`ಉತ್ತರಾಯಣ’ ದಿಂದ `ಕೆಜಿಎಫ್’ವರೆಗೆ – ರಾಕಿಂಗ್ ಸ್ಟಾರ್ ಯಶ್ ನಡೆದು ಬಂದ ಹಾದಿ ಇಲ್ಲಿದೆ

Public TV
4 Min Read

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತರಾಗಿದ್ದ ಯಶ್ ಇಂದು ರಾಕಿಂಗ್ ಸ್ಟಾರ್ ಯಶ್ ಆಗಿ ‘ಕೆಜಿಎಫ್’ ಚಿತ್ರದ ಮೂಲಕ ದೇಶ-ವಿದೇಶದಲ್ಲಿ ತಮ್ಮದೇ ಆದ ಹವಾ ಕ್ರಿಯೆಟ್ ಮಾಡಿದ್ದಾರೆ. ಇಂದು ಯಶ್ 33 ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿನಯ ಜರ್ನಿ ಬಗ್ಗೆ ಒಂದು ಸಣ್ಣ ಝಲಕ್ ಇಲ್ಲಿದೆ.

ಯಶ್ 2004ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಉತ್ತರಾಯಣ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ಬಳಿಕ ಅದೇ ವರ್ಷದಲ್ಲಿ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಂದ ಗೋಕುಲ’ ಧಾರಾವಾಹಿಯಲ್ಲಿ ನಟಿಸಿದ್ದರು. ಯಶ್ ಒಟ್ಟು 5 ಧಾರಾವಾಹಿಯಲ್ಲಿ ನಟಿಸಿದ್ದು, ನಂದ ಗೋಕುಲ ಧಾರಾವಾಹಿ ಮೂಲಕವೇ ನಟಿ ರಾಧಿಕಾ ಪಂಡಿತ್ ಬೆಳ್ಳಿತೆರಿಗೆ ಎಂಟ್ರಿ ನೀಡಿದ್ದರು. ರಾಧಿಕಾ ಹಾಗೂ ಯಶ್ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಲೋಕವನ್ನು ಒಟ್ಟಿಗೆ ಪ್ರವೇಶಿಸಿದ್ದರು.

ಕಿರುತೆರೆಯಲ್ಲಿ ನಟಿಸಿದ ಬಳಿಕ ಯಶ್ ಬೆಳ್ಳಿತೆರೆಯಲ್ಲಿ ‘ಜಂಬದ ಹುಡುಗಿ’ ಚಿತ್ರದಲ್ಲಿ ಸಹ ಕಲಾವಿದನಾಗಿ ನಟಿಸಿದ್ದರು. ಬಳಿಕ 2007ರಲ್ಲಿ ನಾಯಕನಟನಾಗಿ ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಳಿಕ ಯಶ್ ರಾಜಧಾನಿ, ಕಿರಾತಕ, ಲಕ್ಕಿ, ಮಾಸ್ಟರ್ ಪೀಸ್, ಡ್ರಾಮಾ, ಮಿ. ಆಂಡ್ ಮಿಸಸ್ ರಾಮಾಚಾರಿ, ಗಜಕೇಸರಿ, ಗೂಗ್ಲಿ, ಕೆಜಿಎಫ್, ಅಂತಹ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಯಶ್ 2008ರಲ್ಲಿ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ್ದರು. 2009ರಲ್ಲಿ ಯಶ್ ಈ ಚಿತ್ರಕ್ಕಾಗಿ ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದರು. ಇದೇ ಸಿನಿಮಾ ಮೂಲಕ ರಾಧಿಕಾ ಪಂಡಿತ್ ಕೂಡ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. 2008ರಲ್ಲಿ ಯಶ್ ಅಭಿನಯದ ಎರಡನೇ ಚಿತ್ರ ‘ರಾಕಿ’ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರ ಅಷ್ಟರ ಮಟ್ಟಿಗೆ ಯಶಸ್ಸು ಕಾಣಲಿಲ್ಲ.

2009ರಲ್ಲಿ ಯಶ್ ‘ಕಳ್ಳರ ಸಂತೆ’ ಹಾಗೂ ‘ಗೋಕುಲ’ ಚಿತ್ರದಲ್ಲಿ ನಟಿಸಿದ್ದರು. ಕಳ್ಳರ ಸಂತೆ ಚಿತ್ರಕ್ಕೆ ಯಶ್ ಅವರಿಗೆ ಹರಿಪ್ರಿಯಾ ನಾಯಕಿಯಾಗಿದ್ದರು. ಗೋಕುಲ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಹಾಗೂ ಪೂಜಾ ಗಾಂಧಿ ಕೂಡ ನಟಿಸಿದ್ದಾರೆ. ಅನಾಥಾಶ್ರಮಲ್ಲಿ ಬೆಳೆದು ಯುವಕರಾಗಿ ಹೇಗೆ ಜೀವನ ಸಾಗಿಸುತ್ತಾರೆ ಎಂಬ ಕತೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಯಶ್ 2010ರಲ್ಲಿ ‘ಮೊದಲಸಲಾ’ ಚಿತ್ರದಲ್ಲಿ ನಟಿಸಿದ್ದರು. ಇದು ರೊಮ್ಯಾಂಟಿಕ್ ಹಾಗೂ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ ಸಿನಿಮಾ. ಈ ಸಿನಿಮಾದಲ್ಲಿ ಯಶ್ ನಾಯಕಿಯನ್ನು ಪ್ರೀತಿಸುತ್ತಿರುತ್ತಾರೆ. ಆದರೆ ನಾಯಕಿ ಯಶ್ ಅವರ ಪ್ರೀತಿಯನ್ನು ಒಪ್ಪಲು ಕುಟುಂಬದವರ ಅನುಮತಿ ಪಡೆಯುತ್ತಾರೆ. ಬಳಿಕ ನಾಯಕಿ ತಂದೆ ಚಿತ್ರದಲ್ಲಿ ಯಶ್ ಬಗ್ಗೆ ತಿಳಿದುಕೊಂಡು ತಮ್ಮ ಮಗಳಿಗೆ ನಾಯಕನನ್ನು ಪ್ರೀತಿಸಲು ಅನುಮತಿ ನೀಡುತ್ತಾರೆ. ಈ ಸಿನಿಮಾದಲ್ಲಿ ಪೋಷಕರ ಮಹತ್ವವನ್ನು ತೋರಿಸಲಾಗಿದೆ.

2011ರಲ್ಲಿ ಯಶ್ ಅಭಿನಯದ ‘ರಾಜಧಾನಿ’ ಹಾಗೂ ‘ಕಿರಾತಕ’ ಚಿತ್ರ ಬಿಡುಗಡೆಯಾಗಿತ್ತು. ರಾಜಧಾನಿ ಚಿತ್ರದಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬೆಂಬಲದಿಂದಾಗಿ ಸಮಾಜದಲ್ಲಿ ಯುವಕರು ಹೇಗೆ ತಮ್ಮ ದಾರಿಯನ್ನು ತಪ್ಪುತ್ತಾರೆಂದು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾವನ್ನು ಹಿಂದಿ ಹಾಗೂ ತೆಲುಗುವಿನಲ್ಲಿ ರಿಮೇಕ್ ಮಾಡಲಾಗಿತ್ತು. ಕಿರಾತಕ ಹಾಸ್ಯ ಪ್ರಧಾನ ಚಿತ್ರ. ತಮಿಳಿನ ‘ಕಲಾವನಿ’ ಚಿತ್ರವನ್ನು ಕನ್ನಡದಲ್ಲಿ ಕಿರಾತಕವಾಗಿ ಬಿಡುಗಡೆಗೊಂಡಿತ್ತು.

2012ರಲ್ಲಿ ಯಶ್ ಅಭಿನಯದ ಮೂರು ಸಿನಿಮಾಗಳು ಬಿಡುಗಡೆಯಾಗಿತ್ತು. ಲಕ್ಕಿ, ಜಾನು ಹಾಗೂ ಡ್ರಾಮಾ ಸಿನಿಮಾ ಬಿಡುಗಡೆ ಆಗಿದ್ದು, ಮೂರು ಸಿನಿಮಾಗಳು ಯಶಸ್ಸು ಕಂಡಿತ್ತು. ಲಕ್ಕಿ ಸಿನಿಮಾದಲ್ಲಿ ಯಶ್ ಅವರಿಗೆ ನಾಯಕಿಯಾಗಿ ರಮ್ಯಾ ನಟಿಸಿದ್ದರು. ಈ ಸಿನಿಮಾವನ್ನು ಸ್ವೀಟಿ ರಾಧಿಕಾ ಅವರು ನಿರ್ಮಿಸಿದ್ದರು. ಇದೇ ವರ್ಷದಲ್ಲಿ ‘ಜಾನು’ ಸಿನಿಮಾ ಬಿಡುಗಡೆಯಾಗಿದ್ದು, ಈ ಸಿನಿಮಾ ಕೂಡ ಯಶಸ್ಸು ಕಂಡಿತ್ತು. ಬಳಿಕ ‘ಡ್ರಾಮಾ’ ಚಿತ್ರದಲ್ಲಿ ಯಶ್ ಹಳ್ಳಿ ಹುಡುಗನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಯಶ್‍ಗೆ ನಾಯಕಿಯಾಗಿ ರಾಧಿಕಾ ಪಂಡಿತ್ ನಟಿಸಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು.

ಯಶ್ 2013ರಲ್ಲಿ ‘ಗೂಗ್ಲಿ’ ಹಾಗೂ ‘ರಾಜಾಹುಲಿ’ ಸಿನಿಮಾದಲ್ಲಿ ನಟಿಸಿದ್ದು, ಎರಡು ಚಿತ್ರ ಹಿಟ್ ಆಗಿತ್ತು. ಈ ಸಿನಿಮಾ ರೊಮ್ಯಾಂಟಿಕ್ ಆಗಿದ್ದು, ಯಶ್ ಅವರಿಗೆ ನಾಯಕಿಯಾಗಿ ಕೃತಿ ಕರಾಬಂಧ ನಟಿಸಿದ್ದರು. ಈ ಸಿನಿಮಾಗೆ ಸೈಮಾ ಪ್ರಶಸ್ತಿ ಲಭಿಸಿದೆ. ರಾಜಾಹುಲಿ ಚಿತ್ರದಲ್ಲಿ ಯಶ್ ಮಂಡ್ಯ ಹುಡುಗನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಾಸ್ಯ ಪ್ರಧಾನ ಸಿನಿಮಾವಾಗಿದ್ದು, ತಮಿಳಿನ ‘ಸುಂದರಪಂದಿಯನ್’ ಚಿತ್ರವನ್ನು ಕನ್ನಡದಲ್ಲಿ ರಾಜಾಹುಲಿ ಆಗಿ ರಿಮೇಕ್ ಮಾಡಲಾಗಿತ್ತು.

ಡ್ರಾಮಾ, ಗೂಗ್ಲಿ ಹಾಗು ರಾಜಾಹುಲಿ ಅಂತಹ ಹಿಟ್ ಸಿನಿಮಾಗಳನ್ನು ನೀಡಿದ ಯಶ್ 2014ರಲ್ಲಿ ‘ಗಜಕೇಸರಿ’ ಹಾಗೂ ‘ಮಿ. ಆಂಡ್ ಮಿಸಸ್ ರಾಮಾಚಾರಿ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಕೂಡ ಯಶ್ ಅವರಿಗೆ ಯಶಸ್ಸು ನೀಡಿತ್ತು. ಗಜಕೇಸರಿ ಚಿತ್ರದಲ್ಲಿ ಯಶ್ ಅವರಿಗೆ ಅಮೂಲ್ಯ ಅವರು ನಾಯಕಿಯಾಗಿ ನಟಿಸಿದ್ದರೆ, ಮಿ. ಆಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ರಾಧಿಕಾ ಪಂಡಿತ್ ಮೂರನೇ ಬಾರಿಗೆ ಯಶ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು.

2015 ಹಾಗೂ 2016ರಲ್ಲಿ ಯಶ್ ನಟಿಸಿದ ‘ಮಾಸ್ಟರ್ ಪೀಸ್’ ಹಾಗೂ ‘ಸಂತು ಸ್ಟ್ರೇಟ್ ಫಾರ್ವಡ್’ ಸಿನಿಮಾ ಬಿಡುಗಡೆಯಾಗಿತ್ತು. ಮಾಸ್ಟರ್ ಪೀಸ್ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಇರುವ ಪಕ್ಕಾ ಕರ್ಮಿಷಿಯಲ್ ಸಿನಿಮಾ. ಈ ಸಿನಿಮಾದಲ್ಲಿ ಯಶ್ ಅವರಿಗೆ ಸಾನ್ವಿ ಶ್ರೀವತ್ಸ ನಾಯಕಿಯಾಗಿ ನಟಿಸಿದ್ದರು. ಸಂತು ಸ್ಟ್ರೇಟ್ ಪಾರ್ವಡ್ ಸಿನಿಮಾ ಆ್ಯಕ್ಷನ್ ಸಿನಿಮಾವಾಗಿದ್ದು, ರಾಧಿಕಾ ಪಂಡಿತ್ ಅವರು ಯಶ್ ಅವರಿಗೆ ನಾಯಕಿಯಾಗಿ ನಾಲ್ಕನೇ ಬಾರಿ ಈ ಚಿತ್ರದಲ್ಲಿ ಜೊತೆಯಾಗಿದ್ದರು.

2018ರಲ್ಲಿ ಯಶ್ ನಟನೆಯ ‘ಕೆಜಿಎಫ್’ ಸಿನಿಮಾ 5 ಭಾಷೆಯಲ್ಲಿ ತೆರೆ ಕಂಡಿತ್ತು. ಐದು ಭಾಷೆಯಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈ ಸಿನಿಮಾ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಹೆಚ್ಚು ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್‍ನಲ್ಲಿ 150 ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಕೆಜಿಎಫ್ ಆಗಿದ್ದು, ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನಟಿಸಿದ ‘ಝೀರೋ’ ಸಿನಿಮಾವನ್ನು ಹಿಂದಿಕ್ಕಿತ್ತು. ಈ ಸಿನಿಮಾಗೆ ಯಶ್‍ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಬಣ್ಣ ಹಚ್ಚಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *