಾ? ನಾನು ಗೌಡ್ತಿ ಗೌಡ್ತಿ ಅಂದರೆ, ಯಾವ್ ರೀತಿ ಗೌಡ್ತಿ ಹೇಳಬೇಕಲ್ಲ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *