ಸಂಜೆಯಾಗ್ತಿದ್ದಂತೆ ಬೆಂಗಳೂರಲ್ಲಿ ವರುಣನ ಅಬ್ಬರ- ಮೂರು ದಿನ ಇರಲಿದೆ ಮಳೆರಾಯನ ಆಟ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ವರುಣನ ಅಬ್ಬರ ಜೋರಾಗಿದೆ. ಹಳದಿ ಅಲರ್ಟ್ ನಂತೆಯೇ ಮಳೆರಾಯ ಗುಡುಗು-ಮಿಂಚಿನಿಂದ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮಲ್ಲೇಶ್ವರಂ, ಯಶವಂತಪುರ, ಕಾರ್ಪೊರೇಷನ್, ಗೊರಗುಂಟೆಪಾಳ್ಯ, ವಿಧಾನಸೌಧ, ರಾಜಕುಮಾರ್ ಸಮಾಧಿ ರೋಡ್, ಸುಂಕದಕಟ್ಟೆ, ಬಿಇಎಲ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆ ಜೋರು ಮಳೆಯಾಗಿದೆ. ಆನೇಕಲ್‍ನಲ್ಲೂ ಮಳೆ ಅಬ್ಬರಿಸಿದೆ. ಸಂಜೆ ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.

ಶಿವಾನಂದ ಸರ್ಕಲ್‍ನಲ್ಲಿ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದವು. ಸವಾರರು ಬೈಕ್ ಬಿಟ್ಟು ಪ್ಲೈಓವರ್, ಸ್ಕೈವಾಕ್, ಮರದಡಿ ನಿಂತು ರಕ್ಷಣೆ ಪಡೆದರು. ಬಳ್ಳಾರಿ ರಸ್ತೆಯ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ಬಳಿ ರಸ್ತೆಯಲ್ಲಿ ಕೆರೆಯಂತೆ ಹರಿಯಿತು. ಮೆಜೆಸ್ಟಿಕ್ ಟು ವಿಜಯನಗರ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಓಕುಳಿಪುರಂ ಬಳಿ ಟ್ರಾಫಿಕ್‍ಗೆ ವಾಹನ ಸವಾರರು ಪರದಾಡಿದರು. ಬಾಣಸವಾಡಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ವಾಹನ ಜಖಂ ಆಯ್ತು. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಷ್ಟೇ ಅಲ್ಲ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿದೆ. ಕಲಬುರಗಿ, ಯಾದಗಿರಿಯಲ್ಲಿ ಸಿಡಿಲಿಗೆ ದಂಪತಿ ಸೇರಿ ಮೂವರು ಬಲಿಯಾಗಿದ್ದಾರೆ. ಹಾವೇರಿಯ ಹಾನಗಲ್‍ನಲ್ಲಿ ಮೂವರು ಶಾಲಾ ವಿದ್ಯಾರ್ಥಿನಿಯರು ಚರಂಡಿಗೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಎಲ್ಲರನ್ನು ರಕ್ಷಿಸಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮಳೆ ಆಗುತ್ತಿದೆ. ಸುಮಾರು 7 ಸೆಂಟಿ ಮೀಟರ್ ನಿಂದ 11 ಸೆಂಟಿ ಮೀಟರ್ ನಷ್ಟು ಮಳೆ ಆಗುವ ಸಾಧ್ಯತೆ ಇದ್ದು, ಜುಲೈ 21ರವರೆಗೆ ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಒಟ್ಟಿನಲ್ಲಿ ಕಳೆದ 4 ದಿನಗಳಿಂದ ಸುರಿಯುತ್ತಿರುವ ಸಂಜೆ ಮಳೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದು, ಸಂಜೆ ಹೊತ್ತಿಗೆ ಮನೆ ಸೇರಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *