ಚಾಮರಾಜನಗರ: ಬಿಜೆಪಿಯಿಂದ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಗುಂಡಿ ಅಭಿಯಾನ ಹಿನ್ನೆಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಕೂಡ ಕ್ಷೇತ್ರವಾರು ಬಿಜೆಪಿಯಿಂದ ಗುಂಡಿ ಮುಚ್ಚಿ ಅಭಿಯಾನ ನಡೆಯಿತು.
ಹನೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಕೊಳ್ಳೇಗಾಲದ ಮಧುವನಹಳ್ಳಿಯಿಂದ ಒಡೆಯರ್ ಪಾಳ್ಯ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಗುಂಡಿಮಯವಾಗಿದೆ ಎಂದು ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗುಂಡ್ಲುಪೇಟೆ ಕ್ಷೇತ್ರದಲ್ಲೂ ಕೂಡ ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ನೇತೃತ್ವದಲ್ಲಿ ಗುಂಡ್ಲುಪೇಟೆ ಪಟ್ಟಣದ ಕೊಡಿಹಳ್ಳಿ ಸರ್ಕಲ್ ಬಳಿ ಹೆದ್ದಾರಿ ತಡೆದು ಪ್ರತಿಭಟಿಸಿ ಮಣ್ಣಿನ ಮೂಲಕ ಗುಂಡಿ ಮುಚ್ಚಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ವಿರುದ್ಧ ಧಿಕ್ಕಾರ ಕೂಗಿ ಗುಂಡಿ ಮುಚ್ಚಿ ಕ್ಷೇತ್ರದ ಎಲ್ಲ ಕಡೆಯೂ ಗುಂಡಿ ಮುಚ್ಚುವಂತೆ ಆಗ್ರಹಿಸಿದರು.
ಸ್ಥಳೀಯ ಶಾಸಕ ಗಣೇಶ್ ಪ್ರಸಾದ್ ಅವರ ಊರು ಹಾಲಹಳ್ಳಿಗೆ ಪದೇ ಪದೆ ರಸ್ತೆ ಮಾಡಿಸುತ್ತಿದ್ದಾರೆ. ಆದರೆ, ಪಕ್ಕದ ಗ್ರಾಮಗಳಿಗೆ ರಸ್ತೆ ಭಾಗ್ಯ ಕಲ್ಪಿಸಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು.