ದೆಹಲಿಯಲ್ಲಿ ರೋಡ್ ಶೋ, ಉದ್ಯಮಿಗಳ ಜೊತೆ ಅಶ್ವತ್ಥನಾರಾಯಣ ವಿಚಾರ ವಿನಿಮಯ

Public TV
3 Min Read

ನವದೆಹಲಿ: ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತಗೊಂಡಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶದ (BTS) 25ನೇ ವರ್ಷದ ರಜತ ಮಹೋತ್ಸವ ಶೃಂಗಸಭೆಯು ನ.16ರಿಂದ 18ರವರೆಗೆ ನಡೆಯಲಿದ್ದು, ಈ ಬಾರಿ 5ಜಿ ತಂತ್ರಜ್ಞಾನ ಸೇರಿದಂತೆ, ಹೈಬ್ರಿಡ್ ಕ್ಲೌಡ್, ಎಡ್ಜ್ ಕಂಪ್ಯೂಟಿಂಗ್, ಫಿನ್‍ಟೆಕ್, ಜಿನೋಮಿಕ್ಸ್ 2.0 ಮುಂತಾದ ಅತ್ಯಾಧುನಿಕ ತಂತ್ರಜ್ಞಾನ ಧಾರೆಗಳನ್ನು ಕುರಿತು ಮತ್ತು ಈ ಕ್ಷೇತ್ರದಲ್ಲಿ ಆಗಬೇಕಾದ ಹೂಡಿಕೆಯ ಬಗ್ಗೆ ಪ್ರಧಾನವಾಗಿ ಗಮನ ಹರಿಸಲಾಗುವುದು ಎಂದು ಐಟಿ ಮತ್ತು ಬಿಟಿ (IT-BT) ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ (Ashwath Narayan) ಹೇಳಿದ್ದಾರೆ.

ಬಿಟಿಎಸ್-25ಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ರೋಡ್‍ಶೋ (Road Show) ಮತ್ತು ಉದ್ಯಮಿಗಳೊಂದಿಗಿನ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ತಂತ್ರಜ್ಞಾನ ಸಮಾವೇಶವು ಈ ಬಾರಿ ಬೆಂಗಳೂರು ಅರಮನೆ ಆವರಣದಲ್ಲಿ ಭೌತಿಕ ಸ್ವರೂಪದಲ್ಲಿ ನಡೆಯಲಿದೆ. ಇಲ್ಲಿ ಭವಿಷ್ಯದ ಸಂಚಾರ ವ್ಯವಸ್ಥೆ, ಜೀನ್ ಎಡಿಟಿಂಗ್, ಬಯೋಫಾರ್ಮಾ, ಕ್ಲೀನ್ ಟೆಕ್ನಾಲಜಿ, ಏರೋಸ್ಪೇಸ್ ಮತ್ತು ಇಎಸ್‍ಜಿ ವಲಯ ಕುರಿತು ಪರಿಣತರು ಮತ್ತು ಉದ್ಯಮಿಗಳು ಚರ್ಚಿಸಲಿದ್ದಾರೆ ಎಂದು ಅವರು ವಿವರಿಸಿದರು.

ಆಧುನಿಕ ತಂತ್ರಜ್ಞಾನ ಧಾರೆಗಳ ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿ ನೆಲೆಯೂರಬೇಕೆನ್ನುವುದು ಸರ್ಕಾರದ ಸಂಕಲ್ಪವಾಗಿದೆ. ಸಮಕಾಲೀನ ಉದ್ದಿಮೆಗಳಿಗೆ ನಾವು ತೆರೆದುಕೊಂಡಿದ್ದು, ಇದಕ್ಕಾಗಿ ಜಗತ್ತಿನ ಪ್ರಮುಖ ಆವಿಷ್ಕಾರ ತಾಣಗಳೊಂದಿಗೆ ಜಾಗತಿಕ ನಾವೀನ್ಯತಾ ಸಹಭಾಗಿತ್ವ ಉಪಕ್ರಮದಡಿ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಉತ್ಸುಕವಾಗಿದ್ದೇವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಸಿದ್ದು ಸೋಲಿಸಲು BJP ರಣತಂತ್ರ – ವರುಣಾದಲ್ಲಿ ವಿಜಯೇಂದ್ರ ಕಣಕ್ಕಿಳಿಸಲು ಪ್ಲ್ಯಾನ್‌

ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಐಟಿ-ಬಿಟಿ ವಲಯದ ಕೊಡುಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ. ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನುಷ್ಠಾನದಿಂದ ಸಂಶೋಧನೆಯ ಹೆಬ್ಬಾಗಿಲು ತೆರೆದಿದೆ. ಈಗ ಉದ್ಯಮಗಳು ಶೈಕ್ಷಣಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವೆ. ಇದು ರಾಜ್ಯದಲ್ಲಿ ಔದ್ಯಮಿಕ ಪ್ರಗತಿಗೆ ನಿರ್ಣಾಯಕ ಶಕ್ತಿಯಾಗಲಿದ್ದು, ಕೌಶಲಪೂರ್ಣ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯವು ನವೋದ್ಯಮ, ಐಟಿ, ಅನಿಮೇಷನ್- ವಿಡಿಯೋ ಗೇಮ್ಸ್-ಕಾಮಿಕ್ಸ್ (AVGC), ಜೈವಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನಫ್ಯಾಕ್ಚರಿಂಗ್ (ESDM) ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮರ್ಪಕ ನೀತಿಗಳನ್ನು ರೂಪಿಸಿದ ಮೊಟ್ಟಮೊದಲ ರಾಜ್ಯವೆನ್ನುವ ಹಿರಿಮೆ ಹೊಂದಿದೆ ಎಂದು ಸಚಿವರು ನುಡಿದರು.

ಕಳೆದ ಆರ್ಥಿಕ ವರ್ಷದಲ್ಲಿ ದೇಶಕ್ಕೆ 83 ಶತಕೋಟಿ ಡಾಲರ್‍ಗಿಂತಲೂ ಹೆಚ್ಚು ನೇರ ವಿದೇಶಿ ಹೂಡಿಕೆ ಹರಿದುಬಂದಿದೆ. ಇದರಲ್ಲಿ ಶೇ.38ರಷ್ಟು ಬಂಡವಾಳವನ್ನು ಸೆಳೆಯುವಲ್ಲಿ ರಾಜ್ಯವು ಯಶಸ್ವಿಯಾಗಿದೆ. ಜೊತೆಗೆ ದೇಶದಲ್ಲಿರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಪೈಕಿ ಶೇ.40ರಷ್ಟು ಕರ್ನಾಟಕದಲ್ಲೇ ನೆಲೆಯೂರಿವೆ. 2025ರ ಹೊತ್ತಿಗೆ ದೇಶದ ಆರ್ಥಿಕತೆಗೆ ರಾಜ್ಯವು 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಇಟ್ಟುಕೊಂಡಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಅವರು ರಾಜ್ಯದಲ್ಲಿನ ಅವಕಾಶಗಳ ಬಗ್ಗೆ ಬೆಳಕುಚೆಲ್ಲಿದರು. ಎಸ್‍ಟಿಪಿಐ ಮಹಾನಿರ್ದೇಶಕ ಅರವಿಂದ್ ಕುಮಾರ್, ಎಸ್‍ಟಿಪಿಐ ಬೆಂಗಳೂರಿನ ನಿರ್ದೇಶಕ ಶೈಲೇಂದ್ರ ಕುಮಾರ್ ತ್ಯಾಗಿ, ಎಂಎಂ ಆಕ್ಟಿವ್ ಮುಖ್ಯಸ್ಥ ಜಗದೀಶ ಪಟ್ಟಣ್ಕರ್ ಮಾತನಾಡಿದರು.

ಬಿಟಿಎಸ್-25ರ ಭಾಗವಾಗಿ ಉದ್ಯಮಿಗಳೊಂದಿಗೆ ನಡೆಸಿದ ಈ ಮುಖಾಮುಖಿಯಲ್ಲಿ 25ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇವರಲ್ಲಿ ಜಿ.ಎಸ್. ಅಡ್ವೈರ್ಸ್ ವಿಕಾಸ್ ಮಲ್ಹೋತ್ರ, ಎಲ್ಸಿನಾದ ಸಂದೀಪ್ ಸಕ್ಸೇನಾ, ಅಪ್ಲೈಡ್ ಮೆಟೀರಿಯಲ್ಸ್‍ನ ಅಶ್ವಿನಿ ಅಗರವಾಲ್, ಎಸ್ ಆಟೋಮೇಟ್ ಸೊಲ್ಯೂಷನ್ಸ್‍ನ ನಕುಲ್ ಶಾರದಾ, ಕೋಪೈನ್ಸ್ ಟೆಕ್ನಾಲಜೀಸ್‍ನ ಹಿಮಾಂಶು ಮೆಂಡಿರತ್ತ, ಎಚ್‍ಸಿಎಲ್‍ನ ಡೇವೇಂದ್ರ ಕುಮಾರ್ ಮತ್ತು ಉಷಾ ಶರ್ಮಾ, ಟೆಲಿ ಪರ್ಫಾರ್ಮೆನ್ಸ್‍ನ ಸಂಜಯ್ ಗುಲಾಟಿ, ರಿವೋಲಟ್ ಪೇಮೆಂಟ್ಸ್ ಇಂಡಿಯಾದ ಅರೀಬ್ ಇಬ್ರಾಹಿಂ, ಒರ್ಯಾಕಲ್‍ನ ಜತಿನ್ ಸಿಂಧಿ, ಎಲ್ ಅಂಡ್ ಟಿ ಕಂಪನಿಯ ಉಮಾಕಾಂತ್ ತ್ರಿಪಾಠಿ ಮುಂತಾದವರಿದ್ದರು. ಉಳಿದಂತೆ ಉದ್ಯಮಿಗಳಾದ ರೀತೂ ಗಾರ್ಗ್, ಪೂಜಾ ಮಾಲಕಾರ್, ವರುಣ್ ದೇಶಪಾಂಡೆ, ಅಮನ್ ಜೈನ್, ಪುನೀತ್ ಡಾಂಗ್, ಅನಿಲ್ ಚೌಹಾಣ್, ಸ್ಪರ್ಶ್ ಅಗರವಾಲ್, ರಾಹುಲ್ ಬ್ಯಾನರ್ಜಿ, ಅಮಿತಾಭ್ ಮಿಶ್ರ ಕೂಡ ಸಚಿವರ ಜತೆಗಿನ ಈ ಸಭೆಯಲ್ಲಿ ಇದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *